ಮಂಗಳೂರು,ಎಪ್ರಿಲ್. 23 : ಸೆಂಟರ್ ಫಾರ್ ಇಂಟಗ್ರೇಟೆಡ್ ಲರ್ನಿಂಗ್ (ಸಿಐಎಲ್) ಸಂಸ್ಥೆಯು ಫ್ಯೂಚರ್ ಗ್ರೂಪಿನ ಬಿಗ್ ಬಜಾರ್, ಎಫ್ ಬಿ ಬಿ ಮತ್ತು ಟೀಂ ಪೃಥ್ವಿ ಸಹಯೋಗದೊಂದಿಗೆ ಬುಧವಾರ ಏಪ್ರಿಲ್ 22ರಂದು ನಗರದ ಅನಾಧೀನ ಪಾರ್ಕಿನಲ್ಲಿ ಗಿಡ ನೆಡುವ ಮತ್ತು ಮೆರವಣಿಗೆ ನಡೆಸುವ ಮೂಲಕ ವಿಶ್ವ ಭೂ ದಿನಾಚರಣೆ ಅಂಗವಾಗಿ ಜನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಕೊಡಿಯಾಲಬೈಲ್ ಜಿಲ್ಲಾ ಶಿಕ್ಷಕರ ತರಬೇತಿ ಕೇಂದ್ರ (ಡಯಟ್) ಸೆಂಟರಿನಲ್ಲಿ ಸೇರಿದ ಸಿಐಎಲ್ ತಂಡದ ಸದಸ್ಯರು ಕರಂಗಲಪಾಡಿಯ ಒಂದು ನಿರ್ವಹಣೆ ಇಲ್ಲದ ಪಾರ್ಕಿನಲ್ಲಿ ಸಾಂಕೇತಿಕವಾಗಿ ಗಿಡವೊಂದನ್ನು ನೆಟ್ಟು ಮಂಗಳೂರು ಮಹಾನಗರಪಾಲಿಕೆ ನಗರದಲ್ಲಿರುವ ಇಂತಹ ಪಾರ್ಕುಗಳನ್ನು ಪುನಶ್ಚೇತನಗೊಳಿಸಿ ನಗರದ ಹಸಿರು ತಾಣಗಳನ್ನು ಅಭಿವೃದ್ಧಿಗೊಳಿಸುವಂತೆ ಒತ್ತಾಯಿಸಿದರು. ಸಿಐಎಲ್ ವಿದ್ಯಾರ್ಥಿಗಳಾದ ತನ್ವಿ ಮತ್ತು ಅಪರ್ಣಾ ಭೂ ದಿನಾಚರಣೆ ಮಹತ್ವದ ಬಗ್ಗೆ ಮಾತನಾಡಿದರು. ಬಿಗ್ ಬಜಾರ್ ಮಂಗಳೂರು ಸ್ಟೋರ್ ಮ್ಯಾನೇಜರ್ ನಿಖಿಲ್ ಕುಮ್ಟಾಕರ್ ಅವರು ಸಂಸ್ಥೆಯ ಸಾರ್ವಜನಿಕ ಹಿತಾಸಕ್ತಿಯ ಚಟುವಟಿಕೆಗಳ ವಿವರಿಸಿದರು. ಮಕ್ಕಳು ಮತ್ತು ಯುವಕರು ಪರಿಸರ ಸಂರಕ್ಷಣೆಯನ್ನು ಗಂಭೀರವಾಗಿ ಪರಿಗಣಿಸಿ ಭೂಮಿ ತಾಯಿಯನ್ನು ಸಂರಕ್ಷಿಸುವ ಚಟುವಟಿಕೆಗಳಲ್ಲಿ ಸಿಐಎಲ್ ಸಂಚಾಲಕ ಶ್ರೀನಿವಾಸನ್ ನಂದಗೋಪಾಲ್ ಹೇಳಿದರು.
ಬಿಗ್ ಬಜಾರ್ ತನ್ನ ಸಿಎಸ್ಆರ್ ಕಾರ್ಯಕ್ರಮ ಅಂಗವಾಗಿ ಭೂ ದಿನಾಚರಣೆಗೆ ಸಹಯೋಗ ನೀಡಿದ್ದು, ಸಿಐಎಲ್ ನಿರಂತರವಾಗಿ ಮಕ್ಕಳಲ್ಲಿ ಸಾಮಾಜಿಕ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುತ್ತದೆ. ಸಿಐಎಲ್ ಯೋಜನೆ ಸಂಯೋಜಕ ನವೀನ್ ಎ.ಡಿ., ವಿನೋದ್ ಡಿ ಸೋಜ, ಅವೆಲಿನ್ ಸಿಕ್ವೇರ, ಸಾಗರ ಬಿ.ಎಸ್., ಹೆನಿಟಾ ಲೋಬೊ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.