ಮಂಗಳೂರು, ಏ.23: ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿನಿ ಬಗ್ಗೆ ಫೇಸ್‍ಬುಕ್‍ನಲ್ಲಿ ಅವಹೇಳನಕಾರಿಯಾಗಿ ಬರೆದ ಮಂಗಳೂರು `ಮುಸ್ಲಿಂ ಕುಡ್ಲ’ ಹಿಂದಿರುವ ವ್ಯಕ್ತಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಬಿವಿಪಿ ಆಗ್ರಹಿಸಿದೆ.
ಮಂಗಳೂರು ಮುಸ್ಲಿಂ ಕುಡ್ಲ ಎನ್ನುವ ಫೇಸ್‍ಬುಕ್ ಖಾತೆಯಲ್ಲಿ `ಅನಾಮಧೇಯ ಮೊಬೈಲ್ ಸಂಖ್ಯೆಯಿಂದ ಬಂದ ಮೆಸೇಜ್‍ನ್ನು ನೋಡಿ ಅದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಬರೆಯಲಾಗಿತ್ತು. ಈ ರೀತಿ ಅಸಭ್ಯವಾಗಿ ಬರೆದಿರುವ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ, ಇತ್ತೀಚೆಗೆ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿದ್ದು ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿನಿಯರ ವಿರುದ್ಧ ಅಪಮಾನಕಾರಿಯಾಗಿ ಬರೆದು ವಿದ್ಯಾರ್ಥಿನಿಯರ ಆತ್ಮಸ್ಥೈರ್ಯ ಕುಸಿಯುವಂತೆ ಮಾಡುತ್ತಿದೆ. ಈ ರೀತಿಯ ಪ್ರಕರಣಗಳಿಂದ ಅನೇಕ ವಿದ್ಯಾರ್ಥಿನಿಯರ ಪ್ರಾಣ ಹಾನಿಯಾದ ಘಟನೆಗಳೂ ನಮ್ಮ ಮುಂದಿದೆ.
ಕೆಲವು ತಿಂಗಳುಗಳ ಹಿಂದೆ ಮಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿನಿಯರ ನಕಲಿ ಫೇಸ್‍ಬುಕ್ ಖಾತೆ ರಚಿಸಿ ಅದರಲ್ಲಿ ವಿದ್ಯಾರ್ಥಿನಿಯರ ಬಗ್ಗೆ ಅವಹೇಳನಕಾರಿಯಾಗಿ ಬರೆಯಲಾಗಿತ್ತು, ಎಬಿವಿಪಿ ಆ ಸಂದರ್ಭದಲ್ಲಿ ಬೃಹತ್ ಹೋರಾಟ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿತ್ತು. ಆದರೆ, ಅವರ ವಿರುದ್ದ ಕ್ರಮಕೈಗೊಳ್ಳದೆ ಇರುವುದರ ಪರಿಣಾಮ ಈ ರೀತಿಯ ಘಟನೆ ಮರುಕಳಿಸಿದೆ. ಹಾಗಾಗಿ ಪೊಲೀಸರು ಈ ಪ್ರಕರಣದ ಹಿಂದಿರುವ ವ್ಯಕ್ತಿಯನ್ನು ಬಂಧಿಸಿ ಶಿಕ್ಷಗೆ ಒಳಪಡಿಸಬೇಕೆಂದು ಎಬಿವಿಪಿ ಆಗ್ರಹಿಸಿದೆ.