ಕುಂದಾಪುರ: ಮೇ4 ಸೋಮವಾರ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಂದ ವಾರಾಹಿ ನೀರು ಹರಿಯುವಿಕೆಗೆ ಅಧಿಕೃತ ಚಾಲನೆ ನೀಡಲಾಗುತ್ತದೆ ಎಂದು ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಶನಿವಾರ ಹೇಳಿದ್ದಾರೆ.
ಶನಿವಾರ ಸಂಜೆ ಸಿದ್ಧಾಪುರದ ಸರ್ಕಾರೀ ಪ್ರೌಢಶಾಲೆಯಲ್ಲಿ ಕರೆಯಲಾದ ಸುದ್ಧಿಗೋಷ್ಟಿಯಲ್ಲಿ ಮಾತನಾಡುತ್ತಾ, ರಾಜ್ಯ ಸರ್ಕಾರ ಕೃಷಿಕರ, ರೈತರ ಪರ ಕೆಲಸ ಮಾಡುತ್ತಿದೆ. ಕಳೆದ ಮೂವತ್ತೆರಡು ವರ್ಷಗಳಿಂದ ನಿರಾಶೆಗೊಳಗಾಗಿದ್ದ ಫಲಾನುಭವಿ ಕೃಷಿಕರಿಗೆ ವಾರಾಹಿ ಕಾಲುವೆ ಮೂಲಕ ಕೃಷಿ ಯೋಗ್ಯ ಭೂಮಿಗಳಿಗೆ ನೀರು ಹರಿಸಲಾಗುತ್ತದೆ. ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ವಾರಾಹಿ ಕಾಲುವೆಯ ಎಡದಂಡೆಯಲ್ಲಿ 30 ಕಿ.ಮೀ ಹಾಗೂ ಬಲದಂಡೆಯಲ್ಲಿ 18.72 ಕಿ.ಮೀ. ಉದ್ದಕ್ಕೆ ನೀರು ಹರಿಯಲಿದೆ ಎಂದರು.
ವಾರಾಹಿಯಲ್ಲಿನ ಅವ್ಯವವಹಾರದ ಬಗ್ಗೆ ಸಿ.ಎಂ. ಗಮನ ಸೆಳೆಯುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮೊದಲು ನೀರು ಪಡೆಯುವ ಉದ್ಧೇಶ ನಮ್ಮದು. ವಾರಾಹಿ ಕಾಲುವೆಗಳ ನಿರ್ಮಾಣದಲ್ಲಿ ಕಳಪೆಯಾಗಿರುವ ಬಗ್ಗೆ ಮೇಲ್ನೋಟಕ್ಕೆ ಸಾಬೀತು ಮಾಡಲಾಗದು ಎಂದ ಅವರು, ನಿರಂತರ ಒಂದು ವರ್ಷದ ಅವಧಿಯಲ್ಲಿ ಎಲ್ಲಿ ಸಮಸ್ಯೆಗಳುಂಟಾಗುತ್ತದೆಯೋ ಅಲ್ಲಿ ಅದನ್ನು ಸರಿಪಡಿಸುವ ಕಾರ್ಯಗಳೂ ನಡೆಯಲಿದೆ. ನೀರೇ ಹರಿಯದೇ ಸಮಸ್ಯೆ ಇದೆ ಎನ್ನುವುದು ಸರಿಯಲ್ಲ. ಅವ್ಯವವಹಾರವಾಗಿದೆ ಎಂಬ ಆರೋಪದ ಬಗ್ಗೆ ಸರಕಾರ ಹಾಗೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದರು.
ಮುಖ್ಯಮಂತ್ರಿಗಳು ಚಾಲನೆ ನೀಡಿದ ಬಳಿಕ ಎರಡನೇ ಹಂತದ ಕಾಮಗಾರಿ ಆರಂಭವಾಗಲಿದ್ದು, ಸ್ಥಳೀಯವಾಗಿ ಕಬ್ಬು ಬೆಳೆಯುವವರೂ ಸೇರಿದಂತೆ ಕೃಷಿಕರಿಗೆ ಅನುಕೂಲ ಕಲ್ಪಿಸಲಾಗುತ್ತದೆ. ಸಕ್ಕರೆ ಕಾರ್ಖಾನೆಯನ್ನು ಊರ್ಜಿತಗೊಳಿಸುವುದೂ ವಾರಾಹಿ ನೀರಾವರಿಯ ಯೋಜನೆಯಾಗಿದ್ದು, ಆ ನಿಟ್ಟಿನಲ್ಲಿಯೂ ಪ್ರಗತಿ ಸಾಧಿಸಲಾಗುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಕಾಂಗ್ರೆಸ್ ಮುಖಂಡ ಎಂ.ಎ.ಗಫೂರ್, ವಾರಾಹಿ ಯೋಜನೆಯ ಪ್ರಭಾರ ಮುಖ್ಯ ಅಭಿಯಂತರ ನಟರಾಜು, ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಜಯಶೀಲ ಶೆಟ್ಟಿ ಉಪಸ್ಥಿತರಿದ್ದರು. ಸಂಪಿಗೇಡಿ ಸಂಜೀವ ಶೆಟ್ಟಿ ಸ್ವಾಗತಿಸಿ ವಂದಿಸಿದರು.
ಸಜ್ಜುಗೊಂಡ ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿಗಳು ಸಿದ್ಧಾಪುರಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಸಿದ್ದಾಪುರ ಸಕಲ ಸನ್ನದ್ಧಗೊಳ್ಳುತ್ತಿದೆ. ಸುಮಾರು ಇಪ್ಪತ್ತೈದು ಸಾವಿರ ಜನ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು ಸಿದ್ಧಾಪುರದ ಸರ್ಕಾರೀ ಪ್ರೌಢಶಾಲೆಯ ಮೈದಾನದಲ್ಲಿ ಬೃಹತ್ ಶಾಮೀಯಾನ ಹಾಕಲಾಗುತ್ತಿದೆ. ಎಲ್ಲೆಲ್ಲಿ ಬಂದೋಬಸ್ತ್ ನಿರ್ವಹಿಸಬೇಕು ಎನ್ನುವ ದೃಷ್ಟಿಯಲ್ಲಿ ಪೊಲೀಸರು ಸಿದ್ಧಾಪುರದಲ್ಲಿ ಬೀಡುಬಿಟ್ಟಿದ್ದಾರೆ. ಕುಂದಾಪುರ ಡಿವೈಎಸ್ಪಿ ಎಂ. ಮಂಜುನಾಥ ಶೆಟ್ಟಿ, ವೃತ್ತ ನಿರೀಕ್ಷ ಪಿ.ಎಂ.ದಿವಾಕರ, ಉಪ ನಿರೀಕ್ಷಕ ದೇಜಪ್ಪ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್‌ಗೆ ಸಿದ್ಧತೆಗಳು ನಡೆದಿದೆ. ಪ್ರತ್ಯೇಕ ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇಡೀ ಸಿದ್ಧಾಪುರ ಪೇಟೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕಟೌಟ್‌ಗಳು ರಾರಾಜಿಸುತ್ತಿವೆ. ಸರ್ಕಾರದ ವಿವಿಧ ಸವಲತ್ತು ವಿತರಣೆಗಳಿಗಾಗಿ ಪ್ರೌಢಶಾಲೆಯ ವಿವಿಧ ಕೊಠಡಿಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಕುಡಿಯುವ ನೀರು, ಉಪಾಹಾರಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ವಿಐಪಿಗಳ ವಾಹನ, ಬಸ್ಸು, ಕಾರು, ಮ್ಯಾಕ್ಸಿ ಕ್ಯಾಬ್, ಆಟೋ, ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಹೊಸಂಗಡಿಯಲ್ಲಿ ಮುಖ್ಯಮಂತ್ರಿಗಳಿಗೆ ಇಳಿಯಲು ಅನುಕೂಲವಾಗುವಂತೆ ಹೆಲಿಪ್ಯಾಡ್ ನಿರ್ಮಾಣಗೊಂಡಿದ್ದು, ಅಲ್ಲಿಂದ ಮುಖ್ಯಮಂತ್ರಿಗಳನ್ನು ಕರೆತರಲು ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲಾಗಿದೆ ಎಂದರು. ಅಲ್ಲದೇ ಕಾಮಗಾರಿಗೆ ಚಾಲನೆ ನೀಡಲು ಅನುಕೂಲವಾಗುವಂತೆ ವಾರಾಹಿ ರಸ್ತೆಗೆ ಡಾಮರೀಕರಣವನ್ನೂ ನಡೆಸಲಾಗುತ್ತಿದೆ. ಆಗಮಿಸುವ ಎಲ್ಲರಿಗೂ ಕುಡಿಯುವ ನೀರು ಹಾಗೂ ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿದೆ.
– ಕೆ. ಗೋಪಾಲ ಪೂಜಾರಿ (ಬೈಂದೂರು ಶಾಸಕರು)