ಮಂಗಳೂರು : ತುಳು ಚಿತ್ರರಂಗದಲ್ಲಿ ವಿಭಿನ್ನ ಪ್ರಯತ್ನಗಳು ನಡೆಯುತ್ತಾ ಇವೆ ಅನ್ನೋದಕ್ಕೆ ‘ಎಕ್ಕಸಕ’ನ ಚಿತ್ರ ತಾಜಾ ಉದಾಹರಣೆ. ಇತ್ತೀಚೆಗೆ ತೆರೆಕಂಡ ಮೂರು ಮೂರು ತುಳು ಚಿತ್ರಗಳು ಶತದಿನದ ಪ್ರದರ್ಶನ ಕಂಡಿರುವ ಈ ಸಂದರ್ಭದಲ್ಲಿ ‘ಎಕ್ಕಸಕ’ ತುಳು ಸಿನಿಮಾ ಕ್ಷೇತ್ರಕ್ಕೆ ಹೊಸ ಭಾಷ್ಯ ಬರೆಯಲು ಮುಂದಾಗಿದೆ ಎನ್ನಲಡ್ಡಿಯಿಲ್ಲ. ಪ್ರಾರಂಭದಿಂದ ಅಂತ್ಯದವರೆಗೆ ಹಾಸ್ಯದ ರಸದೌತಣವನ್ನು ನೀಡುವ ಎಕ್ಕಸಕ ಸಾಮಾಜಿಕ ಸಂದೇಶವನ್ನು ನೀಡುವ ಜೊತೆಗೆ ಚಿತ್ರಪ್ರೇಮಿಗಳ ಮನಗೆಲ್ಲುವಲ್ಲಿ ಯಶಸ್ಸು ಕಂಡಿದೆ. ಚಿತ್ರದಲ್ಲಿನ ದುರಂತ ಪ್ರೇಮಕಥೆ ಸಿನಿಮಾ ಥಿಯೇಟರ್ ನಿಂದ ಹೊರಬಂದ ನಂತರವೂ ಪ್ರೇಕ್ಷಕನನ್ನು ಕಾಡುವುದಲ್ಲದೆ ಸಾಮಾಜಿಕ ಸಂದೇಶವನ್ನು ನೀಡುತ್ತದೆ.
ತುಳು ರಂಗಭೂಮಿಯ ಖ್ಯಾತ ಕಲಾವಿದರ ಜೊತೆ ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರನ್ನು ಬಳಸಿಕೊಂಡು ನಿರ್ಮಿಸಲಾದ ಚಿತ್ರ ಪಕ್ಕಾ ಲೋಕಲ್ ಆಗಿದ್ದು, ಕುಡ್ಲದ ತಾಜಾ ಕಂಪನ್ನು ಪ್ರೇಕ್ಷಕನಿಗೆ ಉಣಬಡಿಸುತ್ತದೆ. ಚಿತ್ರದಲ್ಲಿ ತುಳುನಾಡಿನ ಕೆಲವೊಂದು ಆಡುನುಡಿಗಳನ್ನು ಹಾಗೇ ಅಳವಡಿಸಿರುವುದು ಚಿತ್ರದ ಹೈಲೈಟ್ಸ್ ಕೂಡಾ ಆಗಿದೆ. ಚಿತ್ರದ ನಾಯಕ ಹಿತೇಶ್ ನಾಯಕ್, ನಾಯಕಿ ಸೋನಲ್ ಮೊಂತೇರೋ ಎಲ್ಲೂ ತಮ್ಮ ಮೊದಲನೇ ಚಿತ್ರ ಎಂಬ ಗುಟ್ಟನ್ನು ಬಿಟ್ಟುಕೊಡದೆ ಸಹಜವಾಗಿ ಅಭಿನಯಿಸಿರುವುದು ಚಿತ್ರದ ಯಶಸ್ಸಿನ ಸೂತ್ರ ಎನ್ನಲಡ್ಡಿಯಿಲ್ಲ.
ಇನ್ನು ಚಿತ್ರದಲ್ಲಿ ನಟಿಸಿರುವ ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರಾದ ಅಚ್ಯುತ, ಟೆನ್ನಿಸ್ ಕೃಷ್ಣ, ಸುಧಾ ಬೆಳವಾಡಿ, ಪದ್ಮಜಾ ರಾವ್ ಅವರು ತಮಗೆ ವಹಿಸಿಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ಸಫಲರಾಗಿದ್ದಾರೆ. ಇನ್ನು ನಾಯಕನ ತಂದೆಯ ಪಾತ್ರಧಾರಿಯಾಗಿರುವ ಉಮಾನಾಥ ಕೋಟ್ಯಾನ್ ಅವರು ಯಾವ ಕಲಾವಿದನಿಗೂ ಕಮ್ಮಿಯಿಲ್ಲದಂತೆ ಮಿಂಚಿರುವುದು ಅವರ ಪ್ರತಿಭೆಗೆ ಸಾಕ್ಷಿಯಾಗಿದೆ.
ಮಾಡಲು ಉದ್ಯೋಗವಿಲ್ಲದೆ ಅವರಿವರಿಗೆ ಟೋಪಿ ಹಾಕೋದನ್ನೇ ಫುಲ್ ಟೈಂ ಡ್ಯೂಟಿ ಮಾಡಿಕೊಂಡಿರುವ ಗೋಪಾಲನ ಪಾತ್ರಧಾರಿ ನವೀನ್ ಡಿ. ಪಡೀಲ್ ಅವರು ಈವರೆಗೆ ಮಾಡದ ಪಾತ್ರದಲ್ಲಿ ಸಖತ್ ಮಿಂಚಿದ್ದಾರೆ ಮಾತ್ರವಲ್ಲದೆ ಅವರಾಡುವ ಪ್ರತೀ ಮಾತು ಕೂಡಾ ಪ್ರೇಕ್ಷಕನನ್ನು ನಗೆಗಡಲಲ್ಲಿ ತೇಲಿಸುತ್ತದೆ.
ಈಗಾಗಲೇ ಹಲವು ತುಳು ಸಿನಿಮಾಗಳಲ್ಲಿ ನಟಿಸಿರುವ ನಾಟಕ ಕಲಾವಿದರಾದ ಭೋಜರಾಜ ವಾಮಂಜೂರು, ಸುಂದರ್ ರೈ ಮಂದಾರ, ಅರವಿಂದ ಬೋಳಾರ್, ಪ್ರಸನ್ನ ಬೈಲೂರು, ಸಂದೀಪ್ ಶೆಟ್ಟಿ ಅವರ ಪಾತ್ರಗಳೂ ನಗೆಯುಕ್ಕಿಸುವಲ್ಲಿ ಸಫಲತೆ ಕಂಡಿದೆ. ಇವರ ಜೊತೆಗೆ ದಶಾವತಾರಕ್ಕೂ ಹೆಚ್ಚು ಪಾತ್ರಗಳಲ್ಲಿ ಬಂದುಹೋಗುವ ಇನ್ನೊಬ್ಬ ರಂಗ ಕಲಾವಿದ ಸತೀಶ್ ಬಂದಲೆ ಅವರ ‘ನಮ ಇತ್ತೆ ಮೂಲೇ… ಆ ಬೇಲೆ ಬುಡಿಯೆ… ಕಿರಿಕಿರಿ ಏರೆಗ್ ಅವು ಮಾರಾಯ್ರೇ…’ ಡೈಲಾಗ್ ಪ್ರೇಕ್ಷಕ ಥಿಯೇಟರ್ ನಿಂದ ಮನೆಗೆ ಬಂದರೂ ನೆನಪಿಡುವಂತೆ ಮಾಡಿದೆ.
ಚಿತ್ರದಲ್ಲಿ ನಾಯಕ, ನಾಯಕಿಯಷ್ಟೇ ಪ್ರಾಧಾನ್ಯತೆ ಕಿರುತೆರೆ ಕಲಾವಿದ ಶೋಭರಾಜ್ ಪಾವೂರು ಹಾಗೂ ಚೈತ್ರ ಶೆಟ್ಟಿ ಅವರಿಗೂ ಇದೆ. ಕಾಲೇಜಿಗೆ ಹೋಗುವ ಇಂದಿನ ಕಾಲದ ಮಾಡರ್ನ್ ಹುಡುಗಿಯಾಗಿ ಚೈತ್ರ ಬಬ್ಲಿ ಕ್ಯಾರೆಕ್ಟರ್‌ಗೆ ಹೊಂದಿಕೊಂಡರೆ, ಶೋಭರಾಜ್ ತಮ್ಮದೇ ಶೈಲಿಯಲ್ಲಿ ಗಮನ ಸೆಳೆಯುವಲ್ಲಿ ಸಕ್ಸಸ್ ಆಗುತ್ತಾರೆ. ಇನ್ನು ಚಿತ್ರದಲ್ಲಿ ಬಂದು ಹೋಗುವ ಪಾತ್ರಗಳಾದರೂ ‘ಪಂಚರಂಗಿ ಪೋಂ ಪೋಂ’ ಧಾರಾವಾಹಿ ಖ್ಯಾತಿಯ ರಾಘವೇಂದ್ರ ರೈ, ರವಿಕುಮಾರ್ ಸುರತ್ಕಲ್, ಶೋಭಾ ರೈ ಅವರ ಪಾತ್ರಗಳೂ ಮುದ ನೀಡುತ್ತವೆ.
ಎಕ್ಕಸಕ ಚಿತ್ರದ ಕೆಮರಾಮ್ಯಾನ್ ಕೃಷ್ಣ ಸಾರಥಿ ಅವರಿಗೂ ಚಿತ್ರದ ಯಶಸ್ಸಿನ ಪಾಲು ಸಲ್ಲಬೇಕು. ಯಾಕೆಂದರೆ ಮಂಗಳೂರಿನ ಬೀದಿಗಳೂ ಎಷ್ಟು ಚೆನ್ನಾಗಿ ಕಾಣಬಲ್ಲವು ಅನ್ನೋದು ಅವರ ಕೆಮರಾ ಕೈಚಳಕದಲ್ಲೇ ತಿಳಿಯುತ್ತೆ. ಇನ್ನು ಚಿತ್ರಕ್ಕೆ ಸಂಗೀತ ರವಿ ಬಸ್ರೂರು ಅವರದ್ದು. ಯುವ ಸಂಗೀತ ನಿರ್ದೇಶಕ ರವಿ ಅವರು ಕಂಪೋಸ್ ಮಾಡಿರುವ ಹಾಡುಗಳು ಅಪ್ಪಟ ತುಳು ಶೈಲಿಯಲ್ಲಿದ್ದು, ಕರಾವಳಿಯ ಹುಲಿವೇಷದ ಟ್ಯೂನ್ ಬಳಸಿರುವುದು ಕಿವಿಗೆ ಇಂಪು ನೀಡುತ್ತದೆ.
ರಂಗಕರ್ಮಿ, ಲಕುಮಿ ತಂಡದ ವ್ಯವಸ್ಥಾಪಕ ಲಯನ್ ಕಿಶೋರ್ ಡಿ. ಶೆಟ್ಟಿ ಅವರು ತಮ್ಮ ಜೊತೆ ಚಂದ್ರಹಾಸ ಶೆಟ್ಟಿ ಹಾಗೂ ಗಿರೀಶ್ ಶೆಟ್ಟಿ ಎಂಬ ಯುವ ಉದ್ಯಮಿಗಳನ್ನು ಒಗ್ಗೂಡಿಸಿ ಚಿತ್ರ ಮಾಡುತ್ತಿದ್ದಾರೆ ಎಂಬ ಸುದ್ದಿಯೇ ತುಳು ಚಿತ್ರಪ್ರೇಮಿಗಳಲ್ಲಿ ಹೊಸ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಆ ನಿರೀಕ್ಷೆ ಎಕ್ಕಸಕ ಚಿತ್ರ ಬಿಡುಗಡೆಯ ಮೂಲಕ ಸಾಕಾರ ಕಂಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದು ಚಿತ್ರಕ್ಕೆ ಬಣ್ಣವನ್ನು ಹಚ್ಚಿರುವ ಮೋಹನ್ ಕೊಪ್ಪಲ ಅವರು ಚಿತ್ರದ ಯಶಸ್ಸಿಗೆ ದುಡಿದಿದ್ದು ಈ ಮೂಲಕ ಸಾರ್ಥಕ್ಯ ಕಂಡಿದೆ.
ನಿರ್ದೇಶಕನ ಜಾಣ್ಮೆಗೆ ಹಿಡಿದ ಕೈಗನ್ನಡಿ:
ಎಕ್ಕಸಕ ತುಳು ಚಿತ್ರರಂಗದ 44 ವರ್ಷದ ಇತಿಹಾಸದಲ್ಲಿ ತೆರೆಗೆ ಬಂದ 55ನೇ ಚಿತ್ರ. ಈ ವರ್ಷ ತೆರೆಕಂಡ ಎರಡನೇ ಚಿತ್ರವೂ ಆಗಿರುವ ಎಕ್ಕಸಕ ತುಳು ಭಾಷೆಯಲ್ಲಿ ಹೊಸ ದಾಖಲೆಯನ್ನು ಮಾಡುವ ಎಲ್ಲ ಲಕ್ಷಣಗಳನ್ನು ಒಳಗೊಂಡಿದೆ. ಪಕ್ಕಾ ಲೋಕಲ್ ಆಗಿರುವ ಲೊಕೇಶನ್, ಮಾಸ್ ಆಗಿರುವ ಚಿತ್ರದ ರೂಪಣಾ ಶೈಲಿ, ವಿಭಿನ್ನ ಆಯಾಮ ನೀಡುವ ಚಿತ್ರಕಥೆಯನ್ನು ಬರೆದು ಚಿತ್ರವನ್ನು ನಿರ್ದೇಶಿಸಿರುವ ಸೂರಜ್ ಶೆಟ್ಟಿ ತುಳು ಚಿತ್ರರಂಗದಲ್ಲಿ ಬೆಳೆಯುವ ಎಲ್ಲ ಲಕ್ಷಣಗಳನ್ನು ಹೊಂದಿದ್ದಾರೆ. ಸೂರಜ್ ಶೆಟ್ಟಿಯವರ ಪ್ರಯತ್ನಕ್ಕೆ ಜೈಹೋ ಅನ್ನಲೇಬೇಕಿದೆ.
ಕನ್ನಡ ಸಿನಿಮಾದಲ್ಲಿ ಮಿಂಚಿರುವ ಉಗ್ರಂ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶಕ ಎಕ್ಕಸಕ ಸಿನಿಮಾಕ್ಕೆ ಕನ್ನಡ ಸಿನಿಮಾ ಜಗತ್ತಿನ ಹಿರಿಯ ಛಾಯಾಗ್ರಾಹಕ ಕೃಷ್ಣ ಸಾರಥಿ ಅದ್ಭುತವಾಗಿ ತನ್ನ ಪ್ರತಿಭೆಯನ್ನು ತೋರಿದ್ದಾರೆ. ನಟ ಕಿಚ್ಚ ಸುದೀಪ್‌ರವರ ಹಲವು ಸಿನಿಮಾಗಳಿಗೆ ಸಂಕಲನ ಮಾಡಿರುವ ಕೆ.ಆರ್. ಲಿಂಗರಾಜು ಇಲ್ಲಿಯೂ ತಮ್ಮ ಚಾಕಚಕ್ಯತೆಯನ್ನು ಮೆರೆದಿದ್ದಾರೆ. ನಟ ರವಿಚಂದ್ರನ ಸಿನಿಮಾಗಳಿಗೆ ಖಾಯಂ ಸೌಂಡ್ ಇಂಜಿನಿಯರ್ ಆಗಿರುವ ಹುಲಿವನ ನಾಗರಾಜ್ ಎಕ್ಕಸಕ ಸಿನಿಮಾದ ಧ್ವನಿ ತಾಂತ್ರಕತೆಯನ್ನು ಕೈಯಾಡಿಸಿದ್ದು ಕೊಚಾಡಿಯಾನ್ ತಮಿಳ್ ಸೂಪರ್ ಹಿಟ್ ಸಿನಿಮಾಕ್ಕೆ ಗ್ರಾಫಿಕ್ಸ್ ಕೆಲಸ ಮಾಡಿರುವ ಪ್ರಣವ್ ಲಿಯೋರವರು ಗ್ರಾಫಿಕ್ಸ್ ಕೆಲಸವನ್ನು ಮುಂಬೈನ ಹಾಗೂ ಬೆಂಗಳೂರಿನ ತಂತ್ರಜ್ಞರಿಂದ ಸಿನಿಮಾದ ವಿವಿಧ ಕೆಲಸ ಕಾರ್ಯ ನಡೆಸಲಾಗಿದೆ. ಧನು ಕುಮಾರ್ ಕೋರಿಯೋಗ್ರಫಿ ಮಾಡಿದ್ದು, ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಮಯೂರ್ ಆರ್. ಶೆಟ್ಟಿ ಹಾಡುಗಳ ಸಾಹಿತ್ಯ ಬರೆದಿದ್ದು. ವಸಂತ್ ಅಮಿನ್ ಹಾಗೂ ಡಿಬಿಸಿ ಶೇಖರ್ ಎರಡು ಹಾಡುಗಳನ್ನು ಬರೆದಿದ್ದಾರೆ.
ಸಿನಿಮಾದಲ್ಲಿ ಆರು ಹಾಡುಗಳಿವೆ. ಕನ್ನಡ ಸಿನಿಮಾದ ಹೆಸರಾಂತ ಗಾಯಕರಾದ ಚಂದನ್ ಶೆಟ್ಟಿ, ಅನುರಾದ ಭಟ್, ಸಂತೋಷ್ ವೆಂಕಿ, ತೆಲುಗು ಸಿನಿಮಾ ರೇಸ್ ಗುರ್ರಮ್‌ನ ಗಾಯಕ ಸಿಂಹರವರು ಒಂದು ಹಾಡಿಗೆ ಧ್ವನಿಗೂಡಿದ್ದಾರೆ. ಇವರೆಲ್ಲರ ಜೊತೆ ದುಬೈನ ಹೆಸರಾಂತ ಯುವ ಉದ್ಯಮಿ ಹಾಗೂ ಖ್ಯಾತ ಹಿನ್ನೆಲೆ ಗಾಯಕರೂ ಆಗಿರುವ ಹರಿಶ್ ಶೇರಿಗಾರ್ ಹಾಗೂ ಅಕ್ಷತಾ ರಾವ್ ದುಬೈ ಇವರು ಹಾಡಿದ್ದಾರೆ. ದಿನಕರ ಶೆಟ್ಟಿ ಮತ್ತು ಮೋಹನ್ ಕೊಪ್ಪಲ ಕದ್ರಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಹಲವಾರು ಕನ್ನಡ ಹಾಗೂ ತುಳು ಸಿನಿಮಾದ ಪ್ರಚಾರವಿನ್ಯಾಸದಲ್ಲಿ ಕೈಯಾಡಿಸಿರುವ ದೇವಿ ರೈಯವರು ಈ ಸಿನಿಮಾದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದು, ಒಟ್ಟಾರೆ ಈ ಸಿನಿಮಾವು ಪ್ರೀತಿ-ಪ್ರೇಮದ ಜೊತೆಗೆ ಹಾಸ್ಯ-ಮನೋರಂಜನೆಯಿಂದ ಕೂಡಿದೆ.
ಒನ್ ಲೈನ್ ಸ್ಟೋರಿ:
‘ಎಕ್ಕಸಕ’ ಅನ್ನೋದು ಕೋಟಿ ಚೆನ್ನಯ ತುಳು ಚಿತ್ರದ ಹಾಡೊಂದರ ಮೊದಲ ಸಾಲು… ಖ್ಯಾತ ತುಳು ಸಾಹಿತಿ ಡಾ.ಬಿ.ಎ.ವಿವೇಕ್ ರೈ ಅವರು ಎಕ್ಕಸಕ ಹಾಡನ್ನು ಬರೆದಿದ್ದರು. ಇದೀಗ ಇದೇ ಹಾಡಿನ ಒನ್‌ಲೈನ್ ಸಿನಿಮಾ ಆಗಿದೆ. ಚಿತ್ರದಲ್ಲಿ ತಂದೆಯ ಬಡ್ಡಿ ವ್ಯವಹಾರವನ್ನು ನೋಡಿಕೊಂಡಿರುವ ಹುಡುಗ ಪ್ರಶಾಂತ್(ಹಿತೇಶ್ ನಾಯಕ್) ಕಾಲೇಜ್ ಕ್ಯಾಂಪಸ್ಸಿನಲ್ಲಿ ಮೊದಲ ಬಾರಿ ನೋಡಿದಾಗಲೇ ನಾಯಕಿ ದಿವ್ಯ(ಸೋನಲ್ ಮೊಂತೇರೋ) ಚೆಲುವಿಗೆ ಮನಸೋಲುತ್ತಾನೆ. ಇಬ್ಬರೂ ಪರಿಚಯ ಮಾಡಿಕೊಂಡ ಕೆಲವೇ ದಿನಗಳಲ್ಲಿ ನಾಯಕಿಯನ್ನು ಮದುವೆಯಾಗುತ್ತೀಯಾ ಎಂದು ಕೇಳುತ್ತಾನೆ. ಆದರೆ ನಾಯಕಿಯು ಮೊದಲು ನನ್ನ ಮನೆಯಲ್ಲಿ ಒಪ್ಪಿಸಿ ಎಂದು ಗ್ರೀನ್ ಸಿಗ್ನಲ್ ನೀಡುತ್ತಾಳೆ.
ಮದುವೆಯಾಗಲು ಏನೇನೋ ಕಸರತ್ತು ಮಾಡಿದ ನಾಯಕ-ನಾಯಕಿ ಒಂದಾಗಬೇಕು ಅನ್ನುವಷ್ಟರಲ್ಲಿ ನಾಯಕ ಮತ್ತು ನಾಯಕಿಯ ತಂದೆ ಇಬ್ಬರೂ ಈ ಮದುವೆ ಸಾಧ್ಯವಿಲ್ಲ ಎನ್ನುತ್ತಾರೆ. ಆದರೂ ಗೋಪಾಲ(ನವೀನ್ ಡಿ. ಪಡೀಲ್) ಸಹಕಾರ ಪಡೆದು ಆಕೆಯನ್ನೇ ಮದುವೆಯಾಗಬೇಕು ಎಂದು ನಾಯಕ ಮುಂದಾಗುವಷ್ಟರಲ್ಲಿ ನಡೆಯಬಾರದ್ದು ನಡೆಯುತ್ತದೆ… ಅದೇನು? ಮುಂದೆ ಏನಾಗುತ್ತೆ? ಅನ್ನೋದನ್ನು ತಿಳಿಯಬೇಕಾದ್ರೆ ಸಿನಿಮಾ ಮಂದಿರಕ್ಕೇ ಹೋಗಿಬನ್ನಿ. ಈ ಮೂಲಕ ತುಳು ಬಾಷೆ, ತುಳು ಸಂಸ್ಕೃತಿ ಉಳಿಸಿ ಬೆಳೆಸಲು ಇಂತಹ ಉತ್ತಮ ತುಳು ಚಿತ್ರಗಳಿಗೆ ಪ್ರೋತ್ಸಾಹ ನೀಡಿ.