ಮಂಗಳೂರು,ಮೇ.04: ಸಂತ ವಿನ್ಸೆಂಟ್ ಡಿ. ಪಾವ್ ಸಭಾವತಿಯಿಂದ ಭಾನುವಾರ ರೋಜಾರಿಯೋ ಕೆಥೆಡ್ರಲ್‌ನಲ್ಲಿ ಜರಗಿದ 14 ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಂಗಳೂರು ಧರ್ಮ ಪ್ರಾಂತದ ಬಿಷಪ್ ರೆ| ಡಾ| ಅಲೋಶಿಯಸ್ ಪಾವ್ ಡಿ’ಸೋಜಾ ಅವರು ವೈವಾಹಿಕ ಜೀವನ ಪ್ರವೇಶಿಕೆಯ ಸಂಸ್ಕಾರದ ಧಾರ್ಮಿಕ ವಿಧಿ ವಿಧಾನ ನೇರವೇರಿಸಿದರು. ವಿವಾಹ ಸಂಭ್ರಮದ ಬಲಿಪೂಜೆಯಲ್ಲಿ ಧರ್ಮ ಪ್ರಾಂತದ ಪ್ರಧಾನ ಗುರು ಮೊ| ಡೆನ್ನಿಸ್ ಮೊರಾಸ್ ಪ್ರಭು ಪ್ರವಚನ ನೀಡಿದರು.
ದಂಪತಿಗಳು ಪರಸ್ಪರ ಪ್ರೀತಿಸುತ್ತಾ ಜೀವನ ಪರ್ಯಂತ ವಿಶ್ವಾಸಿಗಳಾಗಿ ಬದುಕ ಬೇಕು. ಸಾಂಸಾರಿಕ ಜೀವನದಲ್ಲಿ ಸಂತೋಷ ಮಾತ್ರವಲ್ಲ; ದುಃಖವನ್ನೂ ಪರಸ್ಪರ ಹಂಚಿಕೊಳ್ಳುವುದು ಅಗತ್ಯ ಎಂದು ಬಿಷಪ್ ಅವರು ಸಂದೇಶ ನೀಡಿ ನವ ದಂಪತಿಗಳನ್ನು ಹರಸಿದರು.
ಬಳಿಕ ಜರಗಿದ ಅಭಿನಂದನ ಸಮಾರಂಭದಲ್ಲಿ ಕರ್ನಾಟಕ ಎಜನ್ಸಿಸ್ ಸಂಸ್ಥೆಯ ಮುಖ್ಯಸ್ಥ ರಿಜಾರ್ಡ್ ರೊಡ್ರಿಗಸ್ ಮುಖ್ಯ ಅತಿಥಿಯಾಗಿದ್ದರು. ಸಾಮೂಹಿಕ ವಿವಾಹ ಸಂಘಟಿಸಿದ ಸಂತ ವಿನ್ಸೆಂಟ್ ಡಿ. ಪಾವ್ ಸಭಾ (ಎಸ್.ವಿ.ಪಿ)ದ ಕಾರ್ಯವನ್ನು ಶ್ಲಾಘಿಸಿದರು. ಎಸ್.ವಿ.ಪಿ. ಕೇಂದ್ರೀಯ ಸಮಿತಿ ಅಧ್ಯಕ್ಷ ಹೆರಾಲ್ಡ್ ಮೊಂತೇರೊ ನವ ದಂಪತಿಗಳನ್ನು ಅಭಿನಂದಿಸಿದರು.
ರೊಜಾರಿಯೊ ಕೆಥೆಡ್ರಲ್‌ನ ಪ್ರಧಾನ ಧರ್ಮಗುರು ಫಾ| ಜೆ.ಬಿ. ಕ್ರಾಸ್ತಾ ಸ್ವಾಗತಿಸಿದರು. ಎಸ್.ವಿ.ಪಿ. ಅಧ್ಯಕ್ಷ ಮತ್ತು ಕಾರ್ಯದರ್ಶಿಗಳಾದ ಸಿ.ಜೆ. ಸೈಮನ್ ಮತ್ತು ಮೇರಿ ಜೆ. ಪಿಂಟೊ ವಂದಿಸಿದರು. ಡೊಲ್ಫಿ ತಾವ್ರೊ ಮತ್ತು ಲಾರೆನ್ಸ್ ಪಿಂಟೊ ವಧುಗಳನ್ನು ವರನ ಕುಟುಂಬದವರಿಗೆ ಒಪ್ಪಿಸಿಕೊಡುವ ಕಾರ್ಯಕ್ರಮ ನಡೆಸಿಕೊಟ್ಟರು. ಶರಲ್ ಸೋನಿ ಮೊಂತೇರೊ ಮತ್ತು ಮೋಲಿ ಡಿ’ಸೋಜಾ ಕಾರ್ಯಕ್ರಮ ನಿರ್ವಹಿಸಿದರು.