ಮಂಗಳೂರು,ಮೇ.04: ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ 40ವಾರಗಳ ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು ಎಂಬ ಕಾರ್ಯಕ್ರಮದ 14 ನೇ ವಾರದ ಸ್ವಚ್ಚತಾಅಭಿಯಾನವನ್ನು ಭಾನುವಾರದಂದು ಮಂಗಳೂರಿನ ನಂದಿಗುಡ್ಡೆ ಪರಿಸರದಲ್ಲಿ ಕೈಗೊಳ್ಳಲಾಯಿತು. ಬೆಳಿಗ್ಗೆ 7.30 ಕ್ಕೆ ಸರಿಯಾಗಿ ಕೋಟಿ ಚೆನ್ನಯ್ಯ ವೃತ್ತದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಆಶ್ರಮದ ಮುಖ್ಯಸ್ಥರಾದ ಸ್ವಾಮಿಜಿತಕಾಮಾನಂದಜಿಯವರ ಸಾನಿಧ್ಯದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ಕಾತ್ಯಾಯಿನಿ ಮತ್ತು ಶ್ರಿ ನಖ್ರೆ ಸುರೇಂದ್ರ ಶೆಟ್ಟಿ ಜಂಟಿಯಾಗಿ ಅಭಿಯಾನಕ್ಕೆ ಚಾಲನೆ ನೀಡಿದರು. ಸ್ವಚ್ಛ ಮಂಗಳೂರು ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್ ಗಣೇಶ್‌ಕಾರ್ಣಿಕ್ ಮುಂದಾಳುತನದಲ್ಲಿ ಸ್ವಯಂ ಸೇವಕರು, ರಾಮಕೃಷ್ಣ ಮಿಷನ್ ಬಾಲಕಾಶ್ರಮದ ವಿದ್ಯಾರ್ಥಿಗಳು, ಮನಪಾ ಪೌರಕಾರ್ಮಿಕರು, ಸಾರ್ವಜನಿಕರು, ಹಿತೈಷಿಗಳು ಸ್ವಚ್ಚತಾ ಕೈಂಕರ್ಯದಲ್ಲಿ ಭಾಗವಹಿಸಿದರು.
ಕೋಟಿಚೆನ್ನಯ್ಯ ವೃತ್ತದಲ್ಲಿ ಸ್ವಾಮಿಜಿತಕಾಮಾನಂದಜಿ, ಕ್ಯಾ. ಗಣೇಶ್‌ಕಾರ್ಣಿಕ ಪೊರಕೆ ಹಿಡಿದು ಸ್ವಚ್ಛತಾಕಾರ್ಯ ನಡೆಸಿದರು. ಅಲ್ಲಿಂದ ಪ್ರಾರಂಭವಾದ ಅಭಿಯಾನ ನಂದಿಗುಡ್ಡೆ ಬಸ್ ತಂಗುದಾಣ ಶಾಂತಿನಗರದ ಜೆಪ್ಪು ಬಸ್ ತಂಗುದಾಣದ ಮೂಲಕ ಮಾರ್ಣಮಿ ಕಟ್ಟೆಯವರೆಗೆ ಸಾಗಿತು. ಅಲ್ಲಲ್ಲಿ ಹರಡಿಕೊಂಡಿದ್ದ ರಾಶಿ ರಾಶಿ ಕಸವನ್ನು ಮಹಾನಗರ ಪಾಲಿಕೆಯ ಪೌರಕಾರ್ಮಿಕರ ಸಹಾಯದಿಂದ ಶುಚಿಗೊಳಿಸಲಾಗಿದೆ. ಬಾಲಕಾಶ್ರಮದ ವಿದ್ಯಾರ್ಥಿಗಳು ಪ್ಲಾಸ್ಟಿಕ್, ಪೇಪರ್ ಹೆಕ್ಕಿದರು.
ಸ್ವಚ್ಛತೆಯೊಂದಿಗೆ ಸೌಂದರ್ಯೀಕರಣ ಇದು ರಾಮಕೃಷ್ಣ ಮಿಷನ್ ಹಮ್ಮಿಕೊಳ್ಳುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದ ವಿಶೇಷಗಳಲ್ಲೊಂದು. ಅಂತೆಯೇ ಇಂದು ಎರಡು ನಂದಿಗುಡ್ಡೆ ಬಸ್ ತಂಗುದಾಣ, ಶಾಂತಿನಗರ ಬಸ್ ನಿಲ್ದಾಣ ಮತ್ತು ಅಶ್ವತ್ಥಕಟ್ಟೆಯನ್ನು ನವೀಕರಿಸಲಾಗಿದೆ. ನಂದಿಗುಡ್ಡೆ ಮತ್ತು ಶಾಂತಿನಗರ ಬಸ್ ತಂಗುದಾಣಕ್ಕೆ ಎಲ್ಲೆಂದರಲ್ಲಿ ಭಿತ್ತಿಚಿತ್ರಗಳನ್ನು, ಜಾಹೀರಾತುಗಳನ್ನು ಅಂಟಿಸಿ ವಿರೂಪಗೊಳಿಸಲಾಗಿತ್ತು ಜೊತೆಗೆ ಅದರ ಸರಿಯಾದ ನಿರ್ವಹಣೆ ಇಲ್ಲದೇ ಕಸ ಕಡ್ದಿಗಳಿಂದ ತುಂಬಿ ಪ್ರಯಾಣಿಕರು ಕುಳಿತುಕೊಳ್ಳಲು ಅಸಹ್ಯ ಪಡುವಂತಿತ್ತು. ಸ್ವಚ್ಛ ಭಾರತ ಅಭಿಯಾನದ ಪ್ರಯುಕ್ತ ಆ ಎರಡೂ ತಂಗುದಾಣಗಳನ್ನು ನೀರಿನಿಂದ ತೊಳೆದು ಶುಚಿಗೊಳಿಸಿ ಬಣ್ಣಬಳಿದು ಸುಂದರಗೊಳಿಸಲಾಗಿದೆ ಹಾಗೂ ಅಲ್ಲಿ ಸ್ವಚ್ಛ ಭಾರತ ಕುರಿತ ಸಂದೇಶವುಳ್ಳ ಸ್ವಚ್ಛತೆಗೆ ಆದ್ಯತೆ ನೀಡಿರಿ ಎಂಬ ಫಲಕವನ್ನು ಅಳವಡಿಸಲಾಗಿದೆ.
ಆಶ್ವತ್ಥಕಟ್ಟೆಯ ದುರಸ್ತಿಕಾರ್ಯ – ನಂದಿಗುಡ್ಡೆಯಲ್ಲಿರುವ ಪಾಳುಸ್ಥಿತಿಯಲ್ಲಿದ್ದ ಅಶ್ವತ್ಥಕಟ್ಟೆ ನಗರದ ಸೌಂದರ್ಯಕ್ಕೆಧಕ್ಕೆ ತರುತ್ತಿತ್ತು. ಸ್ವಚ್ಛ ಮಂಗಳೂರು ಅಭಿಯಾನದ ಸ್ವಯಂಸೇವಕರು ಈ ಕಟ್ಟೆಯನ್ನು ಮರುನಿರ್ಮಿಸಿಕೊಡಲು ಸಂಕಲ್ಪಿಸಿ,ಅದರಂತೆ ನುರಿತ ಕಾರ್ಮಿಕರನ್ನು ಕರೆಯಿಸಿ ಅದರ ದುರಸ್ತಿ ಕಾರ್ಯವನ್ನು ಕೈಗೊಂಡರು. ಮನಪಾ ಸದಸ್ಯ ಶ್ರೀ ಪ್ರೇಮಾನಂದ ಶೆಟ್ಟಿ, ಶ್ರೀ ಸುರೇಶ್ ಶೆಟ್ಟಿ, ಶ್ರೀ ಸುಭೋದಯ ಆಳ್ವ, ಅಭಿಯಾನ ಸಂಯೋಜಕ ಶ್ರೀದಿಲ್‌ರಾಜ್ ಆಳ್ವ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ನಂದಿಗುಡ್ಡೆ, ಶಾಂತಿನಗರ ಮುಂತಾದ ಕಡೆ ಮನೆಮನೆಗೆ ತೆರಳಿ ಸ್ವಚ್ಚತಾ ಕರಪತ್ರ ಹಂಚಿ, ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಎಂಆರ್‌ಪಿಲ್ ಈ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಿಕೊಂಡಿದೆ.