ಮಂಗಳೂರು, ಮೇ. 11: ವಿವಿಧ ಸಮಾರಂಭಗಳಲ್ಲಿ ಕೊರಗರಿಂದ ಡೋಲು ಬಡಿಸಿಕೊಂಡು, ಅಜಲು ಪದ್ಧತಿಯಂತಹ ಆಚರಣೆಯ ಮೂಲಕ ಅವರನ್ನು ಸಮಾಜದಿಂದ ದೂರವಿಡುವುದು ಅಮಾನವೀಯ. ಜಾತಿ ಪದ್ಧತಿ ಇರುವ ಧರ್ಮ ಬೇಗ ನಶಿಸಿ ಹೋಗುತ್ತದೆ ಎಂದು ಚಾಮರಾಜ ನಗರದ ಇಂಟರ್ ನ್ಯಾಶನಲ್ ಮಾಂಕ್ ಸೊಸೈಟಿಯ ಕಾರ್ಯದರ್ಶಿ ಭಂತೆ ಬೋಧಿ ದತ್ತ (ನಳಂದ ಬುದ್ಧವಿಹಾರ) ಹೇಳಿದ್ದಾರೆ.ಅವರು ವಾಮಂಜೂರಿನಲ್ಲಿ ಆದಿವಾಸಿ ಕೊರಗರ ಕಲಾ ಮೇಳ ಮತ್ತು ಯುವಜನ ಉತ್ಸವ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು.
ಕೊರಗರು ಎಂದರೆ ‘ಕೊರಗದೆ ಇರುವವರು’ ಎನ್ನುವ ಅರ್ಥವಿದೆ. ಆದರೂ ಪ್ರಸಕ್ತ ಈ ಸಮುದಾಯ ಜಾತೀಯತೆ, ಅಸ್ಪಶ್ಯತೆಯಿಂದ ಶೋಷಣೆಗೊಳಗಾಗಿ ಕೊರಗುತ್ತಿದೆ. ಸಮಾಜದಲ್ಲಿ ಕೊರಗಜ್ಜನ ಆಶೀರ್ವಾದ ಎಲ್ಲರಿಗೂ ಬೇಕು. ಹಾಗಿರುವಾಗ ಕೊರಗರನ್ನು ಏಕೆ ಸಭೆ ಸಮಾರಂಭಗಳಿಂದ ದೂರ ಇಡುತ್ತಾರೆ?, ಧಾರ್ಮಿಕ ಸ್ಥಳಗಳಲ್ಲೂ ಅವರನ್ನು ದೂರ ನಿಲ್ಲಿಸಿ ಏಕೆ ಅವರಿಂದ ಡೋಲು ಬಾರಿಸುತ್ತಾರೆ? ಇದು ನಮ್ಮ ಸಮಾಜದಲ್ಲಿ ಅಸ್ಪಶ್ಯತೆ ಇನ್ನೂ ಜೀವಂತವಾಗಿರುವುದನ್ನು ತೋರಿಸುತ್ತದೆ ಎಂದವರು ವಿಷಾದ ವ್ಯಕ್ತಪಡಿಸಿದರು.
ಕಲಾವಿದರ ಸಾಲಲ್ಲೇ ಕೊರಗರ ಡೋಲಿಗೂ ಸ್ಥಾನ ಸಿಗಲಿ:
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೋಹನ್ ಆಳ್ವ, ದೇವಸ್ಥಾನ, ದೈವಸ್ಥಾನ, ಸಮಾರಂಭಗಳಲ್ಲಿ ಉಳಿದ ಕಲಾವಿದರ ಸಾಲಿನಲ್ಲಿ ಕೊರಗರ ಡೋಲಿಗೂ ಸ್ಥಾನ ಸಿಗುವಂತಾಗಬೇಕು. ಡೋಲು ಅವರ ಸ್ವಾಭಿಮಾನದ ಸಂಕೇತ. ಅದನ್ನು ಅವರಿಂದ ಕಿತ್ತುಕೊಳ್ಳಬಾರದು. ಆದರೆ ಕೊರಗರ ಡೋಲು, ಕೊಳಲುವಾದನವನ್ನು ಅಜಲು ಪದ್ಧತಿಯಂತಹ ಶೋಷಣೆಯ ವ್ಯವಸ್ಥೆಗೆ ಬಳಕೆಯಾಗದಂತೆ ಎಚ್ಚರ ವಹಿಸಬೇಕು. ಕೊರಗರ ಡೋಲಿಗೂ ರಾಷ್ಟ್ರಮಟ್ಟದ ಕಲಾ ಪ್ರಕಾರಕ್ಕೆ ಸಿಗುವ ಮನ್ನಣೆ ಸಿಗಬೇಕಾಗಿದೆ.
ಸ್ವಾತಂತ್ರ ಬಂದು ಇಷ್ಟು ವರ್ಷಗಳಾದರೂ ಇನ್ನೂ ಕೊರಗ ಸಮುದಾಯದವರು ಸಮಾನತೆಗಾಗಿ ಹೋರಾಡ ಬೇಕಾಗಿರುವುದು ಬೇಸರದ ಸಂಗತಿ. ಕೊರಗ ಸಮುದಾಯದವರಲ್ಲಿ ಹೆಚ್ಚಿನವರು ಶಿಕ್ಷಣದಿಂದ ವಂಚಿತರಾಗಿ ಆರೋಗ್ಯದ ಬಗ್ಗೆಯೂ ಹೆಚ್ಚಿನ ಗಮನಹರಿಸದೆ, ಕೆಲವರು ದುಶ್ಚಟಕ್ಕೂ ಬಲಿಯಾಗಿ ಹಲವಾರು ಕುಟುಂಬಗಳು ಸಂಕಷ್ಟದ ಹಾದಿಯಲ್ಲಿವೆ. ಇಂತಹ ಸಂಕಷ್ಟದ ಸಂರ್ಭದಲ್ಲಿ ಕೊರಗ ಸಮುದಾಯಲ್ಲಿ ಶೈಕ್ಷಣಿಕವಾದ ಕ್ರಾಂತಿ ನಡೆ ದಾಗ ಮಾತ್ರ ಯಶಸ್ಸುಗಳಿಸಬಹುದು ಎಂದು ಡಾ.ಆಳ್ವ ಅಭಿಪ್ರಾಯಿಸಿದರು.
ಕುಂದಾಪುರದ ಕೊರಗರ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷ ಗಣೇಶ್ ಮಾತನಾಡಿ, ಡಾ.ಮೋಹನ್ ಆಳ್ವ ತಮ್ಮ ಶಿಕ್ಷಣ ಸಂಸ್ಥೆಯಲ್ಲಿ 150ಕ್ಕೂ ಅಧಿಕ ಕೊರಗ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ ಮಾದರಿಯಾಗಿದ್ದಾರೆ. ಅದೇ ರೀತಿ ಕೊರಗರ ಡೋಲನ್ನು ಜಿಲ್ಲೆಯಲ್ಲಿ ಒಂದು ಕಲೆಯಾಗಿ ಕಂಡವರಲ್ಲಿ ಡಾ.ಆಳ್ವ ಮೊದಲಿಗರು. ಅದಕ್ಕಾಗಿ ಅವರನ್ನು ಅಭಿನಂದಿಸುವುದಾಗಿ ತಿಳಿಸಿದ್ದಾರೆ.
ಸಮಾರಂಭದಲ್ಲಿ ದಸಂಸ ಸಂಚಾಲಕ (ಕೃಷ್ಣಪ್ಪ ಸ್ಥಾಪಿತ) ಎಂ.ವಿ.ಪದ್ಮನಾಭ, ಮಂಗಳೂರು ವಿ.ವಿ. ಕಾಲೇಜಿನ ಉಪನ್ಯಾಸಕಿ ಸಬೀತಾ ಗುಂಡ್ಮಿ, ಕೊರಗ ಮುಖಂಡರಾದ ವಿಶ್ವನಾಥ, ಕೊರಗಜ್ಜ ಸೇವಾ ಟ್ರಸ್ಟ್‌ನ ಅಧ್ಯಕ್ಷ ಲಕ್ಷ್ಮಣ ವಾಮಂಜೂರು, ಎವಿಎಸ್‌ಎಸ್ ಅಧ್ಯಕ್ಷ ರಾಮಣ್ಣ ಮೊದಲಾದವರು ಉಪಸ್ಥಿತರಿದ್ದರು. ಕಲಾಮೇಳ ಆರಂಭದಲ್ಲಿ ರಾಜ್ಯದ ವಿವಿಧೆಡೆ ಗಳ 7 ಕಲಾತಂಡಗಳು ಡೋಲು, ಚೆಂಡೆ, ಕೊಳಲು, ಕೈಸಾಳೆ ಮೊದಲಾದವುಗಳೊಂದಿಗೆ ವೇದಿಕೆಯಲ್ಲಿ ಆಕರ್ಷಕ ಪ್ರದರ್ಶನ ನೀಡಿದವು. ಇದೇ ಸಂದರ್ಭದಲ್ಲಿ ಕೊರಗ ಸಮುದಾಯದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಲಾಯಿತು.