ಮಂಗಳೂರು,ಮೇ.11 : ವಿಕಲಚೇತನರಿಗೆ ನಾನಾ ಸೌಲಭ್ಯ ಕಲ್ಪಿಸಲು ಸರಕಾರ ಸದಾ ಸಿದ್ಧವಿದೆ. ಈಗಾಗಲೇ ಹಲವು ಯೋಜನೆ ರೂಪಿಸಿದ್ದು, ಅದರ ಸಮರ್ಪಕ ಅನುಷ್ಠಾನದ ಜತೆಗೆ ಸಂಘದ ಬೇಡಿಕೆ ಈಡೇರಿಸಲು ಬದ್ಧವಾಗಿದ್ದೇವೆ ಎಂದು ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಹೇಳಿದರು. ಅವರು ನಗರದ ರವೀಂದ್ರ ಕಲಾಭವನದಲ್ಲಿ ಭಾನುವಾರ ದ.ಕ. ಮತ್ತು ಉಡುಪಿ ಜಿಲ್ಲಾ ಅಂಗವಿಕಲರ ಸಂಘದ 23ನೇ ವಾರ್ಷಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಜನರ ಸೇವೆ ದೇವರ ಸೇವೆಯಾದರೆ, ವಿಕಲಚೇತನರ ಸೇವೆ ಇನ್ನೂ ಉನ್ನತ. ಇಂಥ ಮಕ್ಕಳ ನೆರವಿಗಾಗಿ ಸಚಿವನಾಗಿದ್ದ ಸಂದರ್ಭ ಮುಜುರಾಯಿ ಖಾತೆಯಿಂದ ಮಧ್ಯಾಹ್ನ ಊಟದ ವ್ಯವಸ್ಥೆ ಆರಂಭಿಸಿದ್ದೆ. ಅದು ಮುಂದುವರಿದಿದೆ. ವಿಕಲಚೇತನ ಮಗುವಿನ ನೋವು ಅನುಭವಿಸಿದ್ದೇನೆ. ಮುಂದೆ ಯಾರಿಗೂ ಇಂಥ ಮಕ್ಕಳು ಹುಟ್ಟದಿರಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದರು.
ವಿಕಲಚೇತನರ ಕಷ್ಟಕ್ಕೆ ಸ್ಪಂದಿಸುವುದು ಸಾರ್ವಜನಿಕರ, ಸರಕಾರದ ಕರ್ತವ್ಯ. ಸರಕಾರ ಈಗ ಹಲವಾರು ಯೋಜನೆ ರೂಪಿಸಿದೆ. ಆದರೆ, ಅನುಷ್ಠಾನದಲ್ಲಿ ಕೆಲವೊಮ್ಮೆ ವೈಫಲ್ಯ ಕಾಣುತ್ತಿದ್ದೇವೆ. ಬೇರೆ ಜಿಲ್ಲೆಗಿಂತ ದ.ಕ., ಉಡುಪಿಯಲ್ಲಿ ಯೋಜನೆಗಳು ಅರ್ಹರಿಗೆ ತಲುಪುತ್ತಿವೆ ಎಂಬ ಸಮಾಧಾನ ಇದೆ. ಮುಂದಿನ ದಿನಗಳಲ್ಲಿ ವಿಕಲಚೇತನ ಮಕ್ಕಳು ಹುಟ್ಟದಂತೆ ಜಾಗೃತಿ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ನಾವೆಲ್ಲ ಶ್ರಮಿಸೋಣ ಎಂದು ಹೇಳಿದರು.
ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜಿನ ಡೀನ್ ಡಾ. ಸತೀಶ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ವಿಕಲಚೇತನರ ಕಲ್ಯಾಣ ಅಧಿಕಾರಿ ಚಂದ್ರಿಕಾ ನಾಯಕ್, ಹೃದ್ರೋಗ ತಜ್ಞ ಡಾ.ನರಸಿಂಹ ಪೈ, ವೆನ್ಲಾಕ್ ಆಸ್ಪತ್ರೆ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ ಎಚ್.ಆರ್., ಸಂಘದ ಪ್ರಧಾನ ಕಾರ್ಯದರ್ಶಿ ಟಿ. ಕೊರಗಪ್ಪ ಗೌಡ, ಮಂಗಳೂರು ತಾಲೂಕು ಸಮಿತಿ ಅಧ್ಯಕ್ಷ ನಾಗೇಶ್ ಶೆಟ್ಟಿ ಶುಭ ಹಾರೈಸಿದರು. ದ.ಕ. ಮತ್ತು ಉಡುಪಿ ಜಿಲ್ಲಾ ಅಂಗವಿಕಲರ ಸಂಘದ ಅಧ್ಯಕ್ಷ ಡಾ.ವಿ.ಮುರಳೀಧರ ನಾಕ್ ಸ್ವಾಗತಿಸಿದರು.