ಕನ್ನಡ ವಾರ್ತೆಗಳು

ಮೇ 17ರಂದು ಪಿಲಿಕುಳದಲ್ಲಿ ಮತ್ಸೋತ್ಸವ – ಆಲಂಕಾರಿಕ ಮೀನುಗಳ ಪ್ರದರ್ಶನ ಮತ್ತು ಮಾರಾಟ.

Pinterest LinkedIn Tumblr

Pilikula_press_meet_1

ಮಂಗಳೂರು, ಮೇ.12: ಡಾ.ಶಿವರಾಮ ಪಿಲಿಕುಳ ನಿಸರ್ಗಧಾಮದಲ್ಲಿ ಪಿಲಿಕುಳ ಮತ್ಸ್ಯೋತ್ಸವ (ಫಿಶ್ ಕಾರ್ನಿವಲ್) ಮೇ 17ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಪಿಲಿಕುಳ ದೋಣಿ ವಿಹಾರ ಕೆರೆ ಬಳಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಪಿಲಿಕುಳ ಸೊಸೈಟಿಯ ಅಧ್ಯಕ್ಷರೂ ಆಗಿರುವ ಎ.ಬಿ.ಇಬ್ರಾಹೀಂ ತಿಳಿಸಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಿಲಿಕುಳ ನಿಸರ್ಗಧಾಮವನ್ನು ಮತ್ತಷ್ಟು ಜನಾಕರ್ಷಕವಾಗಿ ಮಾಡುವ ಉದ್ದೇಶದಿಂದ ಮತ್ಸ್ಯೋತ್ಸವ ಆರಂಭಿಸಲಾಗುತ್ತಿದೆ. ಭವಿಷ್ಯದಲ್ಲಿ ಇಲ್ಲಿ ತಿಂಗಳಿಗೊಂದು ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು.

ಮೀನುಗಾರಿಕೆ ಇಲಾಖೆ, ಮೀನುಗಾರಿಕೆ ಅಭಿವೃದ್ಧಿ ನಿಗಮ ಮತ್ತು ಮೀನುಗಾರಿಕೆ ಕಾಲೇಜಿನ ಸಹಯೋಗದಲ್ಲಿ ನಡೆಯುವ ಮತ್ಸೋತ್ಸವದಲ್ಲಿ ಸುರಕ್ಷಿತವಾಗಿ ಮೂರು ಪ್ಲಾಟ್‌ಾರ್ಮ್‌ನಲ್ಲಿ ಕುಳಿತು ಗಾಳದ ಮೂಲಕ ಮೀನು ಹಾಕಲು ಅವಕಾಶವಿದೆ. ಕೆರೆಯಿಂದ ನೇರವಾಗಿಯೂ ಗಾಳ ಹಾಕಬಹುದು. ಇದಕ್ಕೆ ಬೇಕಾದ ಸಾಮಗ್ರಿಗಳನ್ನು (ಕೋಲು, ಬೆಂಡ್, ಗಾಳ, ಸಿಗಡಿ) ತರಬೇಕು ಎಂದು ಅವರು ತಿಳಿಸಿದರು.

ಸಾಮಾನ್ಯವಾಗಿ ಮಹಶೀರ್ ಮತ್ತು ಸಾಮಾನ್ಯ ಗೆಂಡೆ ಮೀನು ಮಾತ್ರ ಗಾಳಕ್ಕೆ ಸಿಗುತ್ತವೆ. ಕಾಟ್ಲಾ, ರೋಹುಗಳನ್ನು ಬಲೆಯಲ್ಲಿ ಹಿಡಿಯಲಾಗುತ್ತದೆ ಎಂದ ಎ.ಬಿ.ಇಬ್ರಾಹೀಂ, ಜೀವರಕ್ಷಕ ಪರಿಕರ ವ್ಯವಸ್ಥೆ ಹಾಗೂ ಜೀವರಕ್ಷಕರ ನೇಮಕ, ಸೂಚನಾ ಲಕಗಳ ಅಳವಡಿಕೆ ಮಾಡಲಾಗುತ್ತದೆ. ಮುಂದಿನ ದಿನದಲ್ಲಿ ಮೀನಿನ ಗಾಳ ಹಾಕುವುದನ್ನು ಕ್ರೀಡೆಯಾಗಿ ಅಭಿವೃದ್ಧಿಪಡಿಸಲು ಆ್ಯಂಗ್ಲಿಂಗ್ ಕ್ಲಬ್ ರಚನೆ ಉದ್ದೇಶವಿದೆ. ಅಲ್ಲದೆ ಜಿಲ್ಲೆಯ ಹಣ್ಣುಹಂಪಲುಗಳ ಪ್ರದರ್ಶನ, ಮಾರಾಟದ ವಸಂತೋತ್ಸವ ನಡೆಸಲಿದ್ದೇವೆ ಎಂದರು.

ಮತ್ಸ್ಯೋತ್ಸವದಲ್ಲಿ ಮೀನಿನ ಹೊಸ ಖಾದ್ಯಗಳ ಪರಿಚಯ, ದೊಡ್ಡ ಮೀನು ಕತ್ತರಿಸಿ, ಕೆ.ಜಿ. ಲೆಕ್ಕದಲ್ಲಿ ತೂಕ ಮಾಡಿ ಮಾರಲು ಅವಕಾಶ, ಹೊರಗಿನಿಂದ ಸಮುದ್ರ ಅಥವಾ ಸಿಹಿನೀರಿನ ಮೀನು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದು ಎ.ಬಿ.ಇಬ್ರಾಹೀಂ ನುಡಿದರು.

Pilikula_press_meet_2

ಪಿಲಿಕುಳ ನಿಸರ್ಗಧಾಮದ ಯೋಜನಾ ನಿರ್ದೇಶಕ ಎಸ್.ಎ. ಪ್ರಭಾಕರ ಶರ್ಮಾ, ಪಿಲಿಕುಳ ವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ.ಕೆ.ವಿ.ರಾವ್, ಪಿಲಿಕುಳ ವನ್ಯಧಾಮದ ನಿರ್ದೇಶಕ ಜಯಪ್ರಕಾಶ್ ಭಂಡಾರಿ, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಎಂ.ಡಿ.ಪ್ರಸಾದ್, ಸಹಾಯಕ ನಿರ್ದೇಶಕ ಗಣಪತಿ ಭಟ್, ಪಿಲಿಕುಳ ಸೊಸೈಟಿ ಸದಸ್ಯ ಎನ್.ಜಿ. ಮೋಹನ್ ಉಪಸ್ಥಿತರಿದ್ದರು.

ಫಿಶ್ ಕಾರ್ನಿವಲ್ ವಿಶೇಷ…

ಆಲಂಕಾರಿಕ ಮೀನುಗಳ ಪ್ರದರ್ಶನ ಮತ್ತು ಮಾರಾಟ. ಪಿಲಿಕುಳ ದೋಣಿ ವಿಹಾರ ಕೆರೆಯಲ್ಲಿ ಬೆಳೆಸಿದ ಕಾಟ್ಲಾ, ರೋಹು, ಸಾಮಾನ್ಯ ಗೆಂಡೆ ಮೀನು ಹಿಡಿದು ಸಾರ್ವಜನಿಕ ಹರಾಜು.

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದಿಂದ ಪಾಂಪ್ರೇಟ್, ಅಂಜಲ್, ಬಂಗುಡೆ, ಸಿಗಡಿ, ಬೊಂಡಾಸ್ ಸಹಿತ ತಾಜಾ ಮೀನು ಮತ್ತು ವೌಲ್ಯವರ್ಧಿತ ಮೀನು ಉತ್ಪನ್ನಗಳ ಮಾರಾಟ.

ತಾಜಾ ಮೀನುಗಳ ಫ್ರೈ, ಫಿಶ್ ಮಸಾಲ, ಫಿಶ್ ಕಬಾಬ್ ಇನ್ನಿತರ ಖಾದ್ಯಗಳನ್ನು ಶುಚಿರುಚಿಯಾಗಿ ಸ್ಥಳದಲ್ಲೇ ತಯಾರಿಸಿ ಮಾರಾಟ.
ಮೀನುಗಾರಿಕಾ ಮಹಾವಿದ್ಯಾಲಯದಿಂದ ಮೀನುಗಾರಿಕೆ ಅರಿವು ಮೂಡಿಸುವ ಪ್ರದರ್ಶನ.

ಆಸಕ್ತರಿಗೆ ದೋಣಿ ವಿಹಾರ ಕೆರೆಯಲ್ಲಿ ಸ್ವತಃ ತಾವೇ ತರುವ ಗಾಳ ಹಾಕಲು ಅವಕಾಶ. ನೋಂದಣಿ ಶುಲ್ಕ 100 ರೂ. ಹಾಗೂ ದೊರೆತ ಮೀನಿನಲ್ಲಿ ಶೇ.50 ಪಿಲಿಕುಳಕ್ಕೆ ನೀಡಬೇಕು. ದೊಡ್ಡ ಮೀನು ಸಿಕ್ಕಿದರೆ ಗಾಳ ಹಾಕಿದವರಿಗೆ ನೀಡಲಾಗುತ್ತದೆ.

Write A Comment