ಬಂಟ್ವಾಳ, ಮೇ 12: ಲಾರಿಯೊಂದು ತಾಗಿದ ಪರಿಣಾಮ ಸ್ಕಾರ್ಪಿಯೊ ವಾಹನವೊಂದು ರಸ್ತೆ ಬದಿಗೆ ಮಗುಚಿಬಿದ್ದ ಘಟನೆ ಪುಂಜಾಲಕಟ್ಟೆಯಲ್ಲಿ ಸಂಭವಿಸಿದ್ದು, ಅದೃಷ್ಟವಶಾತ್ ಸ್ಕಾರ್ಪಿಯೋದಲ್ಲಿದ್ದ ಮೂವರು ಮಕ್ಕಳ ಸಹಿತ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಇಲ್ಲಿಗೆ ಸಮೀಪದ ಕಂಗಿತ್ತಿಲು ನಿವಾಸಿ ದಿವಾಕರ ಶೆಟ್ಟಿ ಎಂಬವರು ತನ್ನ ಅಕ್ಕನ ಮೂವರು ಮಕ್ಕಳ ಸಹಿತ ಸ್ಕಾರ್ಪಿಯೊದಲ್ಲಿ ಮಡಂತ್ಯಾರಿನಿಂದ ಪುಂಜಾಲಕಟ್ಟೆಗೆ ಬರುತ್ತಿದ್ದ ವೇಳೆ ಬಸವನಗುಡಿ ಸಮೀಪ ಟಿಪ್ಪರ್ ಲಾರಿಯೊಂದು ಹಿಂದಿನಿಂದ ಓವರ್‍ಟೇಕ್ ಮಾಡುವ ರಭಸದಲ್ಲಿ ತಾಗಿಸಿಕೊಂಡು ಹೋಗಿತ್ತು. ಪರಿಣಾಮ ಸ್ಕಾರ್ಪಿಯೋ ಅಡಿಮೇಲಾಗಿ ರಸ್ತೆ ಬದಿಗೆ ಮಗುಚಿ ಬಿದ್ದಿತ್ತು. ಈ ವೇಳೆ ಡೋರ್‍ಲಾಕ್ ಆಗಿ ಸುಮಾರು 20 ನಿಮಿಷಗಳ ಕಾಲ ದಿವಾಕರ ಶೆಟ್ಟಿ ಸಹಿತ ಮೂವರು ಮಕ್ಕಳು ಸ್ಕಾರ್ಪಿಯೋ ವಾಹನದೊಳಗೆ ಬಂಧಿಯಾಗಿದ್ದರು. ಅಪಘಾತ ನಡೆದ ಪ್ರದೇಶದಲ್ಲಿ ಜನಸಂಚಾರ ವಿರಳವಾಗಿದ್ದುದರಿಂದ ಘಟನೆ ತಕ್ಷಣ ಯಾರ ಗಮನಕ್ಕೂ ಬಂದಿರಲಿಲ್ಲ. ಬಳಿಕ ದಿವಾಕರ ಅವರು ವಾಹನದ ಕಿಟಕಿ ಗಾಜು ಒಡೆದು ಹೊರಬರಬೇಕಾಯಿತು. ಅಪಘಾತದಲ್ಲಿ ಸ್ಕಾರ್ಪಿಯೋ ನಜ್ಜುಗುಜ್ಜಾಗಿದೆ. ಘಟನೆ ಕುರಿತು ದಿವಾಕರ ಅವರು ಪುಂಜಾಲಕಟ್ಟೆ ಠಾಣೆಗೆ ದೂರು ನೀಡಿದ್ದಾರೆ.
ಚಾರ್ಮಾಡಿ ರಸ್ತೆಯಲ್ಲಿ ಮರಳು ಲಾರಿಗಳಿಗೆ ಸಂಚಾರಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದ್ದರೂ ಕೆಲವೊಂದು ಲಾರಿಗಳು ಓಡಾಟ ನಡೆಸಿವೆ. ಜೊತೆಗೆ ಕೆಂಪುಕಲ್ಲು ಸಾಗಾಟ ನಡೆಸುವ ಟಿಪ್ಪರ್‍ಗಳ ಆಟಾಟೋಪಕ್ಕೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.