ಉಡುಪಿ: ಮತ್ಸ್ಯಗಂಧ ರೈಲಿನಲ್ಲಿ ಮುಂಬೈಯಿಂದ ಉಡುಪಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವರ ಬ್ಯಾಗಿನಿಂದ 6.50 ಲಕ್ಷ ರೂ. ವೌಲ್ಯದ 279 ಗ್ರಾಂ. ಚಿನ್ನಾಭರಣ ಕಳವು ಮಾಡಿದ ಘಟನೆ ವರದಿಯಾಗಿದೆ.
ಉಡುಪಿಯ ಕೊಡವೂರಿನ ಪ್ರಮೋದ್ ಶೆಟ್ಟಿ ಅವರು ಮೇ 17ರಂದು ಮತ್ಸ್ಯಗಂಧ ರೈಲಿನಲ್ಲಿ ಪ್ರಯಾಣಿಸಿದ್ದು ಮೇ. 18ರಂದು ಉಡುಪಿ ರೈಲು ನಿಲ್ದಾಣದಲ್ಲಿ ಇಳಿಯಬೇಕಾಗಿದ್ದ ಅವರು ಗೊಂದಲದಿಂದ ಬಾರ್ಕೂರು ರೈಲು ನಿಲ್ದಾಣದಲ್ಲಿ ತನ್ನ ಎಲ್ಲಾ ಲಗೇಜ್‌ಗಳೊಂದಿಗೆ ಬೆಳಗ್ಗೆ ಇಳಿದಿದ್ದರು. ತಕ್ಷಣ ಅರಿವಾಗಿ ರೈಲನ್ನೇರಿದ್ದರು. ಈ ಸಂದರ್ಭ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಅಪರಿಚಿತರು ಪ್ರಮೋದ್ ಶೆಟ್ಟಿ ಬ್ಯಾಗ್‌ಗಳನ್ನು ಎತ್ತಿ ರೈಲಿನೊಳಗೆ ಹಾಕಿದ್ದು, ಒಬ್ಬಾತ ಕೆಂಪು ಬಣ್ಣದ ಬ್ಯಾಗಿನ ಬಳಿ ನಿಂತಿದ್ದ. ನಂತರ ಪ್ರಮೋದ್ ಉಡುಪಿಯಲ್ಲಿಳಿದು ಮನೆಗೆ ತೆರಳಿದ್ದರು.
ಮನೆಯಲ್ಲಿ ಕೆಂಪು ಬಣ್ಣದ ಬ್ಯಾಗ್ ಪರಿಶೀಲಿಸಿದಾಗ ಬ್ಯಾಗಿನ ಒಂದು ಬದಿ ಕತ್ತರಿಸಿ ಒಳಗಿದ್ದ ಚಿನ್ನಾಭರಣ ಕಳವು ಮಾಡಿದ್ದು ಬೆಳಕಿಗೆ ಬಂದಿದ್ದು ಕೂಡಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.