ಕನ್ನಡ ವಾರ್ತೆಗಳು

ಅಮೂಲ್ಯ ದಾಖಲೆಗಳ್ಳಿದ್ದ ಬ್ಯಾಗ್‍ನ್ನು ಅದರ ವಾರಿಸುದಾರರಿಗೆ ನೀಡಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ

Pinterest LinkedIn Tumblr

honest_Auto_drver_sattar

ಬಂಟ್ವಾಳ,ಮೇ.22 : ರಿಕ್ಷಾ ಚಾಲಕ ವೃತ್ತಿಯೊಂದಿಗೆ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ಬಂದಿರುವ ಗೂಡಿನಬಳಿ ನಿವಾಸಿ, ನೇತ್ರಾವತಿ ವೀರ ಬಿರುದಾಂಕಿತ ಅಬ್ದುಲ್ ಸತ್ತಾರ್ ಗೂಡಿನಬಳಿ ಅವರು ಮತ್ತೊಮ್ಮೆ ತನ್ನ ಪ್ರಾಮಾಣಿಕತೆಯನ್ನು ಮರೆದಿದ್ದಾರೆ.

ಬುಧವಾರ ಸಂಜೆ ತನ್ನ ರಿಕ್ಷಾದಲ್ಲಿ ಬಿ ಸಿ ರೋಡಿನಿಂದ ಪಾಣೆಮಂಗಳೂರಿಗೆ ನಂದಾವರ ಮೂಲದ ಮೂವರು ಮಹಿಳೆಯರು ಪ್ರಯಾಣಿಸಿದ್ದು, ಈ ವೇಳೆ ತಮ್ಮ ಒಡವೆ, ನಗದು ಹಾಗೂ ಅಮೂಲ್ಯ ದಾಖಲೆಗಳಿದ್ದ ಬ್ಯಾಗ್‍ನ್ನು ಮರೆತು ರಿಕ್ಷಾದಲ್ಲಿಯೇ ಬಿಟ್ಟು ತೆರಳಿದ್ದರು. ಸತ್ತಾರ್ ತನ್ನ ರಿಕ್ಷಾವನ್ನು ಪಾಣೆಮಂಗಳೂರು ಪಾರ್ಕ್‍ನಲ್ಲಿರಿಸಿ ಸಮೀಪದ ಮಸೀದಿಯಲ್ಲಿ ನಮಾಜ್ ಮುಗಿಸಿ ಹೊರ ಬರುತ್ತಿದ್ದಂತೆ ರಿಕ್ಷಾದಲ್ಲಿ ಪ್ರಯಾಣಿಕರು ಬಿಟ್ಟು ಹೋಗಿರುವ ಬ್ಯಾಗ್ ಕಂಡು ಬಂದಿದೆ. ತಕ್ಷಣ ಅದನ್ನು ತೆಗೆದು ಜೋಪಾನವಾಗಿಟ್ಟು ಪ್ರಯಾಣಿಕರ ಮಹಿಳೆಯರ ದೂರವಾಣಿ ಸಂಖ್ಯೆ ಸಿಗಬಹುದೇ ಎಂದು ಹುಡುಕಾಟದಲ್ಲಿರುವಾಗ ಬ್ಯಾಗ್ ಕಳೆದುಕೊಂಡ ಮಹಿಳೆಯರು ಇನ್ನೊಂದು ರಿಕ್ಷಾ ಬಾಡಿಗೆಗೆ ಗೊತ್ತುಪಡಿಸಿ ಸತ್ತಾರ್‍ಗಾಗಿ ಹುಡುಕಾಡುತ್ತಾ ಬರುತ್ತಿದ್ದು, ಎರಡೂ ರಿಕ್ಷಾಗಳು ಮುಖಾಮುಖಿಯಾಗಿ ಮಹಿಳೆಯರು ಸತ್ತಾರ್‍ನಲ್ಲಿ ವಿಚಾರಿಸಿದಾಗ ತಕ್ಷಣ ತಾನು ತೆಗೆದಿರಿಸಿಕೊಂಡಿದ್ದ ಬ್ಯಾಗ್‍ನ ಪರಿಚಯ ಕೇಳಿ ಮಹಿಳೆಯರಿಗೆ ಒಪ್ಪಿಸಿದ್ದಾನೆ.

ಸತ್ತಾರ್‍ನ ಪ್ರಾಮಾಣಿಕತೆ ಕಂಡು ತೀವ್ರ ಸಂತೋಷ ಹಾಗೂ ಸಂತುಷ್ಟಿಯಿಂದ ಮಹಿಳೆಯರು ಆತನಿಗಾಗಿ ಉಡುಗೊರೆ ನೀಡಲು ಅಣಿಯಾದಾಗ ಸತ್ತಾರ್ ಅದನ್ನು ನಯವಾಗಿಯೇ ತಿರಸ್ಕರಿಸಿ ಮಹಿಳೆಯರನ್ನು ಬೀಳ್ಕೊಟ್ಟಿದ್ದಾನೆ. ಈ ಹಿಂದೆಯೂ ಇದೇ ರೀತಿ ಹಲವು ಬಾರಿ ಪ್ರಾಮಾಣಿಕತೆ ಮರೆದು ಸತ್ತಾರ್ ಸುದ್ದಿಯಾಗಿದ್ದರು. ಮಾಧ್ಯಮಗಳು ರಿಕ್ಷಾ ಚಾಲಕ ವೃತ್ತಿಯೊಂದಿಗೆ ಸಮಾಜ ಸೇವಾ ಕಾರ್ಯಗಳಲ್ಲೂ ತನ್ನನ್ನು ತೊಡಗಿಸಿಕೊಂಡಿರುವ ಆಪದ್ಭಾಂಧವ ಸತ್ತಾರ್ ಕೆಲ ವರ್ಷಗಳ ಹಿಂದೆ ಮಳೆಗಾಲದಲ್ಲಿ ಗೂಡಿನಬಳಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೈಯಲು ಯತ್ನಿಸಿದ ಹಿಂದೂ ಧರ್ಮಕ್ಕೆ ಸೇರಿದ ತಾಯಿ-ಮಗುವನ್ನು ಕಂಡು ತಕ್ಷಣ ಉಕ್ಕಿ ಹರಿಯುತ್ತಿದ್ದ ನೇತ್ರಾವತಿಗೆ ಧುಮುಕಿ ಇಬ್ಬರನ್ನೂ ಜೀವಂತ ರಕ್ಷಿಸಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದ. ಈ ವೇಳೆ ಕೊಲ್ಯ ಸ್ವಾಮೀಜಿ ಅವರು ಸತ್ತಾರ್‍ನನ್ನು ಸಾರ್ವಜನಿಕವಾಗಿ ಸನ್ಮಾನಿಸಿ ‘ನೇತ್ರಾವತಿ ವೀರ’ ಎಂಬ ಬಿರುದನ್ನು ನೀಡಿ ಗೌರವಿಸಿದ್ದರು. ಆ ಬಳಿಕ ನೇತ್ರಾವತಿ ವೀರ ಎಂದೇ ತಾಲೂಕಿನಾದ್ಯಂತ ಚಿರಪರಿಚಿತನಾಗಿರುವ ಸತ್ತಾರ್ ಇಂತಹ ಹಲವು ಆಪದ್ಭಾಂಧವ ಕೆಲಸಗಳನ್ನು ನಿರ್ವಹಿಸಿ ಜನಮೆಚ್ಚುಗೆಯನ್ನು ಪಡೆದಿದ್ದಾನೆ. ಸತ್ತಾರ್‍ನ ಸಾಧನೆ ಹಾಗೂ ಪ್ರಾಮಾಣಿಕತೆ ಬಗ್ಗೆ ಜಿಲ್ಲೆಯ ಬಹುತೇಕ ಮಾಧ್ಯಮಗಳು ಬೆಳಕು ಚೆಲ್ಲಿರುವುದನ್ನು ಈ ಸಂದರ್ಭ ಸ್ಮರಿಸಿಕೊಳ್ಳಬಹುದು.

Write A Comment