ಮಂಗಳೂರು, ಮೇ 22: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಸುಮಾರು 16 ಲಕ್ಷ ರೂ. ವೌಲ್ಯದ ಸೊತ್ತುಗಳನ್ನು ಕಳವುಗೈದಿರುವ ಘಟನೆ ಮೇ.16ರಿಂದ 21 ರ ಮಧ್ಯೆ ನಡೆದಿದ್ದು, ಗುರುವಾರ ಸಂಜೆ ಬೆಳಕಿಗೆ ಬಂದಿದೆ.
ಜೆಪ್ಪಿನಮೊಗರು ಕುಡ್ತಡ್ಕ ಬಜಾಲ್ ನಿವಾಸಿ ಹರಿಶ್ಚಂದ್ರ ಬೇಕಲ್ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದ್ದು, ಮನೆಯ ಹಿಂಬಾಗಿಲಿನ ಬೀಗ ಮುರಿದು ಒಳ ನುಗ್ಗಿದ ಕಳ್ಳರು, ಕಪಾಟಿನಲ್ಲಿರುವ ಸಾಮಾನುಗಳನ್ನು ಜಾಲಾಡಿ 75 ಪವನ್ ತೂಕದ ಚಿನ್ನ, 3,500 ನಗದು ಹಾಗೂ ನಾಲ್ಕು ಬೆಲೆಬಾಳುವ ಸೀರೆಗಳನ್ನು ಕದ್ದೊಯ್ದಿದ್ದಾರೆ.
ಮೂಲತಃ ಕಾಸರಗೋಡು ಬೇಕಲದವರಾದ ಹರಿಶ್ಚಂದ್ರ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಇತ್ತೀಚೆಗೆ ಊರಿಗೆ ಬಂದಿದ್ದರು. ಮೇ 15ರಂದು ಮನೆಯವರೆಲ್ಲರೂ ಕಾಸರಗೋಡು ಬೇಕಲದಲ್ಲಿರುವ ಮನೆಗೆ ಕಾರ್ಯಕ್ರಮ ಕ್ಕೆಂದು ತೆರಳಿದ್ದು, ಗುರುವಾರ ಸಂಜೆ 4:30ಕ್ಕೆ ಮನೆಗೆ ವಾಪಸಾದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ. ಬೆರಳಚ್ಚು ಹಾಗೂ ಶ್ವಾನ ದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.