ಮಂಗಳೂರು, ಮೇ.22 : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೀಕರ ವಿಮಾನ ದುರಂತ ನಡೆದು ಇಂದಿಗೆ 5 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ವಿಮಾನ ದುರಂತದಲ್ಲಿ ಮಡಿದವರಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶ್ರದ್ದಾಂಜಲಿ ಅರ್ಪಿಸಲಾಯಿತು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲ್, ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ವಿಮಾನನಿಲ್ದಾಣದ ನಿರ್ದೇಶಕ ಜೆ.ಟಿ. ರಾಧಾಕೃಷ್ಣ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು, ರಾಜಕೀಯ ಮುಖಂಡರು ಈ ಶ್ರದ್ದಾಂಜಲಿ ಸಭೆಯಲ್ಲಿ ಪಾಲ್ಗೊಂಡಿದ್ದರು.
ಕರಾವಳಿಯ ಇತಿಹಾಸದಲ್ಲಿ ಕರಾಳ ದಿನ :
2010 ಮೇ 22ರಂದು ಮುಂಜಾನೆ ನಡೆದ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ದುರಂತದಲ್ಲಿ 158 ಮಂದಿ ಮೃತಪಟ್ಟಿದ್ದು, 8 ಮಂದಿ ಬದುಕಿ ಉಳಿದಿದ್ದರು. 2010ರ ಮೇ 22 ಕರಾವಳಿಯ ಇತಿಹಾಸದಲ್ಲಿ ಕರಾಳ ದಿನ. ವಿಮಾನದೊಳಗಿದ್ದ 158 ಮಂದಿ ಕ್ಷಣಾರ್ಧದಲ್ಲಿ ಕರಟಿ ಹೋಗಿದ್ದರು. ಮೃತರ ನೆನಪಿಗಾಗಿ ಸ್ಮಾರಕ, ಕೆಂಜಾರಿನಲ್ಲಿ ಸಮುದಾಯ ಭವನ ನಿರ್ಮಾಣ, ದುರಂತದಲ್ಲಿ ಮಡಿದವರ ಸ್ಮರಣಾರ್ಥ ಆರೋಗ್ಯ ಕೇಂದ್ರ. ಗ್ರಂಥಾಲಯ ಸ್ಥಾಪನೆ… ಹೀಗೆ ನೀಡಿದ ಭರವಸೆಯ ಯಾವ ಮಾತು ಈಡೇರಿಸಿಲ್ಲ. ದುರಂತಕ್ಕೆ ಒಂದು ಕಾರಣ ಎನ್ನಲಾಗುವ ಕಿರಿದಾದ ರನ್‌ವೇ ವಿಸ್ತರಿಸುವ ಭರವಸೆಯೂ ಅನುಷ್ಠಾನಗೊಂಡಿಲ್ಲ. ಮಡಿದವರ ಹೆಸರನ್ನು ಒಳಗೊಂಡ ಶಿಲಾಫಲಕವನ್ನು ಈ ಹಿಂದೆ ದುರಂತ ಸಂಭವಿಸಿದ ಸ್ಥಳದಲ್ಲಿ ಸ್ಥಾಪಿಸಲಾಗಿತ್ತಾದರೂ ಅದನ್ನು ಕೆಲವು ಮಂದಿ ಮುರಿದು ಹಾನಿಗೊಳಿಸಿದ್ದರು.
ಮೃತರ ನೆನಪಿಗಾಗಿ ತಣ್ಣೀರುಬಾವಿಯಲ್ಲಿ ’22/5 ಪಾರ್ಕ್ :
ದುರಂತದಲ್ಲಿ ಮೃತಪಟ್ಟ 12 ಶವಗಳ ಗುರುತು ಪತ್ತೆಯಾಗಿರಲಿಲ್ಲ. ಗುರುತು ಪತ್ತೆಹಚ್ಚಲು ಸಾಧ್ಯವಾಗದ ಮೃತದೇಹಗಳನ್ನು ಜಿಲ್ಲಾಡಳಿತದ ವತಿಯಿಂದ ತಣ್ಣೀರುಬಾವಿ ಬೀಚ್‌ಗೆ ಸಾಗುವ ರಸ್ತೆ ಬದಿಯಲ್ಲಿರುವ ಖಾಲಿ ಸ್ಥಳದಲ್ಲಿ ಸಾಮೂಹಿಕವಾಗಿ ದಫನಮಾಡಲಾಗಿತ್ತು. ಈ ಪ್ರದೇಶದಲ್ಲಿ ಮೃತರ ನೆನಪಿಗಾಗಿ ’22/5 ಪಾರ್ಕ್’ ನಿರ್ಮಿಸಲು ಜಿಲ್ಲಾಡಳಿತ ನವಮಂಗಳೂರು ಬಂದರು ಮಂಡಳಿಗೆ ವಿನಂತಿಸಿಕೊಂಡಿದೆ. ಅದರಂತೆ ನವಮಂಗಳೂರು ಬಂದರು ಮಂಡಳಿಗೆ ಸೇರಿದ ಈ ಜಾಗದಲ್ಲಿ ಎನ್‌ಎಂಪಿಟಿ ಸುಮಾರು 30 ಲಕ್ಷ ರೂ. ವೆಚ್ಚ ಮಾಡಿ ಇಲ್ಲಿ ಪಾರ್ಕ್ ಮಾಡಲು ಮುಂದಾಗಿದೆ.
ಮೃತರ ಕುಟುಂಬಸ್ಥರ ಅನುಪಸ್ಥಿತಿ
ಮಂಗಳೂರು : 2010 ಮೇ 22ರಂದು ಸಂಭವಿಸಿದ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರವೇಶ ದ್ವಾರದ ಬಳಿ ಶುಕ್ರವಾರ ಸರಳ ಕಾರ್ಯಕ್ರಮದ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೂ ಅರ್ಪಿಸುವ ಮೂಲಕ ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮೃತರ ಕುಟುಂಬಗಳಿಗೆ ಏರ್ ಇಂಡಿಯಾದಿಂದ ಪರಿಹಾರ ನೀಡುವ ಕೆಲಸ ನಡೆದಿದ್ದು, ಕೆಲವೊಂದು ವಿವಾದಿತ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿರುವ ಕಾರಣ ಪರಿಹಾರ ಬಾಕಿಯಾಗಿದೆ ಎಂದರು. ವಿಮಾನ ದುರಂತದಲ್ಲಿ ಮೃತಪಟ್ಟ 158 ಮಂದಿಯಲ್ಲಿ ಗುರುತು ಪತ್ತೆಯಾ ಗದ 12 ಮೃತದೇಹಗಳ ಅಂತ್ಯ ಸಂಸ್ಕಾರವನ್ನು ತಣ್ಣೀರುಬಾವಿಯ ನವ ಮಂಗಳೂರು ಬಂದರು ಮಂಡಳಿ ಜಾಗದಲ್ಲಿ ಜಿಲ್ಲಾಡಳಿತದ ವತಿಯಿಂದ ನೆರವೇರಿಸಲಾಗಿತ್ತು.
ಆ ಜಾಗದಲ್ಲಿ ಇದೀಗ 22/5 ಸ್ಮಾರಕ ಪಾರ್ಕ್ ನಿರ್ಮಿಸಲಾಗುವುದು ಎಂದು ಸಚಿವ ರೈ ಈ ಸಂದರ್ಭ ತಿಳಿಸಿದರು. ಸಂಸದ ನಳಿನ್ ಕುಮಾರ್, ಜಿಲ್ಲಾಕಾರಿ ಎ.ಬಿ.ಇಬ್ರಾಹೀಂ, ಜಿಪಂ ಸಿಇಒ ಶ್ರೀವಿದ್ಯಾ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ದೇಶಕ ಜಿ.ಟಿ. ರಾಧಾಕೃಷ್ಣ ಹಾಗೂ ಇತರ ಅಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಮೃತರ ಕುಟುಂಬಸ್ಥರ ಅನುಪಸ್ಥಿತಿ
ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮೃತರ ಕುಟುಂಬ ಸ್ಥರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಮೃತಪಟ್ಟ 158 ಮಂದಿಯಲ್ಲಿ ಅನೇಕ ಮಂದಿ ಜಿಲ್ಲೆಯವರಾಗಿದ್ದರೂ, ಮಂಗಳೂರು ವಿಮಾನ ದುರಂತ ಸಂತ್ರಸ್ತರ ಅಸೋಸಿಯೇಶನ್ ಅಸ್ತಿತ್ವದಲ್ಲಿದ್ದರೂ ಮಂಗಳೂರು ವಿಮಾನ ನಿಲ್ದಾಣ ಹಾಗೂ ಜಿಲ್ಲಾಡಳಿತದ ವತಿಯಿಂದ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮೃತರ ಕುಟುಂಬ ಸದಸ್ಯರು ಕಂಡುಬರಲಿಲ್ಲ. ಶ್ರದ್ಧಾಂಜಲಿ ಸಭೆಯ ಬಗ್ಗೆ ಮೃತರ ಕುಟುಂಬಸ್ಥರಿಗೆ ಮಾಹಿತಿ ಒದಗಿಸಲಾಗಿದೆಯೇ ಎಂದು ವಿಮಾನ ನಿಲ್ದಾಣ ನಿರ್ದೇಶಕರನ್ನು ಕೇಳಿದಾಗ, ಮಾಹಿತಿ ನೀಡ ಲಾಗಿದೆ. ಆದರೆ ಯಾರೂ ಬಂದಿಲ್ಲ. ಮುಂದಿನ ದಿನ ಗಳಲ್ಲಿ ತಣ್ಣೀರುಬಾವಿಯಲ್ಲಿ ರಚಿಸಲಾಗುವ ಸ್ಮಾರಕದ ಬಳಿ ಶ್ರದ್ಧಾಂಜಲಿ ಸಭೆಯಲ್ಲಿ ಮೃತರ ಕುಟುಂಬಸ್ಥರು ಭಾಗವಹಿಸಬಹುದು ಎಂದು ಹೇಳಿದರು.
ವಾರದೊಳಗೆ ಸ್ಮಾರಕ ಪಾರ್ಕ್ ಕಾಮಗಾರಿ ಆರಂಭ
ತಣ್ಣೀರುಬಾವಿಯ ಎನ್‌ಎಂಪಿಟಿಯ ಸುಮಾರು 90 ಸೆಂಟ್ಸ್ ಭೂಮಿಯಲ್ಲಿ ವಿಮಾನ ದುರಂತದಲ್ಲಿ ಮಡಿದವರ ಸ್ಮರಣಾರ್ಥ 22/5 ಹೆಸರಿನಲ್ಲಿ ಸ್ಮಾರಕ ಪಾರ್ಕ್ (ಉದ್ಯಾನವನ) ನಿರ್ಮಿಸುವ ಕಾಮಗಾರಿ ಒಂದು ವಾರದೊಳಗೆ ಆರಂಭಗೊಳ್ಳಲಿದೆ ಎಂದು ಜಿಲ್ಲಾಕಾರಿ ಎ.ಬಿ. ಇಬ್ರಾಹೀಂ ತಿಳಿಸಿದ್ದಾರೆ.
ತಡವಾಗಿ ಆಗಮಿಸಿದ ಉಸ್ತುವಾರಿ ಸಚಿವ
ವಿಮಾನ ದುರಂತದಲ್ಲಿ ಮೃತಪಟ್ಟವರ ಸ್ಮರಣಾರ್ಥ ವಿಮಾನ ನಿಲ್ದಾಣದ ಬಳಿ 9:20ಕ್ಕೆ ಶ್ರದ್ಧಾಂಜಲಿ ಸಭೆಯನ್ನು ನಿಗದಿಪಡಿಸಲಾಗಿತ್ತು. ಅಷ್ಟು ಹೊತ್ತಿಗಾಗಲೇ ಸಂಸದರು, ಜಿಲ್ಲಾಕಾರಿ ಸೇರಿದಂತೆ ಅ ಕಾರಿಗಳು ಸ್ಥಳದಲ್ಲಿದ್ದರು. ಆದರೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವರ ಆಗಮನಕ್ಕಾಗಿ ಬಂದವರೆಲ್ಲಾ ಸುಮಾರು ಅರ್ಧ ಗಂಟೆ ಕಾಯಬೇಕಾಯಿತು.