ಮಂಗಳೂರು, ಮೇ.29: ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 227 ಗ್ರಾಮ ಪಂಚಾಯತ್‍ಗಳ ವಿವಿಧ ಸ್ಥಾನಗಳಿಗೆ ಸ್ಪರ್ಧಿಸಿರುವ 7,619 ಅಭ್ಯರ್ಥಿಗಳ ಭವಿಷ್ಯ ಬರೆಯುವ ಕಾಯಕದಲ್ಲಿ ಮತದಾರರು ಇಂದು ಬೆಳಗ್ಗಿನಿಂದಲೇ ತೊಡಗಿಸಿಕೊಂಡಿದ್ದಾರೆ.
ಜಿಲ್ಲೆಯ ಒಟ್ಟು 1,212 ಮತಗಟ್ಟೆಗಳಲ್ಲಿ ಇಂದು ಚುನಾವಣೆ ನಡೆಯುತ್ತಿದೆ. ಈ ಪೈಕಿ ಮಂಗಳೂರು ತಾಲೂಕಿನಲ್ಲಿ 55 ಗ್ರಾಮ ಪಂಚಾಯತ್‍ಗಳ ಪೈಕಿ 147 ಸೂಕ್ಷ್ಮ, 47 ಅತೀ ಸೂಕ್ಷ್ಮ ಸೇರಿ 343, ಬಂಟ್ವಾಳ ತಾಲೂಕಿನ 57 ಗ್ರಾಮ ಪಂಚಾಯತ್‍ಗಳ ಪೈಕಿ 55 ಸೂಕ್ಷ್ಮ, 58 ಅತೀ ಸೂಕ್ಷ್ಮ ಸೇರಿ 313, ಬೆಳ್ತಂಗಡಿ ತಾಲೂಕಿನ 46 ಗ್ರಾಮ ಪಂಚಾಯತ್‍ಗಳ ಪೈಕಿ 49 ನಕ್ಸಲ್ ಪೀಡಿತ, 48 ಸೂಕ್ಷ್ಮ, 27 ಅತೀ ಸೂಕ್ಷ್ಮ ಸೇರಿದಂತೆ ಒಟ್ಟು 323, ಪುತ್ತೂರಿನ 41 ಗ್ರಾಮ ಪಂಚಾಯತ್‍ಗಳ ಪೈಕಿ 5 ನಕ್ಸಲ್ ಪೀಡಿತ, 78 ಸೂಕ್ಷ್ಮ ಹಾಗೂ 34 ಅತೀ ಸೂಕ್ಷ್ಮ ಸೇರಿದಂತೆ 221 ಹಾಗೂ ಸುಳ್ಯದ 28 ಗ್ರಾಮ ಪಂಚಾಯತ್‍ಗಳ ಪೈಕಿ 50 ಸೂಕ್ಷ್ಮ, 17 ಅತೀ ಸೂಕ್ಷ್ಮ ಸೇರಿದಂತೆ 112 ಮತಗಟ್ಟೆಗಳಲ್ಲಿ ಇಂದು ಬೆಳಗ್ಗಿನಿಂದಲೇ ಹಕ್ಕು ಚಲಾಯಿಸಲು ಮತದಾರ ಉತ್ಸಾಹ ತೋರಿರುವುದು ಕಂಡುಬಂತು.
ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ವ್ಯಾಪಕ ಭದ್ರತೆ ಒದಗಿಸಿದ್ದು, ಸಣ್ಣಪುಟ್ಟ ಘಟನೆ ಹೊರತುಪಡಿಸಿ ಮತದಾನ ಶಾಂತಿಯುತವಾಗಿ ಮುಂದುವರಿದಿದೆ. ನಕ್ಸಲ್ ಪೀಡಿತ ಮತಗಟ್ಟೆಗಳಲ್ಲಿ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ. ಬೆಂಗಳೂರು, ಮಂಗಳೂರು ನಗರದ ಪೊಲೀಸರು, ಕೆಎಸ್‍ಆರ್‍ಪಿ, ಕೇರಳದ ಪೊಲೀಸ್ ಸಿಬ್ಬಂದಿಗಳು, ಎಎನ್‍ಎಫ್ ಸೇರಿದಂತೆ ಸುಮಾರು 2 ಸಾವಿರ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಇದಲ್ಲದೆ 61 ಸೆಕ್ಟರ್ ಮೊಬೈಲ್ ಸ್ಕ್ವಾಡ್, 15 ಚೆಕ್ ಪೋಸ್ಟ್, ಸಿಸಿಟಿವಿ, ವೀಡಿಯೋ ಚಿತ್ರೀಕರಣವನ್ನೂ ಕೈಗೊಳ್ಳಲಾಗಿದೆ. ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 59 ಸೆಕ್ಟರ್ ಮೊಬೈಲ್ ಸ್ಕ್ವಾಡ್, 20 ಸಿಸಿಟಿವಿ, ಕೆಎಸ್‍ಆರ್‍ಪಿ ಸೇರಿದಂತೆ ಸುಮಾರು 500ರಷ್ಟು ಪೊಲೀಸರನ್ನು ಭದ್ರತೆಗೆಂದು ನಿಯೋಜಿಸಲಾಗಿದೆ ಎಂದು ಇಲಾಖಾ ಮೂಲಗಳು ತಿಳಿಸಿವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಅಭ್ಯರ್ಥಿಗಳ ಪೈಕಿ, ಪರಿಶಿಷ್ಟ ಜಾತಿಯ 508 ಮತ್ತು ಪರಿಶಿಷ್ಟ ಪಂಗಡದ 445 ಹಿಂದುಳಿದ ವರ್ಗಗಳ 935 ಮತ್ತು ಹಿಂದುಳಿದ ವರ್ಗ ಬಿಯ 195 ಹಾಗೂ ಸಾಮಾನ್ಯ ವರ್ಗದಿಂದ 1,521 ಮಹಿಳಾ ಅಭ್ಯರ್ಥಿಗಳು ಸೇರಿ ಒಟ್ಟು 3,604 ಮಹಿಳೆಯರು, ಪರಿಶಿಷ್ಟ ಜಾತಿಯ 159, ಪರಿಶಿಷ್ಟ ಪಂಗಡದ 91, ಹಿಂದುಳಿದ ವರ್ಗದ 767, ಹಿಂದುಳಿದ ಬಿ ವರ್ಗದ 221 ಹಾಗೂ ಸಾಮಾನ್ಯ ವರ್ಗದ ಸೇರಿದಂತೆ ಒಟ್ಟು 4,015 ಪುರುಷರು ಕಣದಲ್ಲಿದ್ದಾರೆ.