ಮಂಗಳೂರು,ಮೇ.29 : ಭಾರತಿ ಶಿಪ್‌ಯಾರ್ಡ್ ಕಂಪನಿ ತನಗೆ ನೀಡಬೇಕಾದ ಮೊತ್ತವನ್ನು ಹಿಂದುರುಗಿಸುವಲ್ಲಿ ತೋರಿದ ನಿರ್ಲಕ್ಷದಿಂದಾಗಿ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದ ವ್ಯಕ್ತಿಯೊಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಣ್ಣೀರುಬಾವಿಯಲ್ಲಿ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡವರನ್ನು ಪಣಂಬೂರು ತಣ್ಣೀರುಬಾವಿ ಭಾರತೀ ಶಿಪ್‍ಯಾರ್ಡ್‍ನಲ್ಲಿ ಉಪ ಗುತ್ತಿಗೆದಾರನಾಗಿರುವ ಉತ್ತರ ಪ್ರದೇಶ ಮೂಲದ ವಿಜಯ ನಾರಾಯಣ್ ವಿಶ್ವಕರ್ಮ (30) ಎಂದು ಗುರುತಿಸಲಾಗಿದೆ.
ಭಾರತಿ ಶಿಪ್‍ಯಾರ್ಡ್‍ನಲ್ಲಿ ನಾಲ್ಕೂವರೆ ವರ್ಷದಿಂದ ಕೆಲಸ ಮಾಡುತ್ತಿದ್ದ ಇವರಿಗೆ ಸಂಸ್ಥೆಯು ಸುಮಾರು 10 ಲಕ್ಷಕ್ಕೂ ಮಿಕ್ಕಿ ಮೊತ್ತವನ್ನು ಬಾಕಿ ಇರಿಸಿಕೊಂಡಿತ್ತು ಎನ್ನಲಾಗಿದೆ. ಹಣ ನೀಡುವಂತೆ ಹಲವು ಸಲ ವಿನಂತಿಸಿದರೂ ಹಣ ನೀಡದ ಹಿನ್ನೆಲೆಯಲ್ಲಿ ಆರ್ಥಿಕವಾಗಿ ತೊಂದರೆಗೆ ಸಿಲುಕಿದ್ದ ಇವರು ತನ್ನ ತಣ್ಣೀರುಬಾವಿಯ ಬಾಡಿಗೆ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡೆತ್‍ನೋಟ್‍ನಲ್ಲಿ ಆತ್ಮಹತ್ಯೆಗೆ ಆರ್ಥಿಕ ಮುಗ್ಗಟ್ಟು ಕಾರಣ ಎಂದು ಬರೆದಿಡಲಾಗಿದ್ದು, ಆತ್ಮಹತ್ಯೆಗೆ ಮುನ್ನ ಭಾರತೀ ಶಿಪ್‍ಯಾರ್ಡ್ ಮ್ಯಾನೇಜರ್ ಮೊಬೈಲ್‍ಗೆ ಕರೆ ಮಾಡಿ ತನಗೆ ಬರಬೇಕಾದ ಹಣ ತನ್ನ ತಂದೆಗೆ ನೀಡಿ. ಅವರು ಸಾಲ ಪಾವತಿಸಿ ಉಳಿದ ಹಣದಲ್ಲಿ ಜೀವನ ಸಾಗಿಸಲಿ ಎಂದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪಣಂಬೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.