ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು,ಜೂನ್.17 : ಅದ್ವೀತಿಯ ಪ್ರತಿಭಾಶಾಲಿ ಕಲಾಸಾಧಕ, ಸಮಾಜ ಸೇವಕ, ದಿ| ಸ್ವರುಣ್ ರಾಜ್ ರವರ ದ್ವಿತೀಯ ವರ್ಷದ ಸ್ವರಣಾಂಜಲಿ ( ಪುಣ್ಯಸ್ಮರಣೆ) ಪ್ರಯುಕ್ತ ಸ್ವರುಣ್‌ರಾಜ್ ಪೌಂಡೇಶನ್ ಸಂಸ್ಥೆಯ ಅಶ್ರಯದಲ್ಲಿ ನಗರದ ದೇರೆಬೈಲ್ ಕೊಂಚಾಡಿಯ ವಿದ್ಯಾ ಶಿಕ್ಷಣ ಸಂಸ್ಥೆಯ ಒಂದರಿಂದ 10ನೇ ತರಗತಿವರೆಗಿನ ಎಂಟು ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಮತ್ತು ಪಠ್ಯ ಮತ್ತು ನೋಟ್ಸ್ ಪುಸ್ತಕಗಳನ್ನು ಮಂಗಳವಾರ ಶಾಲೆಯ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿತರಿಸಲಾಯಿತು.
ಶ್ರೀ ಸುರೇಶ್‌ರಾಜ್ ಮತ್ತು ಶ್ರೀಮತಿ ಮನುರಾಜ್ ದಂಪತಿಗಳ ಸುಪುತ್ರ, ಭರತನಾಟ್ಯ ಸೇರಿದಂತೆ ವಿವಿಧ ರಂಗಗಳಲ್ಲಿ ಪ್ರತಿಭಾನ್ವಿತನಾಗಿದ್ದ ಸ್ವರುಣ್ ರಾಜ್ ಅವರು ಎರಡು ವರ್ಷಗಳ ಹಿಂದೆ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು. ಅವರ ನೆನಪಿಗಾಗಿ ಸ್ವರುಣ್ ರಾಜ್ ಅವರ ಪೋಷಕರು ಸ್ವರುಣ್‌ರಾಜ್ ಪೌಂಡೇಶನ್ ಸಂಸ್ಥೆಯನ್ನು ಆರಂಭಿಸಿ, ನಗರದ ವಿವಿಧ ಶಾಲೆಗಳ ಬಡ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್, ಸಮವಸ್ತ್ರ ಹಾಗೂ ಉಚಿತ ಶಿಕ್ಷಣಗಳನ್ನು ನೀಡುತ್ತಾ ಬಂದಿರುತ್ತಾರೆ. ಮಾತ್ರವಲ್ಲದ ಇತ್ತೀಚಿಗೆ ನಗರದ ಶ್ರೀ ರಾಮ ಕೃಷ್ಣ ಶಾಲೆಯ ಬಡ ಮಕ್ಕಳಿಗೆ ಶಾಲಾ ಬ್ಯಾಗ್, ಸಮವಸ್ತ್ರ ಹಾಗೂ ಸಹಾಯ ಧನಗಳನ್ನು ಈ ಪೌಂಡೇಶನ್ ಮೂಲಕ ನೀಡಲಾಗಿದೆ. ಜೊತೆಗೆ ನಗರದ ಭಗಿನಿ ಸಮಾಜದಲ್ಲಿ ಸ್ವರುಣ್ ರಾಜ್ ರವರ ಜನ್ಮದಿನ ಆಚರಣೆ ನಡೆಸುವ ಮೂಲಕ ಭಗಿನಿ ಸಮಾಜದಲ್ಲಿರುವ ಮಂದಿಗೆ ತಮ್ಮಿಂದ ಸಾಧ್ಯವಾದಷ್ಟು ಸಹಾಯ ಹಸ್ತ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಪೌಂಡೇಶನ್‌ನ ಮುಖ್ಯಸ್ಥರಾದ ಶ್ರೀ ಸುರೇಶ್‌ರಾಜ್ ಅವರು ಮಾತನಾಡಿ, ಇದೀಗ ದಿ| ಸ್ವರುಣ್ ರಾಜ್ ರವರ ದ್ವಿತೀಯ ವರ್ಷದ ಸ್ವರಣಾಂಜಲಿ ಪ್ರಯುಕ್ತ ವಿದ್ಯಾ ಶಿಕ್ಷಣ ಸಂಸ್ಥೆಯ ಒಂದರಿಂದ 10ನೇ ತರಗತಿವರೆಗಿನ ಎಂಟು ಬಡ ವಿದ್ಯಾರ್ಥಿಗಳ ವಿಧ್ಯಾಭ್ಯಾಸದ ಎಲ್ಲಾ ಖರ್ಚು ವೆಚ್ಚಗಳನ್ನು ಸ್ವರುಣ್‌ರಾಜ್ ಪೌಂಡೇಶನ್ ವಹಿಸಿಕೊಂಡಿದೆ. ಮಾತ್ರವಲ್ಲದೇ ಈ ವಿದ್ಯಾರ್ಥಿಗಳ ಮುಂದಿನ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿ ಅವರು ವಿಧ್ಯಾಭ್ಯಾಸ ಹಾಗೂ ಇತರ ಚಟುವಟಿಕೆಗಳಲ್ಲಿ ಉತ್ತಮ ಫಲಿತಾಂಶಗಳಿಸಿದರೆ ಈ ವಿದ್ಯಾರ್ಥಿಗಳ ಮುಂದಿನ ಶಿಕ್ಷಣದ ಖರ್ಚುವೆಚ್ಚಗಳನ್ನು ಕೂಡ ಸ್ವರುಣ್‌ರಾಜ್ ಪೌಂಡೇಶನ್ ಸಂಸ್ಥೆಯೇ ವಹಿಸಿಕೊಳ್ಳುವುದು ಎಂದು ತಿಳಿಸಿದರು.
ಅತಿಥಿಗಳಾಗಿ ಭಾಗವಹಿಸಿದ ವಿದ್ಯಾ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಶ್ರೀಮತಿ ಬೆನೆದಿಕ್ತಾ ಗ್ರೇಸಿಯಾ ಆಳ್ವಾರಿಸ್ ಅವರು ಮಾತನಾಡಿ, ಬೆಳೆವ ಸಿರಿ ಮೊಳಕೆಯಲ್ಲಿ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆ ಮಾತು ದಿ| ಸ್ವರುಣ್ ರಾಜ್‌ರವರ ಬದುಕಿನಲ್ಲಿ ತುಂಬಾ ಅರ್ಥಪೂರ್ಣವಾಗಿದೆ. ಎಳೆಯ ಪ್ರಾಯದಲೇ ಅತ್ಯುತ್ತಮ ಸಾಧನೆ ಮಾಡಿದ ಸ್ವರುಣ್ ರಾಜ್‌ರವರು ಈಗ ನಮ್ಮೊಂದಿಗಿಲ್ಲ. ಆದರೆ ಅವರ ನೆನಪು, ಸಾಧನೆ ಮಾತ್ರ ಎಂದೆಂದಿಗೂ ಚಿರಾಯುವಾಗಿದೆ ಎಂದರು.
ತಮ್ಮ ಮಗನ ಸಾಧನೆ ಇನ್ನೊಬ್ಬರಿಗೆ ಆದರ್ಶ ಪ್ರಾಯವಾಗಲಿ ಎಂದು ಆಶಿಸಿ ಅವರ ತಂದೆ ತಾಯಿಯವರಾದ ಸುರೇಶ್‌ರಾಜ್ ಮತ್ತು ಮನುರಾಜ್‌ರವರು ತಮ್ಮ ಮಗನ ಹೆಸರಿನಲ್ಲಿ ಸ್ವರುಣ್‌ರಾಜ್ ಪೌಂಡೇಶನ್ ಸಂಸ್ಥೆಯನ್ನು ಪ್ರಾರಂಭಿಸಿ ನಗರದ ಶಾಲೆಯ ಪ್ರತಿಭಾವಂತ ಬಡ ಮಕ್ಕಳಿಗೆ ವಿವಿಧ ಪ್ರೋತ್ಸಾಹಗಳನ್ನು ನೀಡುತ್ತಾ ಬಂದಿದ್ದಾರೆ. ಇದೀಗ ನಮ್ಮ ವಿದ್ಯಾ ಶಿಕ್ಷಣ ಸಂಸ್ಥೆಯ ೮ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಪಠ್ಯ ಮತ್ತು ನೋಟ್ಸ್ ಪುಸ್ತಕಗಳನ್ನು ವಿತರಿಸಿದ್ದಾರೆ. ಅವರ ಈ ಒಂದು ಉತ್ತಮ ಸೇವೆಗೆ ದೇವರು ಅವರನ್ನು ಆಶೀರ್ವದಿಸಿ ಅವರ ಮಗ ದಿ| ಸ್ವರುಣ್‌ರಾಜ್‌ವರರ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ ಎಂದು ನಾವು ಮನಃ ಪೂರ್ವಕವಾಗಿ ಶ್ರೀದೇವರಲ್ಲಿ ಕೇಳಿಕೊಳ್ಳುತ್ತಿದ್ದೇವೆ. ಜೊತೆಗೆ ಈ ಒಂದು ಉತ್ತಮ ಸೇವಾಕಾರ್ಯ ಕೈಗೊಂಡಿರುವ ಸ್ವರುಣ್‌ರಾಜ್‌ವರರ ಫೋಷಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಶ್ರೀಮತಿ ಬೆನೆದಿಕ್ತಾ ಗ್ರೇಸಿಯಾ ಆಳ್ವಾರಿಸ್ ತಿಳಿಸಿದರು.
ಸ್ವರುಣ್‌ರಾಜ್ ಪೌಂಡೇಶನ್ ಸಂಸ್ಥೆಯ ಕಸ್ತೂರಿ ಶರಣ್ ರಾಜ್, ಜಾನ್ವಿ, ರಾವ್ಸ್ ಲ್ಯಾಂಡ್ ಡೆವಲಪ್ಸ್ ಮತ್ತು ಪ್ರೋಮೊಟರ್‍ಸ್ ಮಾಲಕ ಪಿ.ನರಸಿಂಹರಾವ್, ವರುಣ್‌ರಾವ್, ಇಂದಿರಾಗಾಂಧಿ ಮೆಮೇರಿಯಲ್ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸಂಪಾವತಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಶಿಕ್ಷಕರುಗಳಾದ ಕು| ರೀಮಾ ಸಿಕ್ವೇರ ಸ್ವಾಗತಿಸಿದರು.ಶ್ರೀಮತಿ ಚಂದ್ರಾವತಿ ಕಾರ್ಯಕ್ರಮ ನಿರೂಪಿಸಿದರು, ಶ್ರೀಮತಿ ನಾಗಮ್ಮ ವಂದನಾರ್ಪಣೆ ಮಾಡಿದರು.