ಮಂಗಳೂರು/ಮೂಡುಬಿದಿರೆ,ಜೂನ್.20 : ಮನೆಯಲ್ಲಿ ನಿತ್ಯ ಜಗಳ ಮಾಡುತ್ತಿದ್ದ ಸಹೋದರನನ್ನು ಕೊಲೆ ಮಾಡಿದ ಇಬ್ಬರು ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ದರೆಗುಡ್ಡೆ ಗ್ರಾ.ಪಂ. ವ್ಯಾಪ್ತಿಯ ಕೆಲ್ಲಪುತ್ತಿಗೆ ಗ್ರಾಮದ ಕೆಸನಬೆಟ್ಟು ಎಂಬಲ್ಲಿನ ದಿನೇಶ್ ರಾವ್ (35) ಬುಧವಾರ ರಾತ್ರಿ ಕೊಲೆಯಾಗಿದ್ದು, ಆರೋಪಿ ಸಹೋದರರಾದ ಜಗದೀಶ್ ರಾವ್ (30) ಮತ್ತು ಸುರೇಶ್ ರಾವ್ (42) ಅವರನ್ನು ಬಂಧಿಸಲಾಗಿದೆ.
ಕೆಲ್ಲಪುತ್ತಿಗೆಯಲ್ಲಿ ನೆಲೆಸಿರುವ ಸುರೇಶ್ ರಾವ್ ಮನೆ ಸಮೀಪ ಅಂಗಡಿ ಮತ್ತು ತೋಟವನ್ನು ಹೊಂದಿದ್ದರೆ, ಜಗದೀಶ್ ರಾವ್ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅರ್ಚಕರಾಗಿದ್ದಾರೆ. ಮೃತ ದಿನೇಶ್ ರಾವ್ ಕಾರ್ಕಳದಲ್ಲಿ ಮೆಕ್ಯಾನಿಕ್ ವೃತ್ತಿ ನಡೆಸುತ್ತಿದ್ದರು. ದಿನೇಶ್ ರಾವ್ ಕುಡಿತದ ಚಟ ಹೊಂದಿದ್ದು, ನಿತ್ಯ ಮನೆಯಲ್ಲಿ ಜಗಳ ಮಾಡುತ್ತಿದ್ದರೆನ್ನಲಾಗಿದೆ. ಬುಧವಾರ ರಾತ್ರಿ ಮೂವರು ಸಹೋದರರೊಳಗೆ ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಗಿದೆ. ಈ ವೇಳೆ ಜಗದೀಶ್ ರಾವ್ ಕಬ್ಬಿಣದ ಸರಳಿನಿಂದ ದಿನೇಶ್ ರಾವ್ ಅವರ ತಲೆಗೆ ಬಡಿದಿದ್ದರು. ತೀವ್ರ ಹೊಡೆತಕ್ಕೆ ಸಿಲುಕಿದ ದಿನೇಶ್ ರಾವ್ ಪ್ರಜ್ಞೆ ತಪ್ಪಿ ಬಿದ್ದು ಮೃತಪಟ್ಟಿದ್ದರು. ಮನೆಯಲ್ಲಿ ತಾಯಿ ಮತ್ತಿತರರು ಘಟನೆಯನ್ನು ಪ್ರತ್ಯಕ್ಷ ಕಂಡು ಕೂಗಿಕೊಂಡಿದ್ದರು. ನೆರೆಹೊರೆಯವರಿಗೆ ವಿಷಯ ತಿಳಿಯಬಾರದೆಂದು ಇಬ್ಬರೂ ಸೇರಿ ಆಸ್ಪತ್ರೆಗೆ ಸೇರಿಸುವುದಾಗಿ ಹೇಳಿ ದೇಹವನ್ನು ಅಲ್ಲಿಂದ ಎತ್ತಿ ಮನೆಯ ಹಿಂಭಾಗದಲ್ಲಿರುವ ಕೆರೆಗೆ ಎಸೆದು ಮನೆಗೆ ಬಂದಿದ್ದು, ಮನೆಯಲ್ಲಿ ಆಸ್ಪತ್ರೆಗೆ ಸೇರಿಸಿರುವುದಾಗಿ ಸುಳ್ಳು ಹೇಳಿದ್ದರು.
ಗುರುವಾರ ಬೆಳಗ್ಗೆ ಕೆರೆಯಲ್ಲಿ ಮೃತದೇಹ ತೇಲುತ್ತಿರುವುದನ್ನು ಸಾರ್ವಜನಿಕರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೂಡುಬಿದಿರೆ ವೃತ್ತ ನಿರೀಕ್ಷಕ ಅನಂತಪದ್ಮನಾಭ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಇಬ್ಬರೂ ಸೇರಿ ಕೊಲೆ ಮಾಡಿರುವ ಸತ್ಯವನ್ನು ಬಾಯಿ ಬಿಟ್ಟಿದ್ದಾರೆ. ಮೃತ ದಿನೇಶ್ ರಾವ್ ಅವಿವಾಹಿತರಾಗಿದ್ದಾರೆ. ಇಬ್ಬರ ವಿರುದ್ಧವೂ ಕೊಲೆ ಪ್ರಕರಣ ದಾಖಲಿ ಸಿರುವ ಪೊಲೀಸರು ಆರೋಪಿಗಳನ್ನು ಮೂಡುಬಿದಿರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಪಣಂಬೂರು ಎಸಿಪಿ ರವಿ ಕುಮಾರ್ ಭೇಟಿ ನೀಡಿದ್ದಾರೆ.