ಕುಂದಾಪುರ: ಬೀಜಾಡಿ ಕಡಲ ತೀರದ ನಿವಾಸಿಗಳಿಗೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ, ಅವರ ಮುಖದಲ್ಲೀಗ ಸಂತಸದ ನಗು. ಯಾಕೆ ಗೊತ್ತಾ.. ಒಂದು ವಾರದಿಂದ ವಿದ್ಯುತ್ ಸಂಪರ್ಕವಿಲ್ಲದೇ ಕತ್ತಲಲ್ಲಿ ದಿನಗಳೆಯುತ್ತಿದ್ದ ಸುಮಾರು ಮೂವತ್ತಕ್ಕೂ ಅಧಿಕ ಮನೆಗಳಿಗೆ ಶುಕ್ರವಾರ ಸಂಜೆ ಸುಮಾರಿಗೆ ವಿದ್ಯುತ್ ಸಂಪರ್ಕ ಬಂದಿದೆ.
ಬೀಜಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಗೋಪಾಡಿ ಚಿಕ್ಕು ಅಮ್ಮ ದೈವಸ್ಥಾನದ ಹಿಂಭಾಗದ ಸಮುದ್ರ ತೀರಕ್ಕೆ ಸಂಪರ್ಕಿಸುವ ಈ ರಸ್ತೆಯ ಮೂವತ್ತಕ್ಕು ಅಧಿಕ ಮನೆಗಳು ಇಷ್ಟು ದಿನಗಳ ಕಾಲ ಕತ್ತಲಲ್ಲಿ ದಿನ ದೂಡಿದ್ದರು. ಅಷ್ಟಕ್ಕೂ ಆಗಿದ್ದೇನೆಂದರೇ ಕಳೆದ ಶುಕ್ರವಾರ ಸಂಜೆ ಬೀಸಿದ ಭಾರೀ ಗಾಳಿಗೆ ಹತ್ತಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಈ ಬಗ್ಗೆ ಸ್ಥಳೀಯರು ಸ್ಥಳೀಯ ಗೋಪಾಡಿ ಮೆಸ್ಕಾಂ ವಿಭಾಗಕ್ಕೆ ದೂರು ನೀಡಿದರಾದರೂ ಕೂಡ ಕೆಳಗುರುಳಿದ ವಿದ್ಯುತ್ ಕಂಬಗಳನ್ನು ಪುನಃ ಅಳವಡಿಸಲು ಈ ಭಾಗದ ಗದ್ದೆಗಳಲ್ಲಿ ನೀರು ನಿಂತ ಕಾರಣ ದುರಸ್ಥಿ ಕಾರ್ಯಕ್ಕೆ ಇಲಾಖೆ ಮೀನಾಮೇಷ ಎಣಿಸಿತ್ತು.
ಗೋಪಾಡಿ ಮೆಸ್ಕಾಂ ವಿಭಾಗದ ಅಧಿಕಾರಿಗಳು ಹಾಗೂ ಕುಂದಾಪುರ ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಇಲಾಖೆ ಶುಕ್ರವಾರ ಬೆಳಿಗ್ಗೆನಿಂದಲೇ ಕೆಲಸ ಆರಂಭಿಸಿದೆ.
ಶುಕ್ರವಾರ ಬೆಳಿಗ್ಗೆನಿಂದ ಮುರಿದುಬಿದ್ದ ವಿದ್ಯುತ್ ಕಂಬಗಳ ಬದಲಿಗೆ ಹೊಸ ಕಂಬಗಳನ್ನು ಅಳವಡಿಸಿ, ವಿದ್ಯುತ್ ತಂತಿಗಳನ್ನು ಸರಿಪಡಿಸುವ ಕಾರ್ಯವನ್ನು ಸಮರೋಪಾದಿಯಲ್ಲಿ ಮಾಡಿದ ಇಲಾಖೆ ಶುಕ್ರವಾರ ಸಂಜೆ ೬ ಗಂಟೆ ವೇಳೆಗೆ ಸ್ಥಳಿಯ ಮೂವತ್ತಕ್ಕೂ ಅಧಿಕ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಟ್ಟಿದೆ.
ವಾರವಾದ್ರೂ ವಿದ್ಯುತ್ ಇಲ್ಲದೇ ಪರಿಪಾಡಲು ಪಟ್ಟ ಜನರು ಇದೀಗಾ ಶೀಘ್ರವೇ ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ.
ವರದಿ- ಯೋಗೀಶ್ ಕುಂಭಾಸಿ