ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು : ನಗರದ ಎಕ್ಕೂರಿನ ಕೃಷಿ ವಿಜ್ಞಾನ ಕೇಂದ್ರದ ಮೀನುಗಾರಿಕೆ ಕಾಲೇಜು ಆವರಣದಲ್ಲಿ ಅಯೋಜಿಸಲಾದ “ಹಲಸಿನ ಮೇಳ”ವನ್ನು ಶನಿವಾರ ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಅಶಾ ತಿಮ್ಮಪ್ಪ ಗೌಡ ಅವರು ವಸ್ತು ಪ್ರದರ್ಶನ ಮಳಿಗೆಯನ್ನು ಉದ್ಘಾಟಿಸಿದರು. ದ.ಕ.ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಡಿ.ಸಂಪತ್ ಸಾಮ್ರಾಜ್ಯ ಅವರು ದಿಕ್ಸೂಚಿ ಭಾಷಣ ಮಾಡಿದರು.ಮೀನುಗಾರಿಕ ಮಹಾವಿದ್ಯಾಲಯದ ಡೀನ್ ಡಾ.ಕೆ.ಎಮ್.ಶಂಕರ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಕೃಷಿ ವಿಜ್ಞಾನ ಕೇಂದ್ರದ ದಶಮಾನೋತ್ಸವದ ಅಂಗವಾಗಿ ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕಾ ವಿಜ್ಞಾನ ವಿಶ್ವವಿದ್ಯಾನಿಲಯ ಮತ್ತು ತೋಟಗಾರಿಕಾ ಇಲಾಖೆಯ ಸಂಯುಕ್ತ ಅಶ್ರಯದಲ್ಲಿ ಈ ಹಲಸಿನ ಮೇಳವನ್ನು ಆಯೋಜಿಸಲಾಗಿತ್ತು. ಹಲಸಿನ ಕಾಯಿಯ ವಿಧ ವಿಧದ ಖಾದ್ಯಗಳ ಪ್ರಾತ್ಯಕ್ಷಿತೆ. ಹಲಸಿನ ಉತ್ಪನ್ನಗಳ ಪ್ರದರ್ಶನ, ವೆರೈಟಿ ಖಾದ್ಯಗಳ ರುಚಿಯನ್ನು ಚಪ್ಪರಿಸುತ್ತಿರುವ ಹಲಸು ಪ್ರಿಯರು. ಈ ದೃಶ್ಯಗಳೆಲ್ಲ ಹಲಸು ಮೇಳದಲ್ಲಿ ಗಮನ ಸೆಳೆಯುತ್ತಿತ್ತು.
ಇಲ್ಲಿ ಹಲಸಿನ ಹಣ್ಣಿನಿಂದ ತಯಾರಿಸಿದ ಖಾದ್ಯಗಳಾದ ಗಟ್ಟಿ, ಇಡ್ಲಿ, ದೋಸೆ, ಅಪ್ಪ, ಕೇಸರಿಬಾತ್, ಪಾಯಸ, ಬಾಯಲ್ಲೆ ನೀರೂರಿಸುವಂತಿತ್ತು. ಹಲಸಿನ ಹಣ್ಣಿನ ಜಾಮ್, ಐಸ್‌ಕ್ರೀಂ, ಜ್ಯೂಸ್, ಚಿಪ್ಸ್, ಹಪ್ಪಳ ಒಣಗಿಸಿದ ಹಲಸಿನ ಬೀಜ, ವಿಧ ವಿಧ ತಳಿಯ ಹಲಸಿನ ಹಣ್ಣುಗಳ ಖರೀದಿಯಲ್ಲಿ ಜನ ಮುಗಿಬಿದ್ದಿದ್ದರು. ಅಲ್ಲದೆ ಹಲಸಿ ಬೇರೆ ಬೇರೆ ತಳಿ ಗಿಡಗಳು ಇಲ್ಲಿ ಮಾರಾಟಕಿದ್ದವು. ಈ ಮೇಳದಲ್ಲಿ 50ಕ್ಕೂ ಹೆಚ್ಚು ಖಾದ್ಯ, ಉತ್ಪನ್ನಗಳು ಎಲ್ಲರ ಗಮನ ಸೆಳೆದವು.
ಮನೆಗಳ ಪೀಠೋಪಕರಣಕ್ಕಾಗಿ ಹಲಸಿನ ಕೃಷಿಯನ್ನು ನಾಶ ಮಾಡುತ್ತಿದ್ದು, ಹಲಸಿನ ಕುರಿತು ಜನರಲ್ಲಿ ಅರಿವು ಆಕರ್ಷಣೆ ಮೂಡಿಸುವುದಕ್ಕಾಗಿ ಹಾಗೂ ಹಲಸಿನ ಮೌಲ್ಯವರ್ಧನೆಗಾಗಿ ಈ ಹಲಸಿನ ಮೇಳವನ್ನು ಅಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ “ಹಲಸಿನ ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳ ಹಾಗೂ ಖಾದ್ಯಗಳ ತಯಾರಿಕೆ”ಯ ಪ್ರಾತ್ಯಕ್ಷಿಕೆ ಕುರಿತು ಕು.ಶ್ವೇತಾ.ಬಿ.ಕೆ ಹಾಗೂ ಶ್ರೀಮತಿ ಸುಮಾ ರಂಗಪ್ಪ ಅವರಿಂದ ವಿಚಾರಗೋಷ್ಠಿ ನಡೆಯಿತು. “ಹಲಸಿನ ಬೆಳೆಗಾರರ ಸಂಘದ ಕಾರ್ಯಚಟುವಟಿಕೆಗಳು” ಎಂಬ ವಿಷಯದ ಬಗ್ಗೆ ಹಲಸು ಬೆಳೆಗಾರರ ಸಂಘದ ಕಾರ್ಯದರ್ಶಿಗಳಾದ ರವಿಕುಮಾರ್ ಅವರು ಉಪನ್ಯಾಸ ನೀಡಿದರು.
ವರದಿ / ಚಿತ್ರ : ಸತೀಶ್ ಕಾಪಿಕಾಡ್