ಕನ್ನಡ ವಾರ್ತೆಗಳು

ಅಮಲ ಭಾರತದ 51ನೆ ಸ್ವಚ್ಛತಾ ಅಭಿಯಾನಕ್ಕೆ ಸಚಿವ ವಿನಯ ಕುಮಾರ್ ಸೊರಕೆ ಚಾಲನೆ

Pinterest LinkedIn Tumblr

Amala_Bharat_Sorake_1

ಮಂಗಳೂರು, ಜೂ.29: ಅಮೃತಾನಂದ ಮಠದ ವತಿ ಯಿಂದ ನಡೆದಿರುವ ಅಮಲ ಭಾರತ ಅಭಿಯಾನ ದೇಶಕ್ಕೆ ನೀಡಿರುವ ಅಪೂರ್ವ ಕೊಡುಗೆ. ಕೇಂದ್ರ ಸರಕಾರದ ‘ಸ್ವಚ್ಛ ಭಾರತ’ ಕಾರ್ಯಕ್ರಮಕ್ಕೆ ಮಾತಾ ಅಮೃತಾನಂದಮಯಿಯವರ ‘ಅಮಲ ಭಾರತ’ ಪ್ರೇರಣೆಯಾಗಿದೆ ಎಂದು ರಾಜ್ಯ ನಗರಾ ಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.

ಮಾತಾ ಅಮೃತಾನಂದಮಯಿ ಮಠದ ವತಿಯಿಂದ ರವಿವಾರ ನಗರದ ಸುಲ್ತಾನ್ ಬತ್ತೇರಿ ರಸ್ತೆಯಲ್ಲಿರುವ ಅಮೃತ ವಿದ್ಯಾಲಯಂನಲ್ಲಿ ನಡೆದ 51ನೆ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಅನೇಕ ವಿಚಾರಗಳಲ್ಲಿ ಮುಂದಿರುವ ದೇಶದ ಜನತೆ ಸಾರ್ವಜನಿಕ ಸ್ವಚ್ಛತೆಯಲ್ಲೂ ಮುಂದೆ ಬರಬೇಕು.ಮನೆ-ಮನ, ಕುಟುಂಬಕ್ಕೆ ಸೀಮಿತವಾಗದೆ ಸಮಾಜವೇ ಕುಟುಂಬ ಎನ್ನುವ ಚಿಂತನೆ ಮೂಡಿದಾಗ ಸ್ವಚ್ಛತಾ ಕಾರ್ಯ ಯಶಸ್ವಿಗೊಳ್ಳುತ್ತದೆ ಎಂದು ಸೊರಕೆ ಅಭಿಪ್ರಾಯಪಟ್ಟರು.

Amala_Bharat_Sorake_2 Amala_Bharat_Sorake_3 Amala_Bharat_Sorake_4 Amala_Bharat_Sorake_5 Amala_Bharat_Sorake_6 Amala_Bharat_Sorake_7 Amala_Bharat_Sorake_8

ಆಶೀರ್ವಚನ ನೀಡಿದ ಮಂಗಳೂರು ರಾಮಕೃಷ್ಣ ಮಠದ ಶ್ರೀ ಜಿತಕಾಮಾನಂದಜಿ ಸಾರ್ವಜನಿಕ ಸ್ವಚ್ಛತೆಗೆ ಹೆಚ್ಚು ಒತ್ತುಕೊಟ್ಟಿರುವ ಭಾರತೀಯರು ಇದೀಗ ಸಾಕಷ್ಟು ಬದಲಾವಣೆಯಾಗಿದ್ದಾರೆ. ಇದಕ್ಕೆ ಅಮಲ ಭಾರತ ಅಭಿಯಾನವೇ ಉದಾಹರಣೆ ಎಂದರಲ್ಲದೆ, ಮಂಗಳೂರು ಶೈಕ್ಷಣಿಕ ಕ್ಷೇತ್ರದಲ್ಲಿ ಮುಂದಿದೆ. ಅದರೊಂದಿಗೆ ರೋಗಗಳ ತಾಣವಾಗಿಯೂ ರೂಪು ಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ನುಡಿದರು.

ಗೌರವಾರ್ಪಣೆ: ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಯಶಸ್ಸಿಗೆ ಶ್ರಮಿಸಿದ ಪರಿಸರವಾದಿ ಕೃಷ್ಣಪ್ಪ, ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ಆಯುಕ್ತ ಎನ್.ಜಿ.ಮೋಹನ್, ಮಂಗಳೂರು ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ಮಾಧವ ಸುವರ್ಣ, ರೋಶನಿ ನಿಲಯದ ವಿನೀತಾ ರೈ ಹಾಗೂ ಗೀತಾ ಬಾಲಚಂದ್ರರನ್ನು ಸಚಿವರು ಸನ್ಮಾನಿಸಿದರು. ಅಭಿಯಾನದ ಸೇವಾರ್ಥಿಗಳು ಹಾಗೂ ಸಂಘ ಸಂಸ್ಥೆಗಳಿಗೆ ಗೌರವಪತ್ರ ನೀಡಲಾಯಿತು.

ಅಮಲ ಭಾರತ ಅಭಿಯಾನ ಸಮಿತಿ ಅಧ್ಯಕ್ಷ ಡಾ. ಜೀವರಾಜ್ ಸೊರಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಅಭಿಯಾನ ಸಮಿತಿಯ ಶ್ರೀನಿವಾಸ ಶೆಟ್ಟಿಗಾರ್ ಉಪಸ್ಥಿತರಿದ್ದರು. ಅಭಿಯಾನ ಸಮಿತಿಯ ಶೃತಿ ಸನತ್ ಹೆಗ್ಡೆ ಸ್ವಾಗತಿಸಿದರು. ಮಂಜುನಾಥ ರೇವಣ್ಕರ್ ವಂದಿಸಿದರು. ಸೇವಾ ಸಮಿತಿಯ ಡಾ. ದೇವದಾಸ್ ನಿರೂಪಿಸಿದರು.

Write A Comment