ಕುಂದಾಪುರ: ಕಳೆದ ಐದು ದಿನಗಳ ಹಿಂದೆ (ಜೂ.24) ತನ್ನ ಮನೆಯಿಂದ ಸಮೀಪದ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದ ಮಹಿಳೆಯೋರ್ವರು ಇನ್ನೂ ನಾಪತ್ತೆಯಾಗದೇ ಯಾವುದೇ ಸುಳಿವು ಸಿಗದೇ ಇದ್ದು ಪ್ರಕರಣವಿನ್ನು ನಿಗೂಢವಾಗಿಯೇ ಉಳಿದಿದೆ.
ಕುಂದಾಪುರದ ತೆಕ್ಕಟ್ಟೆ ಸಮೀಪದ ಕೊರ್ಗಿ ಚಾರುಕೊಟ್ಟಿಗೆ ನಿವಾಸಿ ಮಾಲತಿ ಬಿ. ಶೆಟ್ಟಿ (65) ಎನ್ನುವವರೇ ನಿಗೂಢವಾಗಿ ನಪತ್ತೆಯಾಗಿರುವವರು.
ಜೂ.24 ರಂದು ಬೆಳಿಗ್ಗೆ ತಮ್ಮ ಮನೆಯಿಂದ ಪಕ್ಕದ ಮನೆಗೆ ಹೋಗಿ ಬರುವುದಾಗಿ ತಿಳಿಸಿ ಹೋರಗೆ ತೆರಳಿದ್ದ ಮಾಲತಿ ಶೆಟ್ಟಿ ಮನೆಗೆ ವಾಪಾಸಾಗದಿದ್ದಾಗ ಈಕೆಯ ಮನೆಯವರು ಊರು ಹಾಗೂ ಸಂಬಂಧಿಕರ ಮನೆ ಸೇರಿದಂತೆ ಎಲ್ಲೆಡೆ ಹುಡುಕಾಟ ನಡೆಸಿ ಕುಂದಾಪುರ ಪೊಲೀಸ್ ಠಾಣೆಯಲ್ಲೂ ಈಕೆ ಕಾಣೆಯಾದ ಬಗ್ಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಕುಂದಪುರ ಎಸ್ಸೈ ನಾಸೀರ್ ಹುಸೇನ್ ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಅವರ ಮಾರ್ಗದರ್ಶನದಂತೆ ಸತತ ಹುಡುಕಾಟವನ್ನು ನಡೆಸುತ್ತಿದ್ದಾರೆ. ಆದರೇ ಐದು ದಿನಗಳಾದರೂ ಕಾಣೆಯಾದ ಮಾಲತಿ ಶೆಟ್ಟಿ ಮಾತ್ರ ಇನ್ನೂ ಪತ್ತೆಯಾಗಿಲ್ಲ, ಹಾಗೂ ಅವರ ಬಗ್ಗೆ ಈವರೆಗೂ ಯಾವುದೇ ಸುಳಿವೂ ಲಭ್ಯವಾಗಿಲ್ಲ.
ಆಭರಣ ಧರಿಸಿ ತೆರಳಿದ್ದರು?: ಮಾಲತಿ ಶೆಟ್ಟಿ ಮನೆಯಿಂದ ತೆರಳುವಾಗ ಚಿನ್ನದ ನಾಲ್ಕು ಬಳೆಗಳು, ಚಿನ್ನದ ಕರಿಮಣಿ, ಮೂಗೂತಿ, ಬೆಂಡೋಲೆ ಹಾಗೂ ಉಂಗುರವನ್ನು ಧರಿಸಿದ್ದರು. ಆಭರಣ ಧರಿಸಿಹೋದ ಮಹಿಳೆ ನಿಗೂಢವಾಗಿ ನಾಪತ್ತೆಯಾಗಿರುವುದು ಪೊಲಿಸರಿಗೂ ಬಿಡಿಸಲಾಗದ ಕಗ್ಗಂಟಾಗಿದ್ದು, ಮನೆಯವರು ಈ ಬಗ್ಗೆ ಆತಂಕದಲ್ಲಿದ್ದಾರೆ. ಕೊರ್ಗಿ ಪರಿಸರದ ಕಾಡು ಹಾಗೂ ವಿವಿದೆಡೆಯಲ್ಲಿ ಸ್ಥಳಿಯರು ಪೊಲೀಸರೊಂದಿಗೆ ಸೇರಿಕೊಂಡು ಹುಡುಕಾಟವನ್ನು ನಡೆಸಿದರೂ ಕೂಡ ಸೋಮವಾರ ಬೆಳಿಗ್ಗೆನವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.
ಕಾಣೆಯಾದವರ ಚಹರೆ: ಬಿಳಿ ಮೈ ಬಣ್ಣ. ಸಾಧಾರಣ ಶರೀರ, ದುಂಡು ಮುಖ, 5 ಅಡಿ 5 ಇಂಚು ಉದ್ದ ಇರುವ ಮಾಲತಿ ಶೆಟ್ಟಿ ಕ್ರೀಮ್ ಬಿಳಿ ಬಣ್ಣದ ಸೀರೆ, ಬೇಬಿ ಪಿಂಕ್ ಬಣ್ಣದ ರವಿಕೆ ಧರಿಸಿದ್ದರು ಎನ್ನಲಾಗಿದೆ.
ಮಾಲತಿ ಶೆಟ್ಟಿ ಬಗ್ಗೆ ಯಾವುದೇ ಮಾಹಿತಿಗಳಿದ್ದಲ್ಲಿ ಕುಂದಾಪುರ ಪೊಲೀಸ್ ಠಾಣೆಯವರನ್ನು ಸಂಪರ್ಕಿಸುವಂತೆಯೂ ಕೋರಲಾಗಿದೆ.