ಮಂಗಳೂರು,ಜುಲೈ.04 : ಮಂಗಳೂರಿನಿಂದ ಮೂಡಬಿದಿರೆ, ಕಾರ್ಕಳ ಮಾರ್ಗವಾಗಿ ಮುಂಬಯಿಗೆ ಸಂಚರಿಸುತ್ತಿದ್ದ ಮಂಗಳೂರು – ಮುಂಬಯಿ ವೋಲ್ವೋ (ಐರಾವತ) ಬಸ್ ಯಾನ ಜು. 2ರಿಂದ ತಾತ್ಕಲಿಕ ರದ್ದು ಪಡಿಸಿಲಾಗಿದ್ದು, ಪ್ರಯಾಣಿಕರಿಗೆ ತೀವ್ರ ಕಷ್ಟ ಅನುಭವಿಸಬೇಕಾಗಿದೆ.
ಬಸ್ ಯಾನ ರದ್ದತಿ ತಾತ್ಕಾಲಿಕ:
ಈಗ ಮಳೆಗಾಲವಾದ್ದರಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದು, ಇದರಿಂದಾಗಿ ಕಲೆಕ್ಷನ್ ಪ್ರಮಾಣ ತೀವ್ರವಾಗಿ ಕುಸಿದಿದೆ. ಆದ್ದರಿಂದ ಬಸ್ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಅಂದರೆ ಮಳೆಗಾಲ ಕಳೆದ ಬಳಿಕ ಈ ಮಾರ್ಗದಲ್ಲಿ ಮಲ್ಟಿ ಆ್ಯಕ್ಸೆಲ್ ಬಸ್ ಓಡಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ಹೆಗಡೆ ತಿಳಿಸಿದ್ದಾರೆ.
ಸಮಯಕ್ಕೆ ಸರಿಯಾಗಿ ಓಡಾಡುತ್ತಿಲ್ಲ:
ಸಮಯಕ್ಕೆ ಸರಿಯಾಗಿ ಬಸ್ ಸಂಚರಿಸಿದರೆ ಪ್ರಯಾಣಿಕರು ಸಿಗುತ್ತಾರೆ. ಈ ಬಸ್ ಸಮಯಕ್ಕೆ ಸರಿಯಾಗಿ ಓಡಾಡದ ಕಾರಣ ಪ್ರಯಾಣಿಕರ ಕೊರತೆ ಕಂಡುಬಂದಿದೆ. ಮಂಗಳೂರಿನಿಂದ ಈ ಬಸ್ ಬಿಡುವ ನಿಗದಿತ ಸಮಯ ಮಧ್ಯಾಹ್ನ 2 ಗಂಟೆ. ಆದರೆ ಸಾಮಾನ್ಯವಾಗಿ ಯಾವತ್ತೂ ಅರ್ಧ- ಮುಕ್ಕಾಲು ಗಂಟೆ ತಡವಾಗಿಯೇ ಹೊರಡುತ್ತಿತ್ತು. ಯಾವುದೇ ನಿಲ್ದಾಣಗಳಿಗೆ ಸಮಯಕ್ಕೆ ಸರಿಯಾಗಿ ಬರುತ್ತಿರಲಿಲ್ಲ. ಈ ಅನಿಶ್ಚಿತತೆಯಿಂದಾಗಿ ಕಾದು ಬೇಸತ್ತ ಪ್ರಯಾಣಿಕರು ಈ ಬಸ್ಸಿನ ಮೇಲಣ ವಿಶ್ವಾಸವನ್ನು ಕಳೆದುಕೊಳ್ಳುವಂತಾಯಿತು ಎಂದು ಈ ಬಸ್ಸಿನ ಬಳಕೆದಾರರು ಆರೋಪಿಸುತ್ತಾರೆ.
ಮಳೆಗಾಲದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಿರುವುದರಿಂದ ಖಾಸಗಿ ಬಸ್ಸಿನವರು ಪ್ರಯಾಣ ದರವನ್ನು ಇಳಿಸುವ ಮೂಲಕ ಪ್ರಯಾಣಿಕರನ್ನು ಆಕರ್ಷಿಸಲು ಪ್ರಯತ್ನಿಸುತ್ತಾರೆ. ಆದರೆ ಸರಕಾರಿ ಸಂಸ್ಥೆಯಾಗಿರುವ ಕೆಎಸ್‌ಆರ್‌ಟಿಸಿಯಲ್ಲಿ ಟಿಕೆಟ್ ದರ ಇಳಿಸುವ ಕ್ರಮ ಇಲ್ಲ. ಇದು ಕೂಡ ಕೆಎಸ್‌ಆರ್‌ಟಿಸಿ ಬಸ್ಸಿಗೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ.