ಮಂಗಳೂರು, ಜು.6: ಕಂಕನಾಡಿ ವೃತ್ತದ ಬಳಿ ಸುಮಾರು 12 ವರ್ಷಗಳ ಹಿಂದೆ ಮರು ನಾಮಕರಣ ಮಾಡಲಾಗಿದ್ದ ಕಂಕನಾಡಿ ಫಾದರ್ ಮುಲ್ಲರ್ ವೃತ್ತದಿಂದ ಮಿಲಾಗ್ರಿಸ್ ಚರ್ಚ್‌ವರೆಗಿನ ಫಳ್ನೀರ್ ರಸ್ತೆಗೆ ‘ಮದರ್ ತೆರೆಸಾ ರಸ್ತೆ’ ಎಂದು ಅಧಿಕೃತವಾಗಿ ನಾಮಫಲಕವನ್ನು ಅಳವಡಿಸಿ ಅನಾವರಣಗೊಳಿಸುವ ಸಮಾರಂಭ ರವಿವಾರ ನಡೆಯಿತು.
ಮದರ್ ತೆರೆಸಾ ಸ್ಥಾಪಿಸಿದ ಮಿಶನರೀಸ್ ಆ್ ಚಾರಿಟಿ ಸಂಸ್ಥೆಯ ಮಂಗಳೂರು ಕಾನ್ವೆಂಟ್‌ನ ಸುಪೀರಿಯರ್ ಸಿ.ಬರ್ನಾಡೆಟ್ ರಸ್ತೆಯ ನಾಮಲಕವನ್ನು ಅನಾವರಣ ಮಾಡಿದರು. ಈ ಕಾರ್ಯಕ್ರಮವನ್ನು ಆಯೋಜಿಸಿದ್ದ ಮಿಲಾಗ್ರಿಸ್ ಚರ್ಚ್‌ನ ಧರ್ಮಗುರು ಫಾ.ವಲೇರಿಯನ್ ಡಿಸೋಜ ಮತ್ತು ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಫಾ.ಮೈಕೆಲ್ ಸಾಂತುಮಯೋರ್ ಆಶೀರ್ವಚನ ನೀಡಿದರು.
ಬಡವರ, ದೀನ ದಲಿತರ, ಬೀದಿ ಬದಿಯ ರೋಗಿಗಳ ಸೇವೆಗೈದ ಮಹಾ ಮಾತೆ ಮದರ್ ತೆರೆಸಾರ ಕಾರ್ಯವೈಖರಿಯನ್ನು ಸದಾ ಕಾಲ ಸ್ಮರಿಸುವುದಕ್ಕಾಗಿ ಈ ರಸ್ತೆಗೆ ಅವರ ಹೆಸರನ್ನಿಡಲಾಗಿದೆ ಎಂದು ಮೇಯರ್ ಜೆಸಿಂತಾ ವಿಜಯಾ ಆಲ್ಫ್ರೆಡ್ ನುಡಿದರು.
ಕಾರ್ಪೊರೇಟರ್‌ಗಳಾದ ನವೀನ್ ಆರ್.ಡಿಸೋಜ, ಎ.ಸಿ. ವಿನಯರಾಜ್, ಮಾಜಿ ಉಪಮೇಯರ್‌ಜುಡಿತ್ ಮೆಸ್ಕರೇನ್ಹಸ್, ಫೋರ್‌ವಿಂಡ್ಸ್ ಜಾಹೀರಾತು ಸಂಸ್ಥೆಯ ನಿರ್ದೇಶಕ ಇ. ಫೆರ್ನಾಂಡಿಸ್, ಕೋರ್ಟ್ ವಾರ್ಡ್ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮುಖ್ಯ ಅತಿಥಿಗಳಾಗಿದ್ದರು.
ಮಿಲಾಗ್ರಿಸ್ ಚರ್ಚ್‌ನ ಉಪಾಧ್ಯಕ್ಷ ಐವನ್ ಡಿಸೋಜ, ಕಾರ್ಯದರ್ಶಿ ಸವಿಲ್ ಮಸ್ಕರೇನ್ಹಸ್ ಉಪಸ್ಥಿತರಿದ್ದರು. ಮಾಜಿ ಉಪಾಧ್ಯಕ್ಷ ಆಲ್ವಿನ್ ರೊಜಾರಿಯೊ ಸ್ವಾಗತಿಸಿ ಸಿ.ಬರ್ನಾಡೆಟ್ ವಂದಿಸಿದರು. ಮೋಲಿ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
ಪ್ರತಿಭಟನೆಗೆ ಸಿಕ್ಕ ಫಲ :
ಕಂಕನಾಡಿಯಿಂದ ಹಂಪನಕಟ್ಟೆಗೆ ಸಂಪರ್ಕಿಸುವ ಫಳ್ನೀರ್ ರಸ್ತೆಗೆ 2003ರಲ್ಲಿ ಮದರ್ ತೆರೆಸಾ ರಸ್ತೆ ಎಂದು ಮಹಾನಗರ ಪಾಲಿಕೆಯಲ್ಲಿ ನಿರ್ಣಯ ಕೈಗೊಂಡು ಮರು ನಾಮಕರಣ ಮಾಡಲಾಗಿತ್ತು. ಆದರೆ ನಾಮಫಲಕ ಅಳವಡಿಸಿರಲಿಲ್ಲ. ಮಹಾನಗರ ಪಾಲಿಕೆಯ ನಿರ್ಲಕ್ಷ್ಯವನ್ನು ಖಂಡಿಸಿ ಕಳೆದ ಜೂ.23ರಂದು ಕೋರ್ಟ್ ವಾರ್ಡ್ ಅಭಿವೃದ್ಧಿ ಸಮಿತಿಯು ಸುನಿಲ್ ಕುಮಾರ್ ಬಜಾಲ್ ನೇತೃತ್ವದಲ್ಲಿ ಮಿಲಾಗ್ರಿಸ್ ಚರ್ಚ್ ಬಳಿ ಪ್ರತಿಭಟನೆ ನಡೆಸಿತ್ತು. ಅದರ ಫಲವಾಗಿ ಈಗ ನಾಮ ಲಕ ಅಳವಡಿಸುವ ಪ್ರಕ್ರಿಯೆ ನೆರವೇರಿದೆ.