ಮಂಗಳೂರು,ಜು.6: ರಾಜ್ಯದಲ್ಲಿ ಖಾಲಿ ಇರುವ ಆಯುಷ್ ಇಲಾಖೆಯ ವೈದ್ಯರನ್ನು ನೇಮಿಸಲು ಶೀಘ್ರದಲ್ಲಿಯೇ ಸರಕಾರದಿಂದ ಕ್ರಮ ಕೈ ಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ಅವರು ರವಿವಾರ ನಗರದ ವೆನ್‌ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ದ.ಕ ಮತ್ತು ಉಡುಪಿ ಆಯುಷ್ ಫೌಂಡೇಶನ್ ವತಿಯಿಂದ ವೈದ್ಯರ ದಿನಾಚರಣೆ ಹಾಗೂ ಹಿರಿಯ ಆಯುಷ್ ವೈದ್ಯರಿಗೆ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಸುಮಾರು 500ಕ್ಕೂ ಅಧಿಕ ಆಯುಷ್ ವೈದ್ಯರ ಆವಶ್ಯಕತೆ ಇದೆ. ಈ ನಿಟಿನಲ್ಲಿ ಸರಕಾರ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಿದೆ. ದಕ್ಷಿಣ ಕನ್ನಡ ಜಿಲ್ಲಾ ಆಸ್ಪತ್ರೆಗೆ ಸರಕಾರ ಈಗಾಗಲೇ 50 ಹಾಸಿಗೆಗಳ ಆಯುಷ್ ವಿಭಾಗವನ್ನು ಮಂಜೂರು ಮಾಡಿದೆ. ಈ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಪ್ರಸಕ್ತ ಕೇಂದ್ರ ಸರಕಾರವೂ ಆಯುಷ್ ಮಿಷನ್ ಸ್ಥಾಪಿಸಿದ್ದು, ರಾಜ್ಯಸರಕಾರವೂ ಆಯುಷ್ ವೈದ್ಯರ ಸೇವೆಯನ್ನು ಜನರಿಗೆ ಸಮರ್ಪಕವಾಗಿ ತಲುಪಿಸಲು ಕ್ರಮ ಕೈಗೊಳ್ಳುತ್ತಿದೆ. ಜನರಿಗೆ ಅಲೋಪತಿ ಅಥವಾ ಆಯುರ್ವೇದ ಅಥವಾ ಇನ್ನಿತರ ಯಾವುದೇ ಪದ್ಧತಿ ಮೂಲಕವಾಗಲಿ ಸೂಕ್ತ ವೈದ್ಯಕೀಯ ಸೇವೆ ದೊರಕಬೇಕೆನ್ನುವುದು ನಮ್ಮ ಕಾಳಜಿಯಾಗಿದೆ.
ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿದ್ದ ವೈದ್ಯಪದ್ಧತಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಯುಷ್ ವೈದ್ಯರ ಸಂಘಟನೆ ಸ್ವಾಗತಾರ್ಹ. ಮುಂದಿನ ದಿನಗಳಲ್ಲಿ ಉತ್ತಮ ಸಾಧನೆ ಮಾಡಿದ ವೈದ್ಯರನ್ನು ಸರಕಾರದ ವತಿಯಿಂದ ಗುರುತಿಸಲಾಗುವುದು.ವೈದ್ಯರು ತಮ್ಮ ಶೈಕ್ಷಣಿಕ ಪದವಿ ಅರ್ಹತೆಯೊಂದಿಗೆ ವೃತ್ತಿಪರತೆಯ ಕಡೆಗೆ ಹೆಚ್ಚಿನ ಗಮನಹರಿಸಿದಾಗ ತಮ್ಮ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಯನ್ನು ಮಾಡಲು ಸಾಧ್ಯ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಸಮಾರಂಭದಲ್ಲಿ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ,ಆಯುಷ್ ವೈದ್ಯ ಡಾ.ದೇವದಾಸ್,ರೋಟರಿ ಗವರ್ನರ್ ಡಾ.ಭರತೇಶ್ ಅದಿರಾಜ್, ದ.ಕ. ಮತ್ತು ಉಡುಪಿ ಆಯುಷ್ ಫೌಂಡೇಶನ್‌ನ ಅಧ್ಯಕ್ಷೆ ಡಾ.ಆಶಾ ಜ್ಯೋತಿ ರೈ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಹಿರಿಯ ಆಯುಷ್ ವೈದ್ಯರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.