ಉಡುಪಿ: ನದಿಗೆ ಈಜಲು ತೆರಳಿದ ಯುವಕನೋರ್ವ ಕಾಲುಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬ್ರಹ್ಮಾವರ ಸಮೀಪದ ಬಾರ್ಕೂರು ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ.
ಬಾರ್ಕೂರು ಹೊಸಾಳ ನಿವಾಸಿ ಆಲ್ಫೋನ್ಸ್ ಮತ್ತು ಸಬಿತಾ ಫಿಕಾರ್ಡೊ ದಂಪತಿಗಳ ಪುತ್ರ ಅನಿಶ್ ಪಿರ್ಕಾಡೊ (16) ಎಂಬಾತನೇ ನೀರಿನಲ್ಲಿ ಮುಳುಗಿ ಮೃತಪಟ್ಟ ದುರ್ದೈವಿ.
ಭಾನುವಾರವಾದ ಕಾರಣ ಅನೀಶ್ ಪಿಕರ್ಡೊ ಗೆಳೆಯರೊಂದಿಗೆ ಸೇರಿ ಬ್ರಹ್ಮಾವರದಲ್ಲಿ ಆಯೋಜಿಸಿದ್ದ ಕ್ರಿಕೇಟ್ ಪಂದ್ಯಾಟದಲ್ಲಿ ಭಾಗವಹಿಸಿದ್ದ ಬಳಿಕ ಐದಾರು ಮಂದಿ ಗೆಳೆಯರೊಡಗೂಡಿ ಮನೆ ಸಮೀಪದ ನದಿಗೆ ಈಜಲು ಹೋಗಿದ್ದ ಎನ್ನಲಾಗಿದೆ. ನದಿಯಲ್ಲಿ ನೀರಿನ ಸೆಳೆತ ಜಾಸ್ಥಿಯಿದ್ದು ಅನೀಶ್‌ಗೆ ಈಜಲು ಬಾರದ ಕಾರಣ ನೀರಿನಲ್ಲಿ ಮುಳುಗಿದ್ದಾನೆ ಎನ್ನಲಾಗಿದೆ.
ಮೃತ ಅನೀಶ್ ಬ್ರಹ್ಮಾವರ ಎಸ್.ಎಂ.ಎಸ್. ಕಾಲೇಜಿನ ಬಿ.ಕಾಂ ವಿದ್ಯಾರ್ಥಿಯಾಗಿದ್ದ.
ಬ್ರಹ್ಮಾವರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.