ಬೆಳ್ತಂಗಡಿ: ತಾಲೂಕಿನ ಮುಂಡಾಜೆ ಗ್ರಾಮದ ಸೋಮಂತಡ್ಕದಲ್ಲಿರುವ ಬದ್ರಿಯಾ ಜುಮ್ಮಾ ಮಸೀದಿಗೆ ಶನಿವಾರ ನಡುರಾತ್ರಿ ಕಿಡಿಗೇಡಿಗಳು ಕಲ್ಲೆಸೆದು ಹಾಗೂ ಸಾರ್ವಜನಿಕ ದಾರಿದೀಪಗಳನ್ನು ಹಾನಿಗೊಳಿಸಿದ ಘಟನೆ ನಡೆದಿದೆ. ಮಸೀದಿಯ ಆಡಳಿತ ಸಮಿತಿ ಹಾಗೂ ಪೊಲೀಸರ ಸಕಾಲಿಕ ಮುಂಜಾಗ್ರತೆ ಕ್ರಮದಿಂದ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.
ಕಲ್ಲೆಸೆತದಿಂದ ಮಸೀದಿಯ ಕಿಟಕಿ ಗಾಜು ಪುಡಿಯಾಗಿದ್ದು, ಕಲ್ಲು ಮಸೀದಿಯೊಳಗೆ ಪತ್ತೆಯಾಗಿದೆ. ಅಲ್ಲದೆ ಮಸೀದಿ ಮುಂಭಾಗದಿಂದ ಹಾದುಹೋಗುವ ಸೋಮಂತಡ್ಕ-ದಿಡುಪೆ ರಸ್ತೆಯ ಐದಕ್ಕೂ ಅಧಿಕ ದಾರಿದೀಪಗಳ ಸಿಎಫ್‌ಎಲ್ ಬಲ್ಬುಗಳನ್ನೂ ಕಿಡಿಗೇಡಿಗಳು ಪುಡಿ ಮಾಡಿದ್ದಾರೆ.
ಭಾನುವಾರ ಮುಂಜಾನೆ ನಮಾಝ್‌ಗಾಗಿ ಮಸೀದಿಗೆ ಬಂದಾಗ ವಿಚಾರ ಬೆಳಕಿಗೆ ಬಂದಿದೆ. ಮಸೀದಿಗೆ ಕಲ್ಲೆಸೆದ ಬಗ್ಗೆ ಸುದ್ದಿ ಹರಡುತ್ತಿದಂತೆ ಜನ ಸೇರತೊಡಗಿದರು. ಆದರೆ ಮಸೀದಿ ಆಡಳಿತ ಸಮಿತಿ ಸೇರಿದ್ದ ಜನರನ್ನು ನಿಭಾಯಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಉಸ್ಮಾನ್ ಹಾಜಿ ಅವರು ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ಶನಿವಾರ ನಡುರಾತ್ರಿ ಘಟನೆ ನಡೆದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಬೀಡು ಬಿಟ್ಟ ಪೊಲೀಸರು: ಸ್ಥಳಕ್ಕೆ ಜಿಲ್ಲಾ ಎಡಿಷನಲ್ ಎಸ್‌ಪಿ ವಿನ್ಸೆಂಟ್ ಶಾಂತಕುಮಾರ್, ಬಂಟ್ವಾಳ ಎಎಸ್‌ಪಿ ರಾಹುಲ್ ಕುಮಾರ್, ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಆರ್. ಲಿಂಗಪ್ಪ, ಸಬ್ ಇನ್ಸ್‌ಪೆಕ್ಟರ್ ಮಾಧವ ಕೂಡ್ಲು ಭೇಟಿ ನೀಡಿ ಪರೀಶೀಲನೆ ನಡೆಸಿದರು. ಸೌಹಾರ್ದತೆ ಕೆದಕುವ ಕಿಡಿಗೇಡಿಗಳ ಬಗ್ಗೆ ಪೊಲೀಸರು ಅಗತ್ಯ ಮಾಹಿತಿ ಕಲೆ ಹಾಕಿದ್ದು, ಅವರ ಪತ್ತೆಗೆ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸೋಮಂತಡ್ಕ ಪೇಟೆಯಲ್ಲಿ ಜಿಲ್ಲಾ ಮೀಸಲು ಪಡೆ ನಿಯೋಜಿಸಲಾಗಿದೆ. ಮಸೀದಿಗೂ ಪೊಲೀಸ್ ರಕ್ಷಣೆ ನೀಡಲಾಗಿದೆ.
ಮುಂಡಾಜೆಯಲ್ಲಿ ಇದೇ ಮೊದಲು: ಘಟನಾ ಸ್ಥಳಕ್ಕೆ ಮುಸ್ಲಿಂ ಸಮುದಾಯ ಆಗಮಿಸಿದರೂ ಪೊಲೀಸರ ಮನವಿ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಪರಿಸ್ಥಿತಿ ನಿಭಾಯಿಸಿದ್ದಾರೆ. ಒಂದೆರಡು ಬಾರಿ ಈ ಹಿಂದೆ ಗ್ರಾಮದಲ್ಲಿ ಸಣ್ಣಪುಟ್ಟ ಘಟನೆಗಳು ನಡೆದಾಗಲೂ ಗ್ರಾಮಸ್ಥರು ಪರಿಸ್ಥಿತಿ ವಿಕೋಪಕ್ಕೆ ತೆರಳದಂತೆ ಪರಿಸ್ಥಿತಿ ನಿಭಾಯಿಸಿದ್ದರು. ಘಟನಾ ಸ್ಥಳಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಭೇಟಿ ನೀಡಿ ಘಟನೆಯನ್ನು ಖಂಡಿಸಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಘಟನೆಗಳ ಖಂಡನೆ: ರಂಝಾನ್ ಸಂದರ್ಭ ಮಸೀದಿಗೆ ಕಲ್ಲೆಸೆದು, ದಾರಿದೀಪಗಳಿಗೂ ಹಾನಿ ಎಸಗಿ ಸೌಹಾರ್ದಯುತವಾಗಿದ್ದ ವಾತಾವರಣ ಕೆಡಿಸಲು ಯತ್ನಿಸಿದ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಘಟನೆಯನ್ನು ಬಲವಾಗಿ ಖಂಡಿಸುತ್ತೇವೆ ಎಂದು ಜಿಲ್ಲಾ ಸುನ್ನೀ ಸಂಯುಕ್ತ ಜಮಾತ್ ಅಧ್ಯಕ್ಷ ಮುರ ತಂಙಳ್, ತಾಲೂಕು ಅಧ್ಯಕ್ಷ ಸಾದಾತ್ ತಂಙಳ್, ಜಿಲ್ಲಾ ಎಸ್ಸೆಸ್ಸೆಫ್ ಅಧ್ಯಕ್ಷ ಹಾಫಿಲ್ ಯಾಕೂಬ್ ಸಅದಿ ನಾವೂರು, ಎಸ್ಸೆಸ್ಸೆಫ್ ಡಿವಿಷನ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಸಖಾಫಿ, ಎಸ್‌ಕೆಎಸ್ಸೆಸ್ಸೆಫ್ ವಲಯಾಧ್ಯಕ್ಷ ಬಶೀರ್ ದಾರಿಮಿ, ಸಮಸ್ತ ಕೇರಳ ಜಂಇಯ್ಯತುಲ್ ಮಅಲ್ಲಿಮೀನ್ ತಾಲೂಕು ಅಧ್ಯಕ್ಷ ಅಶ್ರಫ್ ಫೈಝಿ ಪುಂಜಾಲಕಟ್ಟೆ, ಕಾರ್ಯದರ್ಶಿ ಸಂಶುದ್ದೀನ್ ದಾರಿಮಿ ಬೆಳ್ತಂಗಡಿ, ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ತಾಲೂಕು ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಪಿಎಫ್‌ಐ ಪುತ್ತೂರು ಜಿಲ್ಲಾ ಅಧ್ಯಕ್ಷ ಹೈದರ್ ನೀರ್‌ಸಾಲ್, ತಾಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಬಿ.ಎ. ನಝೀರ್, ಸೇರಿದಂತೆ ಸುನ್ನೀ ಸಂಯುಕ್ತ ಸಂಘಟನೆಗಳಾದ ಎಸ್‌ಜೆಎಂ, ಎಸ್‌ಎಂಎ, ಎಸ್‌ವೈಎಸ್ ಮೊದಲಾದ ಸಂಘಟನೆ ಖಂಡಿಸಿವೆ.