_ ಸತೀಶ್ ಕಾಪಿಕಾಡ್
ಮಂಗಳೂರು : ವಿಶ್ವ ಹಿಂದೂ ಪರಿಷತ್ ಗೋ ಸಂರಕ್ಷಣಾ ಸಮಿತಿ ವತಿಯಿಂದ ಸೋಮವಾರ ಮಂಗಳೂರಿನಲ್ಲಿ ಗೋ ಸಂರಕ್ಷಣೆಯ ಬಗ್ಗೆ ಜನಜಾಗೃತಿ ಸಮಾವೇಶ ಹಾಗೂ ಬಹೃತ್ ಜಾಗೃತಿ ಜಾಥಾ ನಡೆಯಿತು. ಕರಾವಳಿ ಜಿಲ್ಲೆಯಲ್ಲಿ ಪಶು ಸಂಗೋಪನೆಯನ್ನು ನಿರಾತಂಕವಾಗಿ ನಡೆಸಲು ಇರುವ ಅಡ್ಡಿ ಅತಂಕಗಳನ್ನು ಸಮರ್ಥವಾಗಿ ನಿವಾರಿಸುವ ದೃಷ್ಟಿಯಿಂದ ಈ ಜನಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು.
ಸಮಾವೇಶದಲ್ಲಿ ಪ್ರಧಾನ ಭಾಷಣ ಮಾಡಿದ ಅಖಿಲ ಭಾರತ ಗೋ ರಕ್ಷಣಾ ಸಮಿತಿಯ ಅಖೀಲ ಭಾರತ ಉಪಾಧ್ಯಕ್ಷ ಹಾಗೂ ವಿಎಚ್‌ಪಿ ನಾಯಕ ಹುಕುಂಚಂದ್ ಸಾವ್ಲಾ ಅವರು, ದೇಶದ 29 ರಾಜ್ಯಗಳ ಪೈಕಿ 24 ರಾಜ್ಯಗಳಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿದ್ದು ಇದೇ ಮಾದರಿಯಲ್ಲಿ ಕರ್ನಾಟಕ ಸರಕಾರವೂ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನನ್ನು ತತ್‌ಕ್ಷಣ ಜಾರಿಗೆ ತರಬೇಕು ಎಂದು ಹೇಳಿದರು.
ಗೋವು ಉಳಿದರೆ ಕೃಷಿ ಉಳಿದೀತು; ದೇಶ ಉಳಿದೀತು. ಗೋವು ಸಂತತಿ ಅಳಿದರೆ ದೇಶ ವಿನಾಶದೆಡೆಗೆ ಸಾಗುತ್ತದೆ. ಕರ್ನಾಟಕದಲ್ಲಿ ಹಿಂದಿನ ಬಿಜೆಪಿ ಸರಕಾರ ಗೋಹತ್ಯೆ ನಿಷೇಧ ಕಾನೂನು ರೂಪಿಸಿತ್ತು. ಈಗಿನ ಸರಕಾರ ಅದನ್ನು ಕೈಬಿಡುವ ಮೂಲಕ ಗೋವು ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ ಎಂದರು. ಕರ್ನಾಟಕ ಸರಕಾರ ಉಳಿದ ರಾಜ್ಯಗಳಂತೆ ಕೂಡಲೇ ಸಂಪೂರ್ಣ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದ ಅವರು ಇಲ್ಲದಿದ್ದರೆ ಮುಂದಿನ ಬಾರಿ ಸರಕಾರ ಇದರ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ಎಚ್ಚರಿಸಿದರು.
ದೇಶದಲ್ಲಿ ಮೊಘಲ್ ಸಾಮ್ರಾಜ್ಯದ ಕೊನೆಯ ದೊರೆ ಬಹಾದೂರ್ ಷಾ ಜಾಫರ್ ಅವರಿಗೆ 1857ರಲ್ಲಿ ಬ್ರಿಟಿಷರ ವಿರುದ್ಧ ಸಮರದ ನಾಯಕತ್ವವನ್ನು ವಹಿಸಿಕೊಟ್ಟ ಸಂದರ್ಭ ಅವರು ಮೂರು ಘೋಷಣೆಗಳನ್ನು ಮಾಡಿದ್ದರು. ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ದೇಶದಲ್ಲಿ ಗೋವು ಹಂತಕರಿಗೆ ಮರಣ ದಂಡನೆ ಹಾಗೂ ಪ್ರತಿಯೋರ್ವ ವ್ಯಕ್ತಿಗೂ ಅವರ ಧರ್ಮಪಾಲನೆಯ ಹಕ್ಕು ನೀಡಿಕೆ ಇದಾಗಿತ್ತು ಎಂದ ಸಾವ್ಲಾ ಅವರು, ನಮ್ಮ ದೇಶದ ಈಗಿನ ಸ್ವಾಭಿಮಾನಿ ಸರಕಾರ ಇದೇ ರೀತಿಯಾಗಿ ಗೋಹಂತಕರಿಗೆ ಮರಣದಂಡನೆ ಶಿಕ್ಷೆಯನ್ನು ಜಾರಿಗೊಳಿಸುವ ಮೂಲಕ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂದು ಒತ್ತಾಯಿಸಿದರು.
ಮಾರಕಾಸ್ತ್ರಗಳನ್ನು ತೋರಿಸಿ ಗೋಕಳ್ಳತನ : ಎಂ.ಬಿ. ಪುರಾಣಿಕ್
ಜಿಲ್ಲೆಯಲ್ಲಿ ಮನೆ ಮಂದಿಗೆ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ ಹಟ್ಟಿಗಳಿಂದ ಗೋವುಗಳನ್ನು ಒಯ್ಯಲಾಗುತ್ತಿದೆ. ಮೇಯಲು ಬಿಟ್ಟ ದನಗಳನ್ನು ಕಳವು ಮಾಡಲಾಗುತ್ತಿದೆ. ಗೋಕಳ್ಳತನ, ಗೋವುಗಳ ಅಕ್ರಮ ಸಾಗಾಟ ಮುಂತಾದ ಕೃತ್ಯಗಳ ವಿರುದ್ಧ ನಿಷ್ಪಕ್ಷ, ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಅವರ ಮೇಲೆ ಒತ್ತಡ ತರುವ ಕಾರ್ಯ ನಡೆಯುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್ ಹೇಳಿದರು.
ಪೊಲೀಸ್ ಇಲಾಖೆಗೆ ಸಹಕಾರ ನೀಡಲು ನಮ್ಮ ಕಾರ್ಯಕರ್ತರು ಸಿದ್ಧರಿದ್ದಾರೆ. ಅಲ್ಲಲ್ಲಿ ಚೆಕ್‌ಪೋಸ್ಟ್‌ಗಳನ್ನು ಪೊಲೀಸ್ ಇಲಾಖೆ ನಿರ್ಮಿಸಬೇಕು, ದನಗಳನ್ನು ಕಳವು ಮಾಡುವವರ, ಅಕ್ರಮ ಸಾಗಾಟಗಾರರ ವಿರುದ್ಧ ಕಠಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದವರು ಆಗ್ರಹಿಸಿದರು.
ಗೋಸಂರಕ್ಷಣಾ ಸಮಿತಿ ಸಂಚಾಲಕ ಡಾ| ಪಿ. ಅನಂತಕೃಷ್ಣ ಭಟ್ ಅವರು ಪ್ರಸ್ತಾವನೆಗೈದು, ಗೋಸಂರಕ್ಷಣೆ ಕಾರ್ಯದಲ್ಲಿ ಪ್ರತಿಯೋರ್ವರೂ ಭಾಗಿಯಾಗಬೇಕು. ಕ್ಷಿಪ್ರಗತಿಯಲ್ಲಿ ಕ್ಷೀಣಿಸುತ್ತಿರುವ ಗೋಸಂತತಿಯನ್ನು ಉಳಿಸುವ ಸಾಮಾಜಿಕ ಹೊಣೆಗಾರಿಗೆ ಎಲ್ಲರ ಮೇಲಿದೆ. ಸಂರಕ್ಷಣೆಯ ಬಗ್ಗೆ ಜಾಗೃತಿ, ಎಚ್ಚರಿಸುವ ನಿಟ್ಟಿನಲ್ಲಿ ಇಂದಿನ ಜಾಥಾ ಹಾಗೂ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ನಿರ್ಣಯಗಳು :
ಕರ್ನಾಟಕದಲ್ಲೂ ರಾಜ್ಯ ಸರಕಾರ ಸಂಪೂರ್ಣ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಬೇಕು, ಕರಾವಳಿಯಲ್ಲಿ ಅಕ್ರಮ ಗೋಸಾಗಾಟ, ಗೋಕಳ್ಳತನ ಹಾಗೂ ಅನಧಿಕೃತ ಕಸಾಯಿಖಾನೆಗಳನ್ನು ನಿಲ್ಲಿಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುವ ನಿರ್ಣಯಗಳನ್ನು ಸಮಾವೇಶದಲ್ಲಿ ಕೈಗೊಳ್ಳಲಾಯಿತು.
ಪ್ರಾಂತ ಗೋರಕ್ಷಾ ಪ್ರಮುಖ್ ಕಟೀಲು ದಿನೇಶ್ ಪೈ, ಬಜರಂಗದಳ ಪ್ರಾಂತ ಸಂಚಾಲಕ ಶರಣ್ ಪಂಪ್‌ವೆಲ್, ಸಂಚಾಲಕ ಭುಜಂಗ ಕುಲಾಲ್, ವಿಶ್ವಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಮೂರ್ತಿ, ಮಂಗಳೂರು ಕಾರ್ಯದರ್ಶಿ ಗೋಪಾಲ್ ಕುತ್ತಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಪ್ರಸಾದ್ ಉಡುಪಿ, ಡೀಕಯ್ಯ ಪುತ್ತೂರು,ಅಂಗಾರ ಕಾಸರಗೋಡು, ಪ್ರೇಮಲತ ಅಚಾರ್ ಮೊದಲಾದವರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ವಿಶ್ವಹಿಂದೂ ಪರಿಷತ್ ಮಂಗಳೂರು ಅಧ್ಯಕ್ಷ ಜಗದೀಶ ಶೇಣವ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಜೀತೇಂದ್ರ ಕೊಟ್ಟಾರಿ ನಿರೂಪಿಸಿದರು. ಸಹಕಾರ್ಯದರ್ಶಿ ಶಿವಾನಂದ ಮೆಂಡನ್ ವಂದಿಸಿದರು.
ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಗೋಹತ್ಯೆ, ದನಗಳ ಸರಣಿ ಕಳ್ಳತನ, ಹಿಂಸಾತ್ಮಕ ರೀತಿ ಸಾಗಾಟ ಅವ್ಯಾಹತವಾಗಿ ನಡೆಯುತ್ತಿರುವುದರ ವಿರುದ್ಧ ಗೋರಕ್ಷಾ ಜನಜಾಗೃತಿ ಆಂದೋಲನದ ಅಂಗವಾಗಿ ಸೋಮವಾರ ನಗರದ ಜ್ಯೋತಿ ವೃತ್ತದಿಂದ ನೆಹರೂ ಮೈದಾನದ ವರೆಗೆ ಬೃಹತ್ ಮೆರವಣಿಗೆ ನಡೆಯಿತು.
ಜ್ಯೋತಿ ವೃತ್ತದಲ್ಲಿ ವಿಶ್ವ ಹಿಂದೂ ಪರಿಷತ್‌ನ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ.ಪುರಾಣಿಕ್ ಅವರು ಭಗವಾಧ್ವಜವನ್ನು ಬಜರಂಗದಳ ಪ್ರಾಂತ ಸಂಚಾಲಕ ಶರಣ್ ಪಂಪ್‌ವೆಲ್ ಅವರಿಗೆ ಹಸ್ತಾಂತರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭ ಗೋ ಸಂರಕ್ಷಾ ಸಮಿತಿ ಸಂಚಾಲಕ ಡಾ.ಪಿ.ಅನಂತಕೃಷ್ಣ ಭಟ್, ವಿಹಿಂಪ ಅಧ್ಯಕ್ಷ ಜಗದೀಶ ಶೇಣವ, ಕಾರ್ಯಾಧ್ಯಕ್ಷ ಜಿತೇಂದ್ರ ಕೊಟ್ಟಾರಿ, ಕಾರ್ಯದರ್ಶಿ ಗೋಪಾಲ್ ಕುತ್ತಾರ್, ಪ್ರಾಂತ ಗೋರಕ್ಷಾ ಪ್ರಮುಖ್ ಕಟೀಲು ದಿನೇಶ್ ಪೈ, ಬಜರಂಗದಳ ಪ್ರಾಂತ ಸಂಚಾಲಕ ಶರಣ್ ಪಂಪ್‌ವೆಲ್, ಸಂಚಾಲಕ ಭುಜಂಗ ಕುಲಾಲ್, ಉಮೇಶ್ ಉಪಸ್ಥಿತರಿದ್ದರು.
ಈ ಜಾಥಾಕ್ಕಾಗಿ ಉಡುಪಿ, ಧರ್ಮಸ್ಥಳ, ಪುತ್ತೂರು, ಮೂಡು ಬಿದಿರೆ, ತಲಪಾಡಿಯಿಂದ ವಾಹನ ರ್ಯಾಲಿಯಲ್ಲಿ ಆಗಮಿಸಿದ್ದರು. ನೆಹರೂ ಮೈದಾನದಲ್ಲಿ ಪ್ರತಿಭಟನಾ ಸಭಾ ಕಾರ್ಯಕ್ರಮದ ಬಳಿಕ ಕಾರ್ಯಕರ್ತರಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದ ಸಾವಿರಾರು ಕಾರ್ಯಕರ್ತರು ಮೆರವಣಿಗೆ ಯಲ್ಲಿ ‘ಭಾರತ್ ಮಾತೆಗೆ ಜೈ, ಗೋಮಾತೆಗೆ ಜೈ ಎಂಬ ಜೈಕಾರ ಕೂಗುತ್ತಾ ಸಾಗಿದರು. ನಾಸಿಕ್ ಬ್ಯಾಂಡ್‌ನೊಂದಿಗೆ ಮೆರವಣಿಗೆ ನೆಹರೂ ಮೈದಾನದಲ್ಲಿ ಸಮಾಪನಗೊಂಡಿತು. ನಗರದಾದ್ಯಂತ ಬಿಗು ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ನಗರದಲ್ಲಿ ವಾಹನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿತ್ತು.