ಮಂಗಳೂರು, ಜು. 25: ಬಜಾಲ್ ವಾರ್ಡ್ ನ ಜಲ್ಲಿಗುಡ್ಡೆ ಜಯನಗರ ಪರಿಸರದಲ್ಲಿ ಕಳೆದ 15 ದಿನಗಳಿಂದ ವಿಪರೀತ ನೀರಿನ ಸಮಸ್ಯೆ ಉಂಟಾಗಿದ್ದು, ಈ ಬಗ್ಗೆ ಮನಪಾ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಸ್ಥಳೀಯ ನಾಗರಿಕರು ಮನಪಾ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಜಲ್ಲಿಗುಡ್ಡೆ ಪರಿಸರಕ್ಕೆ ಮೇಯರ್ ಜೆಸಿಂತಾ ವಿಜಯ್ ಅಲ್ಪ್ರೆಡ್ ಅವರು ಭೇಟಿ ನೀಡಿ ಸಮಸೈಗಳ ಪರಿಶೀಲನೆ ನಡೆಸಿದರು.
ಈ ಪ್ರದೇಶಕ್ಕೆ ನೀರು ಹರಿಯುವ ಪೈಪ್ ಲೈನ್ ನಲ್ಲಿ ತೊಂದರೆಯುಂಟಾಗಿದ್ದು, ಇದರ ದುರಸ್ತಿ ಕಾರ್ಯ ನಡೆಯುತ್ತಿದೆ. ಪೈಪ್ ಲೈನ್ ದುರಸ್ಥಿ ಕಾರ್ಯ ಎರಡು ದಿನಗಳಲ್ಲಿ ಪೂರ್ಣಗೊಳ್ಳಲ್ಲಿದ್ದು, ಸಮಸ್ಯೆಯನ್ನು ಕೂಡಲೇ ಇತ್ಯರ್ಥಗೊಳಿಸುವುದಾಗಿ ಭರವಸೆ ನೀಡಿದರು. ಅಲ್ಲಿಯವರೆಗೆ ಟ್ಯಾಂಕರ್ ಗಳಲ್ಲಿ ನೀರು ಪೂರೈಕೆ ಮಾಡುವ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ಮೇಯರ್ ಭರವಸೆ ನೀಡಿದರು. ಕಾರ್ಪೊರೇಟರ್ ದೀಪಕ್ ಪೂಜಾರಿ ಹಾಗೂ ಸಂಬಂಧಪಟ್ಟ ಮನಪಾ ಅಧಿಕಾರಿಗಳು ಈ ಸಂದರ್ಭ ಮೇಯರ್ ಜತೆಗಿದ್ದರು.
ಇಂದು ಮತ್ತೆ ಪ್ರತಿಭಟನೆ :
ನೀರಿನ ಸಮಸೈ ಕಳೆದ ಅನೇಕ ದಿನಗಳಿಂದ ನಮ್ಮನ್ನು ಕಾಡುತ್ತಿದ್ದು, ಜನತೆ ಕುಡಿಯುವ ನೀರಿಗಾಗಿ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಆದರೆ ಪಾಲಿಕೆ ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಅರೋಪಿಸಿ ಸ್ಥಳೀಯರು ಶನಿವಾರ ಮತ್ತೆ ಪ್ರತಿಭಟನೆ ನಡೆಸಿದ್ದಾರೆ. ಮನಪಾ ವತಿಯಿಂದ ನೀರು ಪೂರೈಸುತ್ತಿದ್ದ ಟ್ಯಾಂಕರ್ ಗಳನ್ನು ತಡೆಹಿಡಿದು ತಮ್ಮ ಆಕ್ರೋಷ ವ್ಯಕ್ತ ಪಡಿಸಿದ್ದಾರೆ.
ಮೇಯರ್ ಪ್ರತಿಕ್ರಿಯೆ:
ಜಲ್ಲಿಗುಡ್ಡ ಪರಿಸರಕ್ಕೆ ನೀರು ಪೊರೈಸುವ ಪೈಪ್ ಲೈನ್ ಹಾನಿಗೊಂಡಿದ್ದು ಇದರ ದುರಸ್ತಿ ಕಾರ್ಯ ಭರದಿಂದ ಸಾಗುತ್ತಿದೆ, ದುರಸ್ಥಿಕಾರ್ಯ ಪೂರ್ಣಗೊಂಡ ಬಳಿಕವಷ್ಟೇ ಜಲ್ಲಿಗುಡ್ಡ ಪರಿಸರದ ನಿವಾಸಿಗಳಿಗೆ ನೀರು ಪೊರೈಕೆ ವ್ಯವಸ್ಥೆ ಸುಗಮಗೊಳ್ಳಲಿದೆ. ಅಲ್ಲಿಯವರೆಗೆ ಮಂಗಳೂರು ನಗರ ಪಾಲಿಕೆ ವತಿಯಿಂದ ಟ್ಯಾಂಕರ್ ಗಳಲ್ಲಿ ನೀರು ಸಾಗಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಆದರೆ ಜಲ್ಲಿಗುಡ್ಡ ಪರಿಸರದ ನಿವಾಸಿಗಳು ಟ್ಯಾಂಕರಲ್ಲಿ ನೀರು ಪೊರೈಸುವ ವ್ಯವಸ್ಥೆಗೆ ತಡೆಯೊಡ್ಡಿದ್ದು ನಮಗೆ ಟ್ಯಾಂಕರ್ ಮೂಲಕ ನೀರು ಪೊರೈಕೆ ಮಾಡುವ ಅಗತ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೊತೆಗೆ ಇಲ್ಲಿನ ನಿವಾಸಿಗಳಿಗಾಗಿ ಎರಡು ದೊಡ್ಡ ಸಿಂಟೆಕ್ಸ್ ಟ್ಯಾಂಕ್‌ಗಳಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿದ್ದರೂ ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತ ಪಡಿಸಿ, ನಮಗೆ ಪೈಪ್ ಲೈನ್ ಮೂಲಕವೇ ನೀರು ಬೇಕೆಂದು ಹಠ ಹಿಡಿದಿದ್ದಾರೆ. ಸ್ಥಳೀಯ ಕಾರ್ಪೊರೇಟರ್, ಹಾಗೂ ಮನಪಾ ಅಧಿಕಾರಿಗಳ ಮಾತಿಗೂ ಬೆಲೆ ನೀಡದೇ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.
ಹಾನಿಗೊಂಡಿರುವ ಪೈಪ್ ಲೈನ್ ದುರಸ್ತಿ ಮಾಡಲು ಸಮಯವಾಕಾಶ ಕೊಡದಿದ್ದರೆ ಈ ಸಮಸ್ಯೆಯನ್ನು ಬಗೆಹರಿಸುವುದಾದರೂ ಹೇಗೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಜೆಸಿಂತಾ ವಿಜಯ ಅಲ್ಪೇಡಾ ಅವರು ಕನ್ನಡಿಗ ವರ್ಲ್ಡ್ ನ ಪ್ರತಿನಿಧಿಯೊಂದಿಗೆ(ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ) ಪ್ರತಿಕ್ರಿಯಿಸಿದ್ದಾರೆ.