ಕುಂದಾಪುರ: ಪ್ರತಿಷ್ಟಿತ ವ್ಯಕ್ತಿಗಳು, ರಾಜಕಾರಣಿಗಳು ಸೇರಿದಂತೆ ಉನ್ನತ ವರ್ಗದ ಅಧಿಕಾರಿಗಳ ಹೆರನ್ನು ಬಳಸಿಕೊಂಡು ಸರಕಾರಿ ಹಾಗೂ ಅರೆಸರಕಾರಿ ಉದ್ಯೋಗ ಕೊಡಿಸುವ ಭರವಸೆ ನೀಡಿ ಅವರಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯೋರ್ವನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಕಾರ್ಕಳ ತಾಲೂಕಿನ ಹೆಬ್ರಿ ಮೂಲದವನಾದ ಸುರೇಂದ್ರ ಕರ್ಕೇರ(35)ಬಂಧಿತ ಆರೋಪಿ.
ಘಟನೆ ವಿವರ: ಪ್ರತಿಷ್ಟಿತ ಬ್ಯಾಂಕಿನಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿ ಕುಂದಾಪುರದ ಅಂಪಾರು ನಿವಾಸಿಯೋರ್ವರಿಂದ 1 ಲಕ್ಷದ 97 ಸಾವಿರ ಹಣ ಪಡೆದ ಈತ ಅವರಿಗೆ ಕೆಲಸ ಕೊಡಿಸದೇ ವಂಚಿಸಿದ್ದ. ತಾನೂ ಮೋಸಹೋಗಿದ್ದೇನೆಂದು ತಿಳಿದ ವ್ಯಕ್ತಿ ಕುಂದಾಪುರ ಪೊಲೀಸರಿಗೆ ದೂರು ನೀಡಿದ್ದು, ಅವರ ದೂರಿನನ್ವಯ ಕುಂದಾಪುರ ವ್ರತ್ತನಿರೀಕ್ಷಕ ದಿವಾಕರ ಪಿ.ಎಂ. ಅವರು ಆರೋಪಿ ಸುರೇಂದ್ರನನ್ನು ಬಂಧಿಸಿದ್ದಾರೆ.
ಕೆಲವು ಜನಪ್ರತಿನಿಧಿಗಳು, ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ತನಗೆ ಪರಿಚಯವಿದ್ದು ಅವರ ಮೂಲಕವಾಗಿ ಕೆಲಸ ಮಾಡಿಸಿಕೊಡುವ ಭರವಸೆಯನ್ನು ನೀಡಿ ಆಕಾಂಕ್ಷಿಗಳಿಂದ ಹಣ ಪಡೆದು ಅವರಿಗೆ ಪಂಗನಾಮ ಹಾಕುವ ಪ್ರವ್ರತ್ತಿ ಹೊಂದಿದ್ದ ಸುರೇಂದ್ರ ಮೂಲತಃ ಹೆಬ್ರಿಯವನಾದರೂ ಕೂಡ ಆತ ಸಂಸಾರ ಹೂಡಿದ್ದು ಕುಂದಾಪುರದಲ್ಲಿ. ಹಲವೆಡೆಗಳಲ್ಲಿ ಇದೇ ರೀತಿಯ ವಂಚನೆ ಮಾಡಿದ ಈತನ ಮೇಲೆ ಬೆಂಗಳುರು ಹಾಗೂ ದಾರವಾಡದಲ್ಲಿ ಕೇಸು ದಾಖಲಾಗಿದೆಯೆಂಬ ಮಾಹಿತಿ ಉನ್ನತ ಮೂಲಗಳಿಂದ ಲಭ್ಯವಾಗಿದೆ.
ಕುಂದಾಪುರ ಪೊಲಿಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.