ಕುಂದಾಪುರ: ತಾಲೂಕು ತೆಕ್ಕಟ್ಟೆ ಸಮೀಪದ ಕೊರ್ಗಿ ಚಾರುಕೊಟ್ಟಿಗೆ ನಿವಾಸಿ ನಿವೃತ್ತ ಶಿಕ್ಷಕ ಭಾಸ್ಕರ ಶೆಟ್ಟಿ ಅವರ ಪತ್ನಿ ಮಾಲತಿ ಶೆಟ್ಟಿ (65) ನಾಪತ್ತೆಯಾಗಿ ಒಂದು ತಿಂಗಳು ಕಳೆದರೂ ಕೂಡಾ ಪ್ರಕರಣ ಇನ್ನೂ ನಿಗೂಢವಾಗಿಯೇ ಉಳಿದಿದೆ.
ಮಾಲತಿ ಶೆಟ್ಟಿ ಅವರ ಬಗ್ಗೆ ಮಾಹಿತಿ ನೀಡಿ ಅವರನ್ನು ಹುಡುಕಿ ಕೊಟ್ಟಲ್ಲಿ 1 ಲಕ್ಷ ಬಹುಮಾನ ಮೊತ್ತವನ್ನು ನೀಡುವುದಾಗಿ ಮಾಲತಿ ಶೆಟ್ಟಿ ಕುಟುಂಬ ಘೋಷಿಸಿದೆ. ಅಲ್ಲದೇ ಮಾಹಿತಿಧಾರರ ಹೆಸರು ವಿಳಾಸವನ್ನು ಗೌಪ್ಯವಿಡುವ ಬಗ್ಗೆಯೂ ತಿಳಿಸಿದ್ದಾರೆ.
ಜೂ,24 ಮಧ್ಯಾಹ್ನ 1.30ರ ಸುಮಾರಿಗೆ ತನ್ನ ಮನೆಯಿಂದ ಊಟ ಮಾಡಿ, ಮತ್ತೆ ಅಕ್ಕಿ ತೊಳೆದು ಅನ್ನಕ್ಕಿಟ್ಟು ಮನೆಯಿಂದ ಹೊರಗಡೆ ಬಂದಿರುವುದನ್ನು ನೋಡಿದವರಿದ್ದಾರೆ. ಸಮೀಪದ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದ ಇವರು ಮತ್ತೆ ಮನೆಗೆ ಮರಳದೇ ನಿಗೂಢವಾಗಿ ನಾಪತ್ತೆಯಾಗಿದ್ದು ಅವರ ಸುಳಿವು ಇನ್ನೂ ಅಲಭ್ಯವಾಗಿದೆ. ಮಾಲತಿಯವರ ನಿಗೂಢ ಕಣ್ಮರೆಯಿಂದಾಗಿ ಅವರ ಕುಟುಂಬ ಕಂಗಾಲಾಗಿದೆ.
ನಾಲ್ಕು ಚಿನ್ನದ ಬಳೆಗಳು, ಚಿನ್ನದ ಕರಿಮಣಿ, ಮೂಗೂತಿ, ಬೆಂಡೋಲೆ ಹಾಗೂ ಉಂಗುರ ಸೇರಿಂದತೆ ಅಂದಾಜು 3.5 ಲಕ್ಷ ಮೌಲ್ಯದ ಆಭರಣ ಧರಿಸಿದ್ದರು.
ಈಗಾಗಲೇ ಶ್ವಾನದಳ ಆಗಮಿಸಿ ಹುಡುಕಾಟ ನಡೆಸಿದ್ದರು ಯಾವುದೇ ಪ್ರಯೋಜನವೂ ಆಗಿಲ್ಲ. ಕೊರ್ಗಿ ಪರಿಸರದ ಕಾಡು ಹಾಗೂ ನಿರ್ಜನ ಪ್ರದೇಶ ಸೇರಿದಂತೆ ವಿವಿದೆಡೆಯಲ್ಲಿ ಸ್ಥಳೀಯ ನಿವಾಸಿಗಳು ಹಾಗೂ ಕುಟುಂಬಿಕರೊಂದಿಗೆ ಪೊಲೀಸರು ಸತತ ಹುಡುಕಾಟವನ್ನು ನಡೆಸಿದ್ದಾರೆ.
ಮಾಲತಿ ಶೆಟ್ಟಿಯವರ ಚಹರೆ:
65ವರ್ಷ ಪ್ರಾಯ, 5.5 ಅಡಿ ಎತ್ತರ ಇದ್ದಾರೆ. ಬಿಳಿ ಮೈಬಣ್ಣ, ಬಿಳಿಕಪ್ಪು ತಲೆ ಕೂದಲು, ದುಂಡು ಮುಖ, ಸಾಧಾರಣ ಮೈಕಟ್ಟು, ಕ್ರೀಮ್ ಬಿಳಿ ಬಣ್ಣದ ಸೀರೆ, ಬೇಬಿ ಪಿಂಕ್ ಬಣ್ಣದ ರವಿಕೆ ಧರಿಸಿದ್ದಾರೆ. ಕುಂದಾಪುರ ಕನ್ನಡ ಭಾಷೆ ಮಾತನಾಡುತ್ತಾರೆ. ಕಾಲಿನ ಎರಡು ಬೆರಳುಗಳು ಮೇಲ್ಮುಖವಾಗಿ ಇವೆ.