ಕನ್ನಡ ವಾರ್ತೆಗಳು

ಮಂಗಳೂರು ಸ್ಮಾರ್ಟ್ ಸಿಟಿ ಆಯ್ಕೆ ಅವಕಾಶ ನಿಚ್ಚಳ : ರಾಜ್ಯದಲ್ಲಿ ನಗರಕ್ಕೆ ಗರಿಷ್ಠ ಅಂಕ.

Pinterest LinkedIn Tumblr

Mcc_meet_photo_1

ಮಂಗಳೂರು, ಜುಲೈ.31 : ಮಂಗಳೂರು ನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿ ಆಯ್ಕೆ ಮಾಡುವ ಪ್ರಕ್ರಿಯೆಗೆ ಸಂಬಂಧಿಸಿ ರಾಜ್ಯದಲ್ಲಿ ನಗರವು 96.88 ಅಂಕದೊಂದಿಗೆ ಗರಿಷ್ಠ ಅಂಕವನ್ನು ಪಡೆದುಕೊಂಡಿದ್ದು, ಮಂಗಳೂರಿನ ಹೆಸರನ್ನು ಕೇಂದ್ರಕ್ಕೆ ನಾಮನಿರ್ದೇಶನ ಮಾಡಲು ಮನಪಾ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.

ಗುರುವಾರ ನಡೆದ ಮನಪಾ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಈ ವಿಷಯ ಪ್ರಸ್ತಾಪಿಸಿದ ಮೇಯರ್ ಜೆಸಿಂತಾ ವಿಜಯಾ ಆಲ್ಫ್ರೆಡ್, ರಾಜ್ಯದ ಯೋಜನಾ ನಿರ್ದೇಶಕರು 13 ಅಂಶಗಳ ಕುರಿತು ವೌಲ್ಯ ಮಾಪನ ನಡೆಸಿ ರಾಜ್ಯದ ಉನ್ನತ ಮಟ್ಟದ ಆಯ್ಕೆ ಸಮಿತಿಯು ರಾಜ್ಯದ ಆರು ನಗರಗಳನ್ನು ಆಯ್ಕೆ ಮಾಡಿ ಕೇಂದ್ರ ಸರಕಾರಕ್ಕೆ ಕಳುಹಿಸಲಿದ್ದಾರೆ. ಈ ಪ್ರಕ್ರಿಯೆಯಲ್ಲಿ ಮಂಗಳೂರು ನಗರ ಗರಿಷ್ಠ ಅಂಕಗಳನ್ನು ಪಡೆದಿದ್ದು, ಆರು ನಗರಗಳ ಪೈಕಿ ಮಂಗಳೂರು ಆಯ್ಕೆ ನಿಚ್ಚಳವಾಗಿದೆ ಎಂದು ತಿಳಿಸಿದರು.

Mcc_meet_photo_2 Mcc_meet_photo_3 Mcc_meet_photo_4 Mcc_meet_photo_5

ನಿರಂತರ ಕುಡಿಯುವ ನೀರು, ವಿದ್ಯುತ್ ಸರಬರಾಜು, ನೈರ್ಮಲ್ಯ ಮತ್ತು ಘನತ್ಯಾಜ್ಯ ನಿರ್ವಹಣೆ, ವ್ಯವಸ್ಥಿತ ನಗರ ಸಾರಿಗೆ, ನಗರದ ಬಡಜನರಿಗೆ ಕಡಿಮೆ ದರದಲ್ಲಿ ವಸತಿ ಒದಗಿಸುವುದು, ಮಾಹಿತಿ ತಂತ್ರಜ್ಞಾನದ ಅನುಷ್ಠಾನ, ಇ ಗವರ್ನೆನ್ಸ್ ಮತ್ತು ಹಿರಿಯ ನಾಗರಿಕರ ಸುರಕ್ಷತೆ, ಆರೋಗ್ಯ ಮತ್ತು ಶಿಕ್ಷಣ ಸ್ಮಾರ್ಟ್ ಸಿಟಿಯ ಪ್ರಮುಖ ಗುರಿಯಾಗಿದೆ. ನಗರದ ವಾಹನ ದಟ್ಟನೆ ಕಡಿಮೆ ಮಾಡುವುದು, ಸುವ್ಯವಸ್ಥಿತ ನಗರ ಸಾರಿಗೆ ಅಭಿವೃದ್ಧ್ದಿ, ಪಾರ್ಕ್ ಮತ್ತು ಆಟದ ಮೈದಾನಗಳ ಅಭಿವೃದ್ಧಿ, ಮಾಲಿನ್ಯ ನಿಯಂತ್ರಣಕ್ಕಾಗಿ ವಿವಿಧ ಕ್ರಮ ಸೇರಿದಂತೆ ಹಲವಾರು ಮಾನದಂಡಗಳೊಂದಿಗೆ ರಾಜ್ಯ ಮಟ್ಟದಲ್ಲಿ ಮೊದಲ ಹಂತದ ಆಯ್ಕೆಗೆ ವಿವಿಧ ಅಂಶಗಳನ್ನು ಪರಿಗಣಿಸಿ ಅಂಕಗಳನ್ನು ನೀಡಲಾಗುತ್ತದೆ.

ಕೇಂದ್ರ ಸರಕಾರದ ಮಟ್ಟದಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ತಜ್ಞರ ಸಮಿತಿಯು ಈ ವರದಿಯ ವೌಲ್ಯಮಾಪನ ಮಾಡಿ ಅಂತಿಮ ಆಯ್ಕೆಯಾದ ದೇಶದ ಸ್ಮಾರ್ಟ್ ಸಿಟಿ ನಗರಗಳನ್ನು ಘೋಷಿಸುತ್ತದೆ. ಹೀಗೆ ಘೋಷಿಸಲ್ಪಡುವ ನಗರಗಳು ಸ್ಮಾರ್ಟ್ ಸಿಟಿಯಲ್ಲಿ ಪ್ರಾಸ್ತಾವಿಸಿದ ಅಭಿವೃದ್ಧಿ ಯೋಜನೆಗಳನ್ನು ಎಸ್‌ಪಿವಿ (ಸ್ಪೆಷಲ್ ಪರ್ಪಸ್ ವೆಹಿಕಲ್) ಸಮಿತಿಯ ಮೇಲುಸ್ತುವಾರಿಯ ಮೂಲಕ ಕಾರ್ಯರೂಪಕ್ಕೆ ತರಬೇಕಾಗಿದೆ. ಇದಕ್ಕಾಗಿ ಪ್ರಥಮ ವರ್ಷದಲ್ಲಿ 200 ಕೋಟಿ ರೂ., ನಂತರದ ಮೂರು ವರ್ಷಗಳಲ್ಲಿ ಪ್ರತಿ ವರ್ಷ 100 ಕೋಟಿ ರೂ.ನಂತೆ 300 ಕೋಟಿ ರೂ. ಸೇರಿ ಒಟ್ಟು 500 ಕೋಟಿ ರೂ. ನಗರಕ್ಕೆ ಬಿಡುಗಡೆಯಾಗಲಿದೆ ಎಂದು ಹೇಳಿದರು.

Write A Comment