ಮಂಗಳೂರು,ಜುಲೈ.31 : ವಕೀಲರೊಬ್ಬರು ತನ್ನ ಕಕ್ಷಿದಾರನ ಪರವಾಗಿ ಮಾತನಾಡಲು ಕದ್ರಿ ಠಾಣೆಗೆ ತೆರಳಿದ ಸಂದರ್ಭ ಕದ್ರಿ ಠಾಣೆಯ ಠಾಣಾಧಿಕಾರಿ ನಾಗರಾಜ್ ಅವರು ವಕೀಲರೊಂದಿಗೆ ಅನೂಚಿತವಾಗಿ ನಡೆದುಕೊಂಡದ್ದಲ್ಲದೇ ಹಲ್ಲೆ ಮಾಡಿದ್ದಾಗಿ ನ್ಯಾಯವಾದಿಗಳು ಆರೋಪಿಸಿ ಶುಕ್ರವಾರ ಮಿಂಚಿನ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕದ್ರಿ ಎಸ್ ಐ ಟಿ.ಡಿ ನಾಗರಾಜ್ ಅವರನ್ನು ಪೊಲೀಸ್ ಆಯುಕ್ತ ಎಸ್.ಮುರುಗನ್ ಅವರು ಅಮಾನತು ಮಾಡಿರುವುದಾಗಿ ತಿಳಿದು ಬಂದಿದೆ.
ಭುವಿ ಎಂಟರ್ ಪ್ರೈಸಸ್ ಮೇಲಿನ ಆರೋಪ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಎ.ಪಿ ಶೆಣೈಯವರ ಸಹಾಯಕ ವಕೀಲರಾದ ಉತ್ತಮ ರೈ ಅವರು ತನ್ನ ಕಕ್ಷಿದಾರರಾದ ರತ್ನಾಕರ್ ಅವರೊಂದಿಗೆ ಕದ್ರಿ ಠಾಣೆಗೆ ಭೇಟಿ ನೀಡಿದ್ದ ಸಂದರ್ಭ ಕದ್ರಿ ಠಾಣಾಧಿಕಾರಿ ಹಾಗೂ ವಕೀಲರ ನಡುವೆ ಮಾತಿಗೆ ಮಾತು ಬೆಳೆದು, ಠಾಣಾಧಿಕಾರಿ ನಾಗರಾಜ್ ಅವರು ವಕೀಲ ಉತ್ತಮ್ ರೈ ಅವರೊಂದಿಗೆ ಅನೂಚಿತವಾಗಿ ನಡೆದುಕೊಂಡದ್ದಲ್ಲದೇ, ರೈ ಅವರನ್ನು ಸೆಲ್‌ನೊಳಗೆ ಕೂಡಿಹಾಕಿ,ಅವಾಚ್ಯ ಶಬ್ದಗಳಿಂದ ನಿಂದಿಸಿ, ಮೂವರು ಪೊಲೀಸ್ ಸಿಂಬದ್ದಿಯೊಂದಿಗೆ ವಕೀಲರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನ್ಯಾಯವಾದಿಗಳು ಆರೋಪಿಸಿದ್ದಾರೆ.
ಇದರಿಂದ ಆಕ್ರೋಶಿತರಾಗಿರುವ ವಕೀಲರ ಗುಂಪು ಠಾಣೆಗೆ ಮುತ್ತಿಗೆ ಹಾಕಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಪಿ.ಚೆಂಗಪ್ಪ ನೇತೃತ್ವದಲ್ಲಿ ಠಾಣೆಯ ಮುಂಭಾಗದಲ್ಲಿ ಮಿಂಚಿನ ಪ್ರತಿಭಟನೆ ನಡೆಸಿದ್ದಾರೆ.
ಉತ್ತಮ್ ರೈ ಒಬ್ಬ ಸರಳ ಸಜ್ಜನಿಕೆಯ ವ್ಯಕ್ತಿ. ಅವರು ತಮ್ಮ ಕಕ್ಷಿದಾರನಿಗೆ ನ್ಯಾಯ ಒದಗಿಸುವ ಸಲುವಾಗಿ ಪೊಲೀಸ್ ಠಾಣೆಗೆ ಹೋದರೆ ಅವರನ್ನು ಕ್ರಿಮಿನಲ್ ಗಳಂತೆ ಬಿಂಬಿಸಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಇದರಿಂದಾಗಿ ಅವರು ಆಸ್ಪತ್ರೆಗೆ ದಾಖಾಲಾಗುವ ಪರಿಸ್ಥಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಎಸ್. ಐ . ನಾಗರಾಜ್ ಅವರ ಮೇಲೆ ಕೂಡಲೇ ಕಾನೂನು ಕ್ರಮ ಜರುಗಿಸಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸ ಬೇಕು ಎಂದು ಮಂಗಳೂರು ಬಾರ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಪಿ ಚಂಗಪ್ಪ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಡಿಸಿಪಿ ಶಾಂತರಾಜ್ ಅವರು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದ್ದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅವರ ಜೊತೆ ಮಾತನಾಡಿ ಎಸೈ ನಾಗರಾಜ್ ಹಾಗೂ ಇತರ ಮೂವರು ಪೊಲೀಸರನ್ನು ಅಮಾನತು ಮಾಡುವ ಬಗ್ಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಆದರೆ ಸಂಜೆಯವರೆಗೆ ಎಸೈ ವಿರುದ್ಧ ಯಾವೂದೇ ರೀತಿಯ ಆದೇಶ ಹೊರಬೀಳದ ಹಿನ್ನೆಲೆಯಲ್ಲಿ ವಕೀಲರು ಮತ್ತೆ ಕದ್ರಿ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಅಧ್ಯಕ್ಷ ಪಿಪಿ ಹೆಗ್ಡೆ ಅವರು ಸ್ಥಳಕ್ಕೆ ಆಗಮಿಸಿ ಎಸೈ ನಾಗರಾಜ್ ಅವರು ವಕೀಲರೊಂದಿಗೆ ಪ್ರಾಣಿಗಳಂತೆ ವರ್ತಿಸಿದ್ದಾರೆ. ವಕೀಲ ಉತ್ತಮ್ ರೈ ಅವರನ್ನು ಸೆಲ್‌ನೊಳಗೆ ಹಾಕಿ ಕ್ರಿಮಿನಲ್ ಗಳಂತೆ ವರ್ತಿಸಿದ್ದು ಸರಿಯಲ್ಲ. ಮಾತ್ರವಲ್ಲದೇ ಎಸೈ ಅವರೊಂದಿಗೆ ಇತರ ಮೂವರು ಪೊಲೀಸರು ವಕೀಲರ ಮೇಲೆ ಹಲ್ಲೆ ನಡೆಸಿರುವ ಕ್ರಮವನ್ನು ಖಂಡಿಸುವುದಾಗಿ ಹೇಳಿದರಲ್ಲದೇ ಕೂಡಲೇ ಪ್ರಕರಣಕ್ಕೆ ಸಂಬಂಧ ಪಟ್ಟ ಎಸೈ ಹಾಗೂ ಪೊಲೀಸರನ್ನು ಕೂಡಲೇ ಅಮಾನತು ಮಾಡಬೇಕೆಂದು ಆಗ್ರಹಿಸಿದರು.
ಈ ಎಲ್ಲಾ ವಿದ್ಯಾಮಾನಗಳ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಎಸ್. ಮುರುಗನ್ ಅವರು ಕದ್ರಿ ಎಸ್. ಐ ಟಿ.ಡಿ ನಾಗರಾಜ್ ಅವರನ್ನು ಇಂದು ಅಮಾನತುಗೊಳಿಸಿ, ಅದೇಶ ಹೊರಡಿಸಿರುವುದಾಗಿ ತಿಳಿದು ಬಂದಿದೆ.