ಮಂಗಳೂರು, ಆ.2: ಯುವ ವಕೀಲ ಉತ್ತಮ್ ಕುಮಾರ್ ರೈ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್‌ರನ್ನು ಮೂರು ದಿನಗಳೊಳಗೆ ಬಂಧಿಸ ಬೇಕೆಂದು ಮಂಗಳೂರು ವಕೀಲರ ಸಂಘ ಒತ್ತಾಯಿಸಿದೆ.
ಮಂಗಳೂರು ವಕೀಲರ ಸಂಘದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಸ್.ಪಿ. ಚೆಂಗಪ್ಪ, ಇನ್ಸ್‌ಪೆಕ್ಟರ್ ನಾಗರಾಜ್‌ರನ್ನು ಮೂರು ದಿನಗಳೊಳಗೆ ಬಂಧಿಸದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ದೌರ್ಜನ್ಯ ನಡೆಸಿರುವ ಪೊಲೀಸರು ಫಿರ್ಯಾದಿ ವಕೀಲ ಉತ್ತಮ್ ಕುಮಾರ್ ರೈಯವರ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಹೊರಿಸಿ ಕೇಸು ದಾಖಲಿಸುವುದನ್ನು ವಕೀಲರ ಸಂಘ ಖಂಡಿಸುತ್ತದೆ ಎಂದರು. ಪೊಲೀಸ್ ಠಾಣೆಗಳಲ್ಲಿ ನಾಗರಿಕರ ಮೇಲೆ ನಡೆಯುವ ದೌರ್ಜನ್ಯ ಮತ್ತು ಭ್ರಷ್ಟಾಚಾರ ತಡೆಗೆ ಸಿಸಿಟಿವಿ ಅಳವಡಿಸುವುದು ಅಗತ್ಯವಾಗಿದೆ ಎಂದು ಚೆಂಗಪ್ಪ ಹೇಳಿದರು.
ಸಂಘದ ಸದಸ್ಯ ಉತ್ತಮ್ ಕುಮಾರ್ ರೈ ತನ್ನ ಕಕ್ಷಿದಾರ ಸಂದೀಪ್ ಶೆಟ್ಟಿಯವರ ಜೊತೆ ಅರ್ಜಿ ವಿಚಾರಣೆಯ ಸಂಬಂಧ ಮಂಗಳೂರು ಪೂರ್ವ ಠಾಣೆಗೆ ತೆರಳಿದ್ದರು. ಇನ್ಸ್ ಪೆಕ್ಟರ್ ಸಂಜೆ ಬರುವಂತೆ ತಿಳಿಸಿದ್ದು, ಅದರಂತೆ ಉತ್ತಮ್ ಕುಮಾರ್ ಕಕ್ಷಿದಾರೊಂದಿಗೆ ಸಂಜೆ ಠಾಣೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಇನ್ಸ್‌ಪೆಕ್ಟರ್ ಉತ್ತಮ್ ಕುಮಾರ್‌ರನ್ನು ಉದ್ದಟತನದಿಂದ ವರ್ತಿಸಿದ್ದು ಮಾತ್ರವಲ್ಲದೆ, ಸೆಲ್‌ಗೆ ತಳ್ಳಿ ಹಲ್ಲೆ ನಡೆಸಿದ್ದಾರೆ ಎಂದು ಚೆಂಗಪ್ಪ ಆರೋಪಿಸಿದರು.
ಘಟನೆಯನ್ನು ಖಂಡಿಸಿ ವಕೀಲರು ನಡೆಸಿದ ಪ್ರತಿಭಟನೆಗೆ ಮಣಿದ ಹಿರಿಯ ಅಧಿಕಾರಿಗಳು ಟಿ.ಡಿ.ನಾಗರಾಜ್‌ರನ್ನು ಅಮಾನತು ಮಾಡಿ, ನಾಗರಾಜ್ ಸಹಿತ ಇತರ ಪೊಲೀಸರ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದವರು ತಿಳಿಸಿದರು.
ಮಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಎಚ್.ವಿ., ಉಪಾ ಧ್ಯಕ್ಷ ಯಶೋಧರ ಪಿ. ಕರ್ಕೇರ, ಖಜಾಂಚಿ ಯತೀಶ್ ಕುಮಾರ್ ಮತ್ತು ವಕೀಲ ಎಂ.ಪಿ. ಶೆಣೈ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.