ಕನ್ನಡ ವಾರ್ತೆಗಳು

ಕೊನೆಗೂ ಪೊಲೀಸರ ವಶವಾದ ಶ್ರೀವರ ಜ್ಯುವೆಲ್ಲರ್ಸ್‌ ಮಾಲಕ – ಬಾಲಕೃಷ್ಣ ಭಟ್‌ ಪೊಲೀಸ್ ಠಾಣೆಗೆ ಶರಣು

Pinterest LinkedIn Tumblr

balakrishna_arreast

ಪುತ್ತೂರು, ಆ.2: ಮನೆ ಮನೆಗೆ ಚಿನ್ನ ನೀಡುವ ಬೆನಿಫಿಟ್ ಸ್ಕೀಂ ನಡೆಸಿ, ಆರು ಸಾವಿರಕ್ಕೂ ಮಿಕ್ಕಿ ಗ್ರಾಹಕರಿಗೆ ೧.೮೨ ಕೋಟಿ ರೂ. ವಂಚನೆ ನಡೆಸಿದ ಆರೋಪ ಎದುರಿಸುತ್ತಿದ್ದ ಪ್ರಕರಣದ ಪ್ರಮುಖ ಆರೋಪಿಯಾದ ಪುತ್ತೂರಿನ ಶ್ರೀವರ ಜ್ಯುವೆಲ್ಲರ್ಸ್‌ ನ ಮಾಲಕ ಬಾಲಕೃಷ್ಣ ಭಟ್‌ ಪೊಲೀಸರು ತನ್ನನ್ನು ಬೇಟೆಯಾಡದೇ ಬಿಡುವುದಿಲ್ಲ ಎಂದು ಹೆದರಿ ಪುತ್ತೂರು ನಗರ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.

ಈ ಸಂದರ್ಭದಲ್ಲಿ ಆತನಿಂದ ಒಂದು ಸ್ವಿಫ್ಟ್ ಕಾರು, ಒಂದು ಇಕೋ ಕಾರು ಮತ್ತು ಈತನ ಸಿಬ್ಬಂದಿಗೆ ಸೇರಿದ್ದ ಆರು ಬೈಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸುಲಭ ಕಂತುಗಳಲ್ಲಿ ಮನೆ-ಮನೆಗೆ ಚಿನ್ನ ಎಂಬ ಸ್ಕೀಂ ನಡೆಸಿ, ಪ್ರತಿ ತಿಂಗಳು ಗ್ರಾಹಕರಿಂದ ಹಣ ಸಂಗ್ರಹಿಸಿ ಅವಧಿ ಮುಗಿದರೂ ಚಿನ್ನ ಅಥವಾ ಹಣ ಮರು ಪಾವತಿಸದೆ ವಂಚನೆ ನಡೆಸಿದ ಆರೋಪವನ್ನು ಬಾಲಕೃಷ್ಣ ಭಟ್ ಎದುರಿಸುತ್ತಿದ್ದಾನೆ. ಈ ಬಗ್ಗೆ ಪುತ್ತೂರು ನಗರ ಪೊಲೀಸರಿಗೆ ಗ್ರಾಹಕರು ದೂರು ನೀಡಿದ್ದರು. ಇದೀಗ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಮೂರು ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿ ಬಾಲಕೃಷ್ಣ ಭಟ್‌ನ ಪುತ್ರ ವರದೇಶ್ ಎಂಬಾತನನ್ನು ಜು.27ರಂದು ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಬಂಧಿಸಲಾಗಿತ್ತು ಹಾಗೂ ಬಾಲಕೃಷ್ಣ ಭಟ್ ಪತ್ತೆಗಾಗಿ ವ್ಯಾಪಕ ಬಲೆ ಬೀಸಲಾಗಿತ್ತು. ಬಾಲಕೃಷ್ಣ ಭಟ್ ತಮಗೆ ವಂಚನೆ ನಡೆಸಿದ್ದಾರೆ ಎಂದು ಸುಮಾರು 400ಕ್ಕೂ ಅಧಿಕ ಗ್ರಾಹಕರು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಪೊಲೀಸರು ವ್ಯಾಪಕ ಕಾರ್ಯಾಚರಣೆ ನಡೆಸಿ ಆರೋಪಿಯ ಬಂಧನಕ್ಕಾಗಿ ಬಲೆ ಬೀಸಿದ್ದರು.ಬಂಧಿತ ಆರೋಪಿ ವರದೇಶ್‌ನನ್ನು ಕಸ್ಟಡಿಗೆ ಪಡೆದುಕೊಂಡ ಪೊಲೀಸರು ಆತನಿಂದ ಬಾಲಕೃಷ್ಣ ಭಟ್ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ 6 ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಇದೀಗ ಒಟ್ಟು 9 ವಾಹನಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.

Write A Comment