ಉಳ್ಳಾಲ, ಆ.3: ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಬಾರ್ ಮತ್ತು ಜಾಗದ ಮಾಲಕರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ಘರ್ಷಣೆ ನಡೆದ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಕೋಟೆಪುರದಲ್ಲಿ ರವಿವಾರ ನಡೆದಿದ್ದು, ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ 15 ಮಂದಿಯನ್ನು ಬಂಧಿಸಿದ್ದಾರೆ.
ಕೋಟೆಪುರದ ರಸ್ತೆ ಬದಿಯಲ್ಲಿ ಲಲಿತಾ ಎಂಬವರು ಜಾಗ ಹೊಂದಿದ್ದು, ಅಲ್ಲಿ ಕಟ್ಟಡವೊಂದನ್ನು ನಿರ್ಮಿಸಿದ್ದರು. ಅದರಲ್ಲಿ ಬಾರ್ ನಡೆಸಲು ವರ್ಷದ ಹಿಂದೆ ರವೀಂದ್ರ ಎಂಬವರಿಗೆ ನೀಡಿದ್ದರು ಎನ್ನಲಾಗಿದೆ. ರವೀಂದ್ರ ಜಾಗವನ್ನು ತನ್ನದಾಗಿಸಿಕೊಂಡು ಕಟ್ಟಡವನ್ನು ವಶಪಡಿಸಿಕೊಳ್ಳಲು ಹೊರಟಿದ್ದರೆನ್ನಲಾಗಿದೆ.
ಇದೇ ವಿಚಾರದಲ್ಲಿ ಜಾಗದ ಮಾಲಕಿ ಲಲಿತಾ ಮತ್ತು ರವೀಂದ್ರ ಅವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಆಕ್ರೋಶಗೊಂಡ ಉಳ್ಳಾಲ ಸುತ್ತಮುತ್ತಲಿನ ನಿವಾಸಿಗಳಾದ ಕಮಲಾಕ್ಷ, ಹರೀಶ, ಲಕ್ಷ್ಮಣ, ಶರತ್ ಸೇರಿದಂತೆ ಇತರ 11 ಮಂದಿಯ ತಂಡ ಘಟನಾ ಸ್ಥಳಕ್ಕೆ ತೆರಳಿ ಬಾರ್ ಮಾಲಕನ ಮೇಲೆ ಹಲ್ಲೆ ನಡೆಸಿ, ಬಾರ್ ನಡೆಸುತ್ತಿದ್ದ ಕಟ್ಟಡವನ್ನು ಧ್ವಂಸಗೊಳಿಸಿದ್ದಾಗಿ ರವೀಂದ್ರ ದೂರು ನೀಡಿದ್ದರು. ಘಟನೆಗೆ ಸಂಬಂಧಿಸಿ 15 ಮಂದಿಯನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.