ಮಂಗಳೂರು, ಆ.03 : ನಗರದ ಜ್ಯೋತಿ ವೃತ್ತ ಪರಿಸರದಲ್ಲಿರುವ ಆಪಲ್ ಎಲೆಕ್ಟ್ರಾನಿಕ್ ಸಂಸ್ಥೆಯ ಅಧಿಕೃತ ಮಳಿಗೆ ಮೆಪಲ್ ನಲ್ಲಿ ಕಳವು ನಡೆದಿರುವ ಘಟನೆ ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಅಂಗಡಿಗೆ ಕನ್ನ ಕೊರೆದು ಒಳನುಗ್ಗಿರುವ ಕಳ್ಳರು ಒಳಗಿದ್ದು, ಬೆಲೆಬಾಳುವ ವಸ್ತುಗಳನ್ನು ಕಳುವುಗೈದಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ರಾತ್ರಿ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ಮಳಿಗೆಯ ಗಟ್ಟಿಮುಟ್ಟಾದ ಗೋಡೆಗೆ ಕನ್ನ ಕೊರೆದು ಒಳ ಪ್ರವೇಶಿಸಿದ ಕಳ್ಳರು ವಸ್ತುಗಳನ್ನು ಚೆಲ್ಲಾಪಿಲ್ಲಿ ಗೊಳಿಸಿದ್ದಾರೆ. ಅಂಗಡಿಯಲ್ಲಿದ್ದ ಮೊಬೈಲ್ ಫೋನ್ ಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳ ಸಹಿತ ಲಕ್ಷಾಂತರ ರೂ. ಮೌಲ್ಯದ ಸೊತ್ತು ಎಗರಿಸಿದ್ದಾರೆ ಎಂದು ಹೇಳಲಾಗಿದೆ. ಕಳವಾದ ಸೊತ್ತುಗಳ ಮಾಹಿತಿ ಹಾಗೂ ಮೌಲ್ಯ ಇನ್ನಷ್ಟೇ ತಿಳಿದುಬರಬೇಕಾಗಿದೆ.
ತನಿಖೆ ಚುರುಕು:
ಘಟನೆ ನಡೆದ ಪ್ರದೇಶ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಾಗಿದ್ದು, ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಶ್ವಾನದಳ ಹಾಗೂ ಬೆರಳಚ್ಚು ತಜ್ಞರೊಂದಿಗೆ ಪರಿಶೀಲನೆ ನಡೆಸಿದ್ದಾರೆ.
ಫೂಟೇಜ್ ಪರಿಶೀಲನೆ:
ಮೆಪಲ್ ನಲ್ಲಿ ನಡೆದ ಕಳವು ಕೃತ್ಯಕ್ಕೆ ಸಂಬಂಧಿಸಿದ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ಮಳಿಗೆಯಲ್ಲಿ ಅಳವಡಿಸಲಾದ ಸಿಸಿ ಕ್ಯಾಮರಾಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಕಳೆದ ರಾತ್ರಿ ಮಳಿಗೆಯಲ್ಲಿ ನಡೆದ ಚಲನವಲನಗಳ ಬಗ್ಗೆ ವಿಸ್ತೃತ ತನಿಖೆ ನಡೆಸುತ್ತಿದ್ದಾರೆ.