ಉಡುಪಿ, ಆ.03: ಉಪ್ಪೂರು ಸಮೀಪ ನಿನ್ನೆ ಮಧ್ಯಾಹ್ನ ಅತಿವೇಗಿ ಲಾರಿಯೊಂದು ಓವರ್ ಟೇಕ್ ಭರಾಟೆಯಲ್ಲಿ ಬೈಕೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ ದಾರುಣ ಸಾವನ್ನಪ್ಪಿದ್ದು, ಸಹಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಉಪ್ಪೂರು ಕೊಳಲಗಿರಿ ಲಕ್ಷ್ಮೀನಗರ ನಿವಾಸಿ ಅಶೋಕ ಸಾಲಿಯಾನ್ (32) ಮೃತ ವ್ಯಕ್ತಿಯಾಗಿದ್ದು, ಇಲೆಕ್ಟ್ರಿಷಿಯನ್ ವೃತ್ತಿ ಮಾಡಿಕೊಂಡಿದ್ದರು. ನಿನ್ನೆ ಮಧ್ಯಾಹ್ನ 1.30ರ ಸುಮಾರಿಗೆ ಅಶೋಕ ಸಾಲಿಯಾನ್ ತನ್ನ ಸಹೋದ್ಯೋಗಿ ರಮೇಶ ಪೂಜಾರಿಯವರನ್ನು ಸಹ ಸವಾರನನ್ನಾಗಿ ಕರೆದುಕೊಂಡು ತನ್ನ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಉಪ್ಪೂರು ಬಳಿ ಲಾರಿಯೊಂದು ತನ್ನ ಮುಂದಿನ ವಾಹನವನ್ನು ಓವರ್ ಟೇಕ್ ಮಾಡುವ ಭರಾಟೆಯಲ್ಲಿ ರಸ್ತೆಯ ತೀರ ಬಲಗಡೆಗೆ ಚಲಿಸಿ ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸವಾರರಿಬ್ಬರೂ ಬೈಕ್ ಸಹಿತ ರಸ್ತೆಗೆಸೆಯಲ್ಪಟ್ಟಿದ್ದು, ಅಶೋಕ ಸಾಲಿಯಾನ್ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಗಾಯಾಳು ರಮೇಶ ಪೂಜಾರಿ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.