ಕನ್ನಡ ವಾರ್ತೆಗಳು

ಕಣ್ಣೂರು – ಪಡೀಲ್ ಪೈಪ್‌ಲೈನ್ ಸ್ಫೋಟ : ಮಂಗಳೂರಿನಲ್ಲಿ ನಾಲ್ಕು ದಿನಗಳಿಂದ ನೀರಿಗಾಗಿ ಪರದಾಟ

Pinterest LinkedIn Tumblr

Kannur_pipe_line_2

ಮಂಗಳೂರು, ಆ.4: ತುಂಬೆ ಅಣೆ ಕಟ್ಟಿನಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರು ಸರಬರಾ ಜಾಗುವ ನೀರಿನ 2 ಕೊಳವೆ ಗಳು ಅಡ್ಯಾರ್-ಕಣ್ಣೂರು ಬಳಿ ಒಡೆದು ಹೋಗಿರುವುದರಿಂದ ಕಳೆದ ಸುಮಾರು 3 ದಿನಗಳಿಂದ ನೀರಿಲ್ಲದೆ ನಗರದ ಜನತೆ ಪರದಾಡುವಂತಾಗಿದೆ.

ಜನತೆ ನೀರಿನ ಸಮಸ್ಯೆಯಿಯಂದ 3ನೆ ದಿನವಾದ ಸೋಮವಾರ ತೀವ್ರ ಸಂಕಷ್ಟಕ್ಕೀಡಾಗಿದ್ದರು. ಕೆಲವೆಡೆ ಮಹಿಳೆಯರು ಬಿಂದಿಗೆ ಹಿಡಿದು ಬಾವಿಗಳಿಗೆ ಅಲೆದಾಡುವಂತಾಗಿತ್ತು. ಸ್ಮಾರ್ಟ್ ಸಿಟಿಯ ಆಯ್ಕೆಗೆ ತುದಿಗಾಲಲ್ಲಿ ನಿಂತಿರುವ ಮಂಗಳೂರು ನಗರದಲ್ಲಿ ಅತ್ಯಗತ್ಯ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಕುಡಿಯುವ ನೀರನ್ನು ಪೂರೈಸುವ ಕೊಳವೆ ಒಡೆದು ಹೋದರೆ 3-4 ದಿನಗಳ ಕಾಲ ಜನರು ನೀರಿಲ್ಲದೆ ಪರದಾಡುವಂತಹ ಪರಿಸ್ಥಿತಿ ಮಾತ್ರ ನಿಜಕ್ಕೂ ಶೋಚನೀಯ.

Kannur_pipe_line_5 Kannur_pipe_line_4 Kannur_pipe_line_3 Kannur_pipe_line_1 Kannur_pipe_line_9 Kannur_pipe_line_10 Kannur_pipe_line_11 Kannur_pipe_line_12

ಅಡ್ಯಾರ್-ಕಣ್ಣೂರು ಬಳಿ ನಗರಕ್ಕೆ ನೀರು ಸರಬರಾಜು ಮಾಡುವ ಕೊಳವೆಯ ಮೇಲೆ ಕಟ್ಟಡದ ತ್ಯಾಜ್ಯ ವನ್ನು 10 ಅಡಿ ಎತ್ತರಕ್ಕೆ ಸುರಿಯಲಾಗಿರುವುದರಿಂದ ಅದನ್ನು ತೆರವು ಗೊಳಿಸಿ ಒಡೆದು ಹೋಗಿರುವ ಕೊಳವೆಗಳ ದುರಸ್ತಿಗಾಗಿ ಇದೀಗ ಮನಪಾ ಅಧಿಕಾರಿಗಳು ಹರಸಾಹಸ ಪಡುವಂತಾಗಿದೆ. ಕಳೆದೆ ಮೂರು ದಿನಗಳಿಂದ ಪೈಪ್‌ಲೈನ್ ದುರಸ್ತಿ ಕಾರ್ಯ ರಾತ್ರಿಹಗಲೆನ್ನದೆ ನಡೆಯುತ್ತಿದ್ದು, ಸೋಮವಾರ ರಾತ್ರಿಯೊಳಗೆ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದೆ. ಮಂಗಳವಾರದಿಂದ ನಗರಕ್ಕೆ ನೀರು ಪೂರೈಕೆಯಾಗಲಿದೆ ಎಂದು ಮೇಯರ್ ಜೆಸಿಂತಾ ವಿಜಯಾ ಆಲ್ಫ್ರೆಡ್ ತಿಳಿಸಿದ್ದಾರೆ. ( ಆದರೆ ಮಂಗಳವಾರ ಕೂಡ ನಗರಕ್ಕೆ ನೀರು ಪೂರೈಕೆಯಾಗದೇ ನಾಗರೀಕರ ಪರದಾಟ ಹೆಚ್ಚಾಗಿದೆ)

ಹಳೆಯ ಪೈಪ್‌ಲೈನ್ ಒಡೆದಿದ್ದನ್ನು ಬಾವಾವಾರ ರಾತ್ರಿ ಸರಿಪಡಿಸಿ ನೀರು ಪೂರೈಕೆಗೆ ಪ್ರಯತ್ನಿಸಲಾಗಿತ್ತು. ಆದರೆ ಕೊಳವೆ ಮತ್ತೆ ಒಡೆದು ಹೋದುದರಿಂದ ಅದು ವಿಫಲವಾಗಿದೆ. ಇದೀಗ ದುರಸ್ತಿ ನಡೆಯುತ್ತಿದ್ದು, ಸೋಮವಾರ ರಾತ್ರಿಯೊಳಗೆ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಇದೆ ಎಂದು ಮನಪಾ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ ತಿಳಿಸಿದ್ದಾರೆ.

ಹಳೆ ಕೊಳವೆಗಳ ಬದಲಾವಣೆ ಪರಿಹಾರ :

ಮನಪಾ ವ್ಯಾಪ್ತಿಯಲ್ಲಿ ಮಳೆಗಾಲ ದಲ್ಲೂ ಜನರನ್ನು ಕಾಡುತ್ತಿರುವ ನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ. ಕಳೆದ ಸುಮಾರು 15 ವರ್ಷಗಳಿಂದಲೂ ಅಲ್ಲಲ್ಲಿ ನೀರು ಪೂರೈಕೆಯ ಕೊಳವೆ ಒಡೆದು ಮೂರ್ನಾಲ್ಕು ದಿನಗಳ ಕಾಲ ನೀರು ಪೂರೈಕೆ ಸ್ಥಗಿತಗೊಳ್ಳುವ ಅವ್ಯವಸ್ಥೆ ನಡೆಯುತ್ತಿದೆ. ಹಳೆಯದಾಗಿರುವ ಸಿಮೆಂಟ್‌ನ ಕೊಳವೆಯನ್ನು ಬದಲಾಯಿಸುವುದೊಂದೇ ಇದಕ್ಕೆ ಸೂಕ್ತ ಪರಿಹಾರ ಎಂದು ಮನಪಾ ಸದಸ್ಯ ಅಯಾಝ್ ಹೇಳುತ್ತಾರೆ.

ಚೊಕ್ಕಬೆಟ್ಟು, ಕಾನ, ಪಣಂಬೂರು ಬಳಿ ಆಗಾಗ್ಗೆ ಕೊಳವೆ ಒಡೆದು ತೊಂದರೆಯಾಗುತ್ತಿದೆ. ಜತೆಗೆ ವಿದ್ಯುತ್ ಪೂರೈಕೆ ವ್ಯತ್ಯಯದಿಂದಾಗಿಯೂ ನೀರು ಸರಬರಾಜಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮದ ಅಗತ್ಯವಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.

Kannur_pipe_line_13 Kannur_pipe_line_14 Kannur_pipe_line_15 Kannur_pipe_line_16 Kannur_pipe_line_17

ಕೇಸ್ ದಾಖಲಿಸಲು ಲೋಬೊ ಸೂಚನೆ

ಅಡ್ಯಾರು-ಕಣ್ಣೂರು ಬಳಿ ಕುಡಿಯುವ ನೀರಿನ ಪೈಪ್‌ಲೈನ್ ಇರುವಲ್ಲಿಯೇ ಕಟ್ಟಡದ ತಾಜ್ಯಗಳನ್ನು ಲಾರಿಯಲ್ಲಿ ತಂದು ಹಾಕಲಾಗಿರುವ ಕಾರಣ ಅದರ ಭಾರದಿಂದ ಪೈಪ್‌ಲೈನ್‌ಗಳು ಒಡೆದು ಹೋಗಿರುವುದಾಗಿ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಶಾಸಕ ಜೆ.ಆರ್.ಲೋಬೊ ಅಭಿಪ್ರಾಯಿಸಿದ್ದಾರೆ.

ಕಟ್ಟಡಗಳ ತ್ಯಾಜ್ಯವನ್ನು ಹಾಕಿರುವವರ ವಿರುದ್ಧ ಎಫ್‌ಐಆರ್ ದಾಖಲಿಸಲು ಸೂಚಿಸಿರುವುದಾಗಿ ಅವರು ಹೇಳಿದ್ದಾರೆ. ಹೆದ್ದಾರಿ ಬದಿಯಲ್ಲೇ, ಪೈಪ್‌ಲೈನ್ ಹಾದು ಹೋಗಿರುವಲ್ಲಿಯೇ ಕಟ್ಟಡಗಳ ತ್ಯಾಜ್ಯವನ್ನು ತಂದು ಹಾಕಿರುವುದು ನಿಜಕ್ಕೂ ಅಪರಾಧ. ಆದರೆ ಇಡೀ ನಗರಕ್ಕೆ ಸರಬರಾಜಾಗುವ ನೀರಿನ ಪೈಪ್‌ಲೈನ್ ಮೇಲೆ ಸುಮಾರು 10 ಅಡಿಗಿಂತಲೂ ಎತ್ತರಕ್ಕೆ ತ್ಯಾಜ್ಯ ಹಾಕುವವರೆಗೂ ಮನಪಾ ಅಧಿಕಾರಿಗಳು ಸುಮ್ಮ ನಿದ್ದುದಾದರೂ ಏಕೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಗರದ ಬಹುತೇಕ ಹೆದ್ದಾರಿಗಳ ಅಕ್ಕಪಕ್ಕದಲ್ಲೂ ಕಟ್ಟಡಗಳ ತ್ಯಾಜ್ಯವನ್ನು ಲಾರಿಗಳಲ್ಲಿ ತಂದು ಸುರಿಯಲಾಗುತ್ತಿದೆ. ಈ ಬಗ್ಗೆ ಸಕಾಲದಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದರೆ ಇಂದು ನೀರಿಗಾಗಿ ಸಂಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂಬ ಮಾತು ಸಾರ್ವಜನಿಕವಾಗಿ ಕೇಳಿಬರುತ್ತಿದೆ.

Write A Comment