ಮಂಗಳೂರು ಅಗಸ್ಟ್ .04 : ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ದ.ಕ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ರೂ. 31.75 ಕೋಟಿ ವೆಚ್ಚಗಳ ಕ್ರಿಯಾ ಯೋಜನೆಯ ಚಟುವಟಿಕೆಗಳಿಗೆ ಸೋಮವಾರ ಅನುಮೋದನೆ ನೀಡಲಾಯಿತು.
ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಅನುಷ್ಠಾನ ಸಮಿತಿ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ವಸತಿ ಶಾಲೆಗೆ ರೂ. 46.95 ಲಕ್ಷ, ಅನುದಾನರಹಿತ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯಿದೆ ಪ್ರಕಾರ ದಾಖಲಾದ ಶೇಕಡಾ 25ರ ಸೀಟುಗಳಿಗೆ ಶುಲ್ಕ ಮರುಪಾವತಿಗೆ ರೂ.226 ಲಕ್ಷ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರಿಸುವ ಕಾರ್ಯಕ್ರಮಗಳಿಗೆ ರೂ. 4.4ಲಕ್ಷ, ಉಚಿತ ಪಠ್ಯಪುಸ್ತಕ ಮತ್ತು ದೃಷ್ಠಿದೋಷವಿರುವ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲು ರೂ. 90.49 ಲಕ್ಷ, ಉಚಿತ ಸಮವಸ್ತ್ರ ವಿತರಣೆಗೆ ರೂ. 141.53 ಲಕ್ಷ, ಸರ್ವ ಶಿಕ್ಷಣ ಅಭಿಯಾನದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ವೇತನಕ್ಕೆ ರೂ. 470.85ಲಕ್ಷ ಮೊತ್ತಕ್ಕೆ ಅನುಮೋದನೆ ನೀಡಲಾಯಿತು.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಸರ್ವ ಶಿಕ್ಷಣ ಅಭಿಯಾನದ ಮೂಲಕ ಉತ್ತಮ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಶೈಕ್ಷಣಿಕವಾಗಿ ಮುಂದುವರಿದಿರುವ ದ.ಕ. ಜಿಲ್ಲೆಯು ಇನ್ನಷ್ಟು ದಾಪುಗಾಲನ್ನು ಇಡಬೇಕಾಗಿದೆ. ಜಿಲ್ಲೆಯಲ್ಲಿ ಎಸ್.ಡಿ.ಎಂಸಿ ಹಾಗೂ ಶಿಕ್ಷಕರ ಸೇವೆ ಶ್ಲಾಘನೀಯವಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ ಮಾತನಾಡಿ, ಯೋಜನೆಯಡಿ ಇನ್ನಷ್ಟು ಅನುದಾನಕ್ಕೆ ಒತ್ತಡ ಹಾಕಲಾಗುವುದು. 100ವರ್ಷಕ್ಕೂ ಮಿಕ್ಕಿದ ಸೇರಿದಂತೆ ಹಳೆಯ ಶಾಲಾ ಕಟಟ್ಡಗಳ ದುರಸ್ತಿಗೆ ಆದ್ಯತೆ ನೀಡಲಾಗುವುದು ಎಂದರು.
ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷ ಸತೀಶ್ ಕುಂಪಲ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ, ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಸಿ.ಕೆ. ಚಂದ್ರಕಲಾ, ಉಪಕಾರ್ಯದರ್ಶಿ ಎನ್.ಅರ್. ಉಮೇಶ್, ಸಹ ನಿರ್ದೇಶಕ ನಾಗೇಂದ್ರ ಮಧ್ಯಸ್ಥ, ಡಿಡಿಪಿಐ ವಾಲ್ಟರ್ ಡಿಮೆಲ್ಲೋ ಮತ್ತಿತರರು ಉಪಸ್ಥಿತರಿದ್ದರು. ಸರ್ವಶಿಕ್ಷಣ ಅಭಿಯಾನದ ಉಪಯೋಜನಾ ಸಮನ್ವಯಾಧಿಕಾರಿ ಗೀತಾ ಸ್ವಾಗತಿಸಿದರು.