ಕುಂದಾಪುರ: ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ 3644 ಫಲಾನುಭವಿಗಳ 7,94,03,512 ರೂ. ಮನ್ನಾ ಹಾಗೂ ಕುಂದಾಪುರ ಕ್ಷೇತ್ರ 2010 ಫಲಾನುಭವಿಗಳ ಒಟ್ಟು 4 ಕೋಟಿ 24 ಲಕ್ಷದ ನಲವತ್ತನಾಲ್ಕು ಸಾವಿರದ ಹತ್ತು (4,24,44,010) ಸಾಲ ಮನ್ನಾ ಗೊಳಿಸಿ ಪ್ರಮಾಣ ಪತ್ರ ನೀಡುವ ಕಾರ್ಯಕ್ರಮ ತ್ರಾಸಿಯ ಕ್ಲಾಸಿಕ್ ಸಭಾಂಗಣ ಹಾಗೂ ಮಂಗಳವಾರ ಮಧ್ಯಾಹ್ನ ಕುಂದಾಪುರ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ನಡೆಯಿತು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಸಾಲಮನ್ನಾ ಪ್ರಮಾಣಪತ್ರ ವಿತರಿಸಿದರು.
ರಾಜ್ಯದ ಬಡ ಜನರನ್ನು ಸಾಲ ಮುಕ್ತರನ್ನಾಗಿಸುವ ಉದ್ದೇಶದಿಂದ ಸರ್ಕಾರ ಬಜೆಟ್‌ನಲ್ಲಿ 1458 ಕೋಟಿ ರೂಪಾಯಿ ಸಾಲ ಮನ್ನಾ ಮಾಡುವ ತೀರ್ಮಾನ ಕೈಗೊಂಡಿದೆ. ಆ ಮೂಲಕ ಚುನಾವಣಾ ಪ್ರನಾಳಿಕೆಯಲ್ಲಿ ನೀಡಿದಂತೆ ಭರವಸೆಯನ್ನು ಈಡೇರಿಸಿದೆ. ಈಗಾಗಲೇ ಕುಂದಾಪುರ ತಾಲೂಕಿನ ಒಟ್ಟು 5654 ಮಂದಿಯ 12 ಕೋಟಿಗೂ ಅಧಿಕ ಸಾಲಮನ್ನಾವಾಗಿದ್ದು, ಈ ಪ್ರಯೋಜನ ಪಡೆದ ಫಲಾನುಭವಿಗಳ ಆರ್.ಟಿ.ಸಿ.ಯ ಋಣಭಾರದಲ್ಲಿ ಸಾಲಮುಕ್ತಗೊಳಿಸುವ ಕೆಲಸ ತಹಶೀಲ್ದಾರ್ ಮಟ್ಟದಲ್ಲಿ ಶೀಘ್ರವಾಗಬೇಕು ಎಂದರು.
ಸರ್ಕಾರ 2 ವರ್ಷದ ಅವಧಿಯಲ್ಲಿ ಜನತೆಗೆ ನೀಡಿದ 168 ಭರವಸೆಗಳಲ್ಲಿ 100 ಭರವಸೆಗಳನ್ನು ಕಾರ್ಯಗತಗೊಳಿಸಿದೆ. ಹಸಿವುಮುಕ್ತ ಕರ್ನಾಟಕವನ್ನಾಗಿಸುವ ಸದುದ್ದೇಶದಿಂದ ಅನ್ನಭಾಗ್ಯ ಯೋಜನೆಯಲ್ಲಿ ಬಿಪಿಎಲ್ ಫಲಾನುಭವಿಗಳಿಗೆ ಉಚಿತ ಅಕ್ಕಿಯನ್ನು ನೀಡಲಾಗುತ್ತಿದೆ. ಕ್ಷೀರ ಭಾಗ್ಯ ಯೋಜನೆಯಲ್ಲಿ ವಾರದ 5 ದಿನ ವಿದ್ಯಾರ್ಥಿಗಳಿಗೆ ಹಾಲು ನೀಡುವ ಮೂಲಕ ರಾಜ್ಯದ ಅಪೌಷ್ಠಿಕತೆ ತಲೆದೂರಬಾರದು ಎನ್ನುವ ನೆಲೆಯಲ್ಲಿ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಸ್ತ್ರೀ ಶಕ್ತಿ ಯೋಜನೆಯನ್ನು ಇನ್ನಷ್ಟು ಪರಿಪೂರ್ಣಗೊಳಿಸುವ ಉದ್ದೇಶದಿಂದ 5 ಸಾವಿರವಿದ್ದ ಸುತ್ತುನಿಧಿಯನ್ನು 25 ಸಾವಿರಕ್ಕೆ ಏರಿಸಲಾಗಿದೆ. 2 ಲಕ್ಷದ ತನಕ ಬಡ್ಡಿರಹಿತ ಸಾಲ ನೀಡುವ ತೀರ್ಮಾನ ತಗೆದುಕೊಂಡಿದೆ ಎಂದರು.
ಈ ಭಾಗದ ಜನರ ನೆಮ್ಮದಿಗೆಡಿಸಿದ ಕಸ್ತೂರಿ ರಂಗನ್ ವರದಿ ಭೂತಕ್ಕೆಯಾರೂ ಹೆದರಬೇಕಿಲ್ಲ. ಸಿ.ಆರ್.ಜೆಡ್ ಸಮಸ್ಯೆಯ ಬಗ್ಗೆ ರಾಜ್ಯದ ಮೂಲಕ ಕೇಂದ್ರಕ್ಕೆ ವರದಿ ಸಲ್ಲಿಸಲಾಗಿದ್ದು, ಕಾನೂನಿನ ಸಡಿಲೀಕರಣ ಮಾಡಿ ನೆರೆಯ ಗೋವಾ, ಕೇರಳದಂತೆ ವಿನಾಯತಿ ನೀಡಲು ಆಗ್ರಹಿಸಿದ್ದೇವೆ. ಡೀಮ್ಡ್ ಫಾರೆಸ್ಟ್ ಸಮಸ್ಯೆಯ ಪರಿಹಾರಕ್ಕೂ ಕ್ರಮ ಕೈಗೊಳ್ಳಲಾಗಿದೆ ಎಂದರು.
ತ್ರಾಸಿಯ ಕಾರ್ಯಕ್ರಮದಲ್ಲಿ ಸಂಕೇತಿಕವಾಗಿ ಸಾಲಮನ್ನಾದ ಪ್ರಮಾಣ ಪತ್ರ ವಿತರಿಸಲಾಯಿತು. ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಈಗಾಗಲೇ 1 ಲಕ್ಷ ಪರಿಹಾರ ಧನ ನೀಡಿದ್ದು, ಮತ್ತೆ 1 ಲಕ್ಷ ಪರಿಹಾರ ನೀಡುವುದರೊಂದಿಗೆ ಮೃತರ ಪತ್ನಿಗೆ ವಿಧವಾ ವೇತನದ ಮಂಜೂರಾತಿ ಪತ್ರ ನೀಡಲಾಯಿತು. ಕೃಷಿ ಇಲಾಖೆಯಿಂದ ಬಗರ್‌ಹುಕುಂ ಸಾಗುವಳಿ ಚೀಟಿ, ತ್ರಾಸಿ ಗ್ರಾಮಕ್ಕೆ ವಿಮಾಯೋಜನೆಯ 75೦೦೦ ರೂ.ಗಳ ವಿತರಣೆ, ಸ್ತ್ರೀ ಶಕ್ತಿ ಸಂಘಗಳಿಗೆ ಪ್ರೋತ್ಸಾಹ ಧನ, ರೈತರಿಗೆ ಉಳುಮೆ ಯಂತ್ರ ವಿತರಿಸಲಾಯಿತು.
ತ್ರಾಸಿಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಉಪಾಧ್ಯಕ್ಷ ಪ್ರಕಾಶ್ ಮೆಂಡನ್, ತಾ.ಪಂ.ಅಧ್ಯಕ್ಷ ಭಾಸ್ಕರ ಬಿಲ್ಲವ ಶುಭ ಶಂಸನೆಗೈದರು. ಜಿ.ಪಂ.ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ಜಿ.ಪಂ.ಸದಸ್ಯರಾದ ಆನಂತ ಮೊವಾಡಿ, ಇಂದಿರಾ ಶೆಟ್ಟಿ, ತಾ.ಪಂ.ಸದಸ್ಯರಾದ ಎಸ್.ರಾಜು ಪೂಜಾರಿ, ಮಂಜಯ್ಯ ಶೆಟ್ಟಿ, ರಮೇಶ ಗಾಣಿಗ ಕೊಲ್ಲೂರು, ತಹಶೀಲ್ದಾರ್ ಗಾಯತ್ರಿ ನಾಯಕ್, ಬೈಂದೂರು ವಿಶೇಷ ತಹಶೀಲ್ದಾರ್, ತ್ರಾಸಿ ಗ್ರಾ.ಪಂ.ಅಧ್ಯಕ್ಷ ವೆಂಕಟ ಪೂಜಾರಿ, ಹೊಸಾಡು ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪುರದ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾ.ಪಂ.ಅಧ್ಯಕ್ಷ ಭಾಸ್ಕರ ಬಿಲ್ಲವ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಪ್ರಕಾಶ್ ಮೆಂಡನ್, ಬೈಂದೂರು ಕ್ಷೇತ್ರದ ಶಾಸಕ ಕೆ.ಗೋಪಾಲ ಪೂಜಾರಿ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕನಗವಲ್ಲಿ, ತಾ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಆರ್.ನವೀನ್ಚಂದ್ರ ಶೆಟ್ಟಿ, ತಾ.ಪಂ.ಸದಸ್ಯರಾದ ದೀಪಕಕುಮಾರ್ ಶೆಟ್ಟಿ ಕಾಳಾವರ, ತಹಶೀಲ್ದಾರ್ ಗಾಯತ್ರಿ ನಾಯಕ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ನಾರಾಯಣ ಸ್ವಾಮಿ, ಮಲ್ಯಾಡಿ ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.