ಮಂಗಳೂರು, ಆ.5: ಲೋಕಾಸಭಾ ಸ್ಪೀಕರ್ ಕಾಂಗ್ರೆಸ್ ಸಂಸದರನ್ನು ಅಮಾನತು ಮಾಡಿರುವುದನ್ನು ಹಿಂತೆಗೆದುಕೊಳ್ಳಲು ಆಗ್ರಹಿಸಿ ಕಾಂಗ್ರೆಸ್ ನಾಯಕರ ನೇತೃತ್ವದಲ್ಲಿ ಮಂಗಳವಾರ ನಗರದ ಕಾಂಗ್ರೆಸ್ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಆರೋಗ್ಯ ಸಚಿವ ಯು.ಟಿ.ಖಾದರ್, ದೇಶದ್ರೋಹಿಗಳಿಗೆ ಸಹಾಯ ನೀಡಿದ ಕೇಂದ್ರ ಸರಕಾರದ ಸಚಿವರ ವಿರುದ್ಧ ಧ್ವನಿ ಎತ್ತಿದ ಕಾಂಗ್ರೆಸ್‌ನ 25 ಸಂಸದರನ್ನು ಅಮಾನತು ಮಾಡಿರುವುದು ದುರದೃಷ್ಟಕರ. ಪ್ರತೀ ಬಾರಿ ರೇಡಿಯೋದಲ್ಲಿ ‘ಮನ್ ಕೀ ಬಾತ್ ’ ಹೇಳುವ ಪ್ರಧಾನ ಮಂತ್ರಿಯವರು ‘ಜನ್ ಕೀ ಬಾತ್’ಗೆ ಪ್ರಾಮುಖ್ಯತೆ ನೀಡಬೇಕು. ಮೋದಿ ಸರಕಾರವು ಜನರ ಮಾತುಗಳಿಗೆ ಪ್ರಾಮು ಖ್ಯತೆ ನೀಡದೆ ಗುಜರಾತ್ ಮಾದರಿ ಸರಕಾರ ನಡೆಸಲು ಯತ್ನಿಸುತ್ತಿದೆ. ಎಂದರು.
ಕಾಶ್ಮೀರದಲ್ಲಿ ಪಿಡಿಪಿ-ಬಿಜೆಪಿ ಜಂಟಿ ಸರಕಾರವಿದ್ದರೂ ದೇಶಕ್ಕೆ ರಕ್ಷಣೆ ಇಲ್ಲವಾಗಿದೆ. ಉಗ್ರರು ನಮ್ಮ ಸೈನಿಕರನ್ನು ಹತ್ಯೆಗೈಯ್ಯುತ್ತಿದ್ದಾರೆ. ಈ ಸ್ಥಳದಲ್ಲಿ ಪಾಕಿಸ್ತಾನದ ಧ್ವಜವೂ ಹಾರಾಡುವಂತಹ ಪರಿಸ್ಥಿತಿ ಉಂಟಾಗಿದೆ. ಆದರೆ, ಕೇಂದ್ರ ಸರಕಾರ ಮಾತ್ರ ವೌನವಹಿಸಿದೆ. ಈ ಬಗ್ಗೆ ಧ್ವನಿ ಎತ್ತಲು ವಿಪಕ್ಷಗಳು ಅಗತ್ಯ. ಆಡಳಿತ ಪಕ್ಷ ಹಾಗೂ ವಿಪಕ್ಷಗಳು ಎರಡೂ ಇದ್ದರೆ ಮಾತ್ರ ವ್ಯವಸ್ಥೆ ಸರಿಯಾಗಲು ಸಾಧ್ಯ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಬಿಜೆಪಿ ಪಕ್ಷದ ಅನೇಕ ಅಕ್ರಮಗಳನ್ನು ಮಂಡಿಸಲು ಮುಂದಾಗಿದ್ದ ಕಾಂಗ್ರೆಸ್ ಸಂಸದರನ್ನು ಸ್ಪೀಕರ್ ಅವರು ಅಮಾನತು ಮಾಡಿರುವ ದಿನ ಕರಾಳ ದಿನವಾಗಿದೆ ಎಂದರು.
ಮೂಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಮಾತನಾಡಿ, ನ್ಯಾಯವಾದ ಬೇಡಿಕೆಗೆ ಸ್ಪಂದನೆ ನೀಡದೆ ಸಂಸದರನ್ನೇ ಅಮಾನತುಗೊಳಿಸಲಾಗಿದೆ. ಹಿಟ್ಲರ್ ಮಾದರಿಯ ಸರಕಾರ ನಡೆಸುತ್ತಿರುವ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಹೋರಾಟ ನಿಲ್ಲದು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಎಐಸಿಸಿ ಸದಸ್ಯ ಪಿ.ವಿ. ಮೋಹನ್, ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಕಾಂಗ್ರೆಸ್ ಮುಖಂಡರಾದ ಟಿ.ಕೆ. ಸುಧೀರ್, ಬಾಲಕೃಷ್ಣ ಶೆಟ್ಟಿ, ಕಣಚೂರು ಮೋನು, ಸದಾಶಿವ ಉಳ್ಳಾಲ, ಅಬ್ಬಾಸ್ ಅಲಿ, ನಾಗೇಂದ್ರ ಕುಮಾರ್, ವಿಶ್ವಾಸ್ ಕುಮಾರ್ ದಾಸ್, ನವೀನ್ ಡಿಸೋಜ, ರತಿಕಲಾ, ಕವಿತಾ ವಾಸು, ನಮಿತಾ ಡಿ. ರಾವ್, ಧರ್ನೇಂದ್ರ ಕುಮಾರ್, ಆಶಿತ್ ಪಿರೇರಾ, ವಿಜಯ ಕುಮಾರ್ ಸೊರಕೆ, ನಿತ್ಯಾನಂದ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಸುರೇಶ್ ಶೆಟ್ಟಿ, ನಾಸಿರ್, ರಮಾನಂದ ಪೂಜಾರಿ, ಮನುರಾಜ್, ಲಾರೆನ್ಸ್, ಸಿರಾಜ್ ಕಿನ್ಯಾ, ಜಬ್ಬಾರ್ ಬೋಳ್ಯಾರ್, ಸಂತೋಷ್ ಶೆಟ್ಟಿ ಅಸೈಗೋಳಿ, ಅಮೀರ್ ತುಂಬೆ, ನಝೀರ್ ಬಜಾಲ್, ಪದ್ಮನಾಭ ನರಿಂಗಾಣ ಮೊದಲಾದವರು ಉಪಸ್ಥಿತರಿದ್ದರು.