ಮಂಗಳೂರು,ಆಗಸ್ಟ್.05: ಆಕಾಶವಾಣಿ ಮಂಗಳೂರು ಕೇಂದ್ರವು ಶುಕ್ರವಾರ ಸಂಜೆ 5 ಗಂಟೆ 30ನಿಮಿಷದಿಂದ ಪ್ರಸಾರವಾಗುವ ಯುವವಾಣಿಯ ದಾರಿದೀಪ ಕಾರ್ಯಕ್ರಮದಲ್ಲಿ ನಿರುದ್ಯೋಗಿ ಯುವಕ ಯುವತಿಯರಿಗೆ ಹಾಗೂ ಸ್ವ ಉದ್ಯೋಗ ಅಕಾಂಕ್ಷಿಗಳಿಗೆ ಕಾರ್ಯಕ್ರಮವನ್ನು ಆರಂಭಿಸುತ್ತಿದೆ. ಇದೇ ಬರುವ ಶುಕ್ರವಾರ ಆರಂಭವಾಗುವ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಸಂದರ್ಶನದೊಂದಿಗೆ ಆರಂಭವಾಗುತ್ತದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ರುಡ್‌ಸೆಟ್ ಸಾಗಿ ಬಂದ ದಾರಿ ಹಾಗೂ ಗ್ರಾಮಾಣಾಭಿವೃದ್ಧಿಯಲ್ಲಿ ಸಂಘದ ಪಾತ್ರದ ಕುರಿತು ತಿಳಿಸಿದರು. 13ಕಂತುಗಳಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮದಲ್ಲಿ ಕೃಷಿ ಕುರಿತು ಮಾಹಿತಿ, ನರ್ಸರಿ, ಹೈನುಗಾರಿಕೆ, ಹೊಟೆಲ್ ಉದ್ಯಮ, ವಸ್ತ್ರ ವಿನ್ಯಾಸ, ಕಂಪ್ಯೂಟರ್ ತರಬೇತಿ, ಗೃಹೋಪಯೋಗಿ ವಿದ್ಯುತ್ ತರಬೇತಿ, ಸ್ಮಾರ್ಟ್ ಫೋನ್ ಹಾಗೂ ಟ್ಯಾಬ್ ರಿಪೇರಿಗಳ ಕುರಿತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ರುಡ್‌ಸೆಟ್ ಪಲಾನುಭವಿಗಳು ಹಾಗೂ ತಜ್ಞರಿಂದ ಮಾಹಿತಿ ಕಾರ್ಯಕ್ರಮ ಪ್ರಸಾರವಾಗುವುದು.
ಮುಂದಿನ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಲ್. ಹೆಚ್. ಮಂಜುನಾಥ ಅವರೊಡನೆ ಸಂದರ್ಶನ ಪ್ರಸಾರವಾಗಲಿದೆ. ಕಾರ್ಯಕ್ರಮವು ಸಂದರ್ಶನ ಹಾಗೂ ನೇರ ಫೋನ್ ಇನ್ ಕಾರ್ಯಕ್ರಮಗಳನ್ನೊಳಗೊಂಡಿದೆ. ನೇರ ಫೋನ್ ಇನ್ ಕಾರ್ಯ ಕ್ರಮವಿದ್ದಾಗ ಶೋತೃಗಳು ನೇರವಾಗಿ ಸಂಜೆ 5.30 ಗಂಟೆಯಿಂದ 2211999 ಈ ಸಂಖ್ಯೆಗೆ ಕರೆ ಮಾಡಿ ಪ್ರಶ್ನೆಯನ್ನು ಕೇಳಬಹುದು.
ಪರಊರಿನವರಿಗೆ ಎಸ್.ಟಿ.ಡಿ. ಸಂಖ್ಯೆ0824 . ಯುವಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಕಾರ್ಯಕ್ರಮ ನಿರ್ವಾಹಕ ಕೆ. ಅಶೋಕ ಅವರು ಕಾರ್ಯಕ್ರಮವನ್ನು ನಡೆಸಿಕೊಡುವರು.