ಮಂಗಳೂರು,ಆಗಸ್ಟ್.05 ಆಕಾಶವಾಣಿಯ ಉದ್ದೇಶ ‘ಬಹುಜನ ಹಿತಾಯ ಬಹುಜನ ಸುಖಾಯ’, ಜನರ ಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ನಿರಂತರ ಪ್ರಸಾರ ಮಾಡುತ್ತದೆ. ವಿಜ್ಞಾನ, ತಂತ್ರಜ್ಞಾನ, ಮನರಂಜನೆ, ಸಂಗೀತ, ಸಾಹಿತ್ಯ, ಕೃಷಿ ಅಭಿವೃದ್ದಿ ವಿಷಯಗಳ ಕುರಿತು ಸ್ಥಳೀಯ ತಜ್ಞರನ್ನು ಬಳಸಿ ಕಾರ್ಯಕ್ರಮ ನಿರ್ಮಿಸುವ ಕೆಲಸ ಆಕಾಶವಾಣಿಯು ಮಾಡುತ್ತಿದೆ ಎಂದು ಮಂಗಳೂರು ಆಕಾಶವಾಣಿಯ ನಿಲಯ ನಿರ್ದೇಶಕರಾದ ಬಿ.ವಿ. ಪದ್ಮ ನುಡಿದರು.
ಅವರು ವಿಜಯಾ ಬ್ಯಾಂಕ್ ಪ್ರವರ್ತಿತ ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಬೆಳ್ಳಿಹಬ್ಬದ ಆಚರಣೆಯ ಪ್ರಯುಕ್ತ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ರೇಡಿಯೋ ವಿತರಿಸಿ ಮಾತನಾಡಿದರು. ಅಗಸ್ಟ್ 6 ರಿಂದ ನವೆಂಬರ 3 ರತನಕ ಬೆಳಿಗ್ಗೆ 11.00ಗಂಟೆಯಿಂದ 11.30 ರವರೆಗೆ ಪ್ರತಿ ಗುರುವಾರ ಮತ್ತು ಮಂಗಳವಾರ ಮಂಗಳೂರು ಆಕಾಶವಾಣಿಯು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಇಂಗ್ಲೀಷ ಮತ್ತು ಗಣಿತ ಬಾನುಲಿ ಪಾಠವನ್ನು ಪ್ರಸಾರ ಮಾಡುತ್ತದೆ. ಇದರ ಪ್ರಯೋಜನ ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳೂ ಪಡೆಯಬೇಕು ಎಂದು ನುಡಿದರು.
ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ಆಕಾಶವಾಣಿಯ ಸಹಾಯಕ ನಿರ್ದೇಶಕರು ಡಾ. ವಸಂತಕುಮಾರ ಪೆರ್ಲ ಅವರು ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ನೀವು ಈ ಕಾರ್ಯಕ್ರಮದ ಉಪಯೋಗ ಪಡೆದುಕೊಳ್ಳಿ ಎಂದು ನುಡಿದರು. ಸಮಾರಂಬದ ಅಧ್ಯಕ್ಷ ಸ್ಥಾನ ವಹಿಸಿದ್ದ ವಿಜಯಾ ಬ್ಯಾಂಕ್‌ನ ಉಪ ಮಹಾ ಪ್ರಭಂದಕ ರಾಜಾರಾಮ ಶೆಟ್ಟಿ ಅವರು ಬ್ಯಾಂಕುಗಳು ಗ್ರಾಮೀಣಾಭಿವೃದ್ಧಿಕಗೆ ಶ್ರಮಿಸುತ್ತಿವೆ. ಶಿಕ್ಷಕ ಮತ್ತು ವಿದ್ಯಾರ್ಥಿ ಸಮುದಾಯದ ಹಿತವನ್ನು ಕಾಪಾಡುವ ಕೆಲಸ ಬ್ಯಾಂಕುಗಳು ಮೊದಲಿನಿಂದಲೂ ಮಾಡುತ್ತಿವೆ. ಇಂತಹ ಕೆಲಸ ಮಾಡುವ ಮೂಲಕ ಬ್ಯಾಂಕುಗಳು ಜನರಿಗೆ ಹತ್ತಿರವಾಗುತ್ತಿವೆ ಎಂದು ನುಡಿದರು.
ಸಮಾರಂಭದಲ್ಲಿ ಸಾರ್ವಜನಿಕ ಶಿಕ್ಞಣ ಇಲಾಖೆಯ ರಾಧಾಕೃಷ್ಣ ಭಟ್ ಹಾಗೂ ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಕೆ. ಅಶೋಕ ಅವರು ಉಪಸ್ಥಿತರಿದ್ದರು. ಮಂಗಳೂರು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ವೈಸ್ ಪ್ರಸಿಡೆಂಟ್ ಪ್ರೇಮನಾಥ ಆಳ್ವ ಅವರು ಕಾರ್ಯಕ್ರಮದ ಉದ್ದೇಶ ತಿಳಿಸಿದರು. ಕಾರ್ಯದರ್ಶಿ ಬಿ. ರಾಜೇಂದ್ರ ರೈ ಅವರು ಸ್ವಾಗತಿಸಿದರು. ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಸಪ್ಪ ಮುದೋಳ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.