ಉಳ್ಳಾಲ,ಆಗಸ್ಟ್.06 : ಸ್ಪರ್ಧಾತ್ಮಕ ಯುಗದಲ್ಲಿ ಗುಣಮಟ್ಟದ ಶಿಕ್ಷಣದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸೈಯ್ಯದ್ ಮದನಿ ಶಾಲಾ ಕಾರ್‍ಯಾಚರಿಸುತ್ತಿರುವುದು ಶ್ಲಾಘನೀಯ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದ್ದಾರೆ.
ಅವರು ಉಳ್ಳಾಲ ಹಳೇಕೋಟೆಯ ಅನುದಾನಿತ ಸಯ್ಯಿದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಅನುದಾನ ರಹಿತ ಸಯ್ಯಿದ್ ಮದನಿ ಪ್ರೌಢಶಾಲೆ ಇದರ ವತಿಯಿಂದ ಮಂಗಳವಾರ ನಡೆದ ಉಚಿತ ಸಮವಸ್ತ್ರ ವಿತರಣೆ, ಸನ್ಮಾನ ಹಾಗೂ ಕಂಪ್ಯೂಟರ್ ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸರಕಾರದಿಂದ ಗುಣಮಟ್ಟದ ಶಿಕ್ಷಣ ನೀಡಲು ಅಸಾಧ್ಯ. ಖಾಸಗಿ ಶಾಲೆಗಳು ಗುಣಮಟ್ಟ ಕಾಪಾಡುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ಮನೋಧೈರ್ಯವನ್ನು ತುಂಬಿಸುವ ಪ್ರಯತ್ನ ಮಾಡುತ್ತಿದೆ. ಇದರಿಂದ ವಿದ್ಯಾರ್ಥಿಗಳು ಉನ್ನತ ಹುದ್ದೆಯನ್ನು ಪಡೆಯಲು ಸಾಧ್ಯ. ಅಲ್ಪಸಂಖ್ಯಾತ ಬಡ ವಿದ್ಯಾರ್ಥಿಗಳ ಶಾಲಾ ಶುಲ್ಕವನ್ನು ಸರಕಾರವೇ ಪಾವತಿಸುತ್ತಿದೆ. ಕೋಮುಸಂಘರ್ಷಗಳು ಕಡಿಮೆಯಾಗಬೇಕಾದರೆ ಮಕ್ಕಳು ವಿದ್ಯಾವಂತರಾಗಬೇಕು ಅನ್ನುವ ದೃಷ್ಟಿಯಿಂದ ರಾಜ್ಯ ಸರ್ಕಾರ ಮಕ್ಕಳನ್ನು ಶಿಕ್ಷಿತರನ್ನಾಗಿಸಲು ಹೆಚ್ಚಿನ ಒಲವು ತೋರಿಸುತ್ತಿದೆ. ಶಾಲೆಯ ಅಭಿವೃದ್ಧಿಗೆ ರೂ. ೫ ಲಕ್ಷ ಅನುದಾನವನ್ನು ಮೀಸಲಿಡುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಳ್ಳಾಲ ಜಮಾಅತ್ ನ ಅಧ್ಯಕ್ಷ ಯು.ಎಸ್.ಹಂಝ ವಹಿಸಿದ್ದರು. ಉದ್ಯಮಿ ಬಾವಾ ಅಹ್ಮದ್ ಶಾಲೆಗೆ ಕಂಪ್ಯೂಟರ್ ಕೊಡುಗೆ ಮಾಡಿದರು.ಈ ವೇಳೆ ಉದ್ಯಮಿ ಮುನೀರ್ ಬಾವಾ, ಉಳ್ಳಾಲ ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟಿನ ಉಪಾಧ್ಯಕ್ಷ ಬಿ.ಜಿ.ಹನೀಫ್ , ಆಡಳಿತಾಧಿಕಾರಿ ಅಬ್ದುಲ್ ಲತೀಫ್, ಉಳ್ಳಾಲ ನಗರಸಭೆ ಮುಖ್ಯಾಧಿಕಾರಿ ರೂಪಾ.ಟಿ.ಶೆಟ್ಟಿ, ಹಳೇಕೋಟೆ ಮಸ್ಜಿದ್ ಅಲ್ ಕರೀಂ ಅಧ್ಯಕ್ಷ ಮುಹಮ್ಮದ್ ತ್ವಾಹಾ, ಇಸ್ಮಾಯಿಲ್ ಹಾಜಬ್ಬ, ನಗರಸಭೆ ಸದಸ್ಯ ಯು.ಹೆಚ್.ಫಾರೂಕ್, ಸಯ್ಯಿದ್ ಮದನಿ ಶಾಲಾ ಉಪಾಧ್ಯಕ್ಷ ಯು.ಎನ್.ಇಬ್ರಾಹಿಂ, ಸದಸ್ಯರಾದ ಅಬ್ದುಲ್ ರಝಾಕ್, ಎಂ.ಹೆಚ್.ಇಬ್ರಾಹಿಂ, ಅಲ್ತಾಫ್ ಯು.ಹೆಚ್ ರವೂಫ್, ಮನ್ಸೂರ್ ಅಹ್ಮದ್, ಮೊಹಮ್ಮದ್ ರಫೀಕ್, ಶಾಲಾಭಿವೃದ್ಧಿ ಸಮಿತಿಯ ಸಂಚಾಲಕ ಯು.ಹೆಚ್ ಮಹಮ್ಮದ್ ಉಪಸ್ಥಿತರಿದದ್ದರು.
ಶಾಲೆಗೆ ನೂತನವಾಗಿ ಕೊಡಮಾಡಿದ ಜನರೇಟರ್ ಅನ್ನು ಉಳ್ಳಾಲ ಜಮಾಅತಿನ ಅಧ್ಯಕ್ಷ ಯು.ಎಸ್.ಹಂಝ ಉದ್ಘಾಟಿಸಿದರು. ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರವನ್ನು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ವಿತರಿಸಿದರು. ಶಾಲಾ ಸಮಿತಿ ವತಿಯಿಂದ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಅವರನ್ನು ಸನ್ಮಾನಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯ ಕೆ.ಎಂ.ಕೆ ಮಂಜನಾಡಿ ಸ್ವಾಗತಿಸಿದರು. ಶಿಕ್ಷಕಿಯರಾದ ಕವಿತಾ ಹಾಗೂ ವಿನುತಾ ಕಾರ್ಯಕ್ರಮ ನಿರೂಪಿಸಿದರು. ಶಕೀಲಾ ವಂದಿಸಿದರು.