ವರದಿ : ಈಶ್ವರ ಎಂ. ಐಲ್/ಚಿತ್ರ : ದಿನೇಶ್ ಕುಲಾಲ್
ಮುಂಬಯಿ : ಬೊರಿವಲಿ ಪಶ್ಚಿಮದ ಜಯರಾಜ ನಗರದಲ್ಲಿ ದಿ. ಹರಿಯಾಳಗುತ್ತು ಶ್ರೀಧರ ಚಂದಯ್ಯ ಶೆಟ್ಟಿ ಯವರ ಮುಂದಾಳುತ್ವದಲ್ಲಿ ಸ್ಥಾಪನೆಗೊಂಡ ಶ್ರೀ ಮಹಿಷ ಮರ್ಧಿನಿ ದೇವಸ್ಥಾನಕ್ಕೆ ಆ. 6 ರಂದು ಶ್ರೀ ಕ್ಷೇತ್ರ ಒಡಿಯೂರಿನ ಒಡಯ ಪರಮಪೂಜ್ಯ ಗುರುದೇವಾನಂದ ಸ್ವಾಮೀಜಿ ಆಗಮಿಸಿ ದೇವಸ್ಥಾನದ ಪ್ರಧಾನ ಸಾನಿದ್ಯ ಶ್ರೀ ಮಹಿಷ ಮರ್ಧಿನಿಗೆ ಮಂಗಳಾರತಿ ನಡೆಸಿದರು.
ಆ ಬಳಿಕ ದೇವಸ್ಥಾನದ ಆಡಳಿತ ಮೊಕ್ತೇಸರ ಕಣಂಜಾರು ಕೊಳಕೆಬೈಲು ಪ್ರದೀಪ್ ಸಿ. ಶೆಟ್ಟಿ, ಪತ್ನಿ ಶಾಲಿನಿ ಪಿ. ಶೆಟ್ಟಿ, ಧನಿಯ ಪಿ. ಶೆಟ್ಟಿ ಮತ್ತು ಟ್ರಸ್ಟಿ ಜಯರಾಜ್ ಶ್ರೀಧರ ಶೆಟ್ಟಿಯವರು ಶ್ರೀಗಳ ಪಾದಪೂಜೆಯೊಂದಿಗೆ ಗುರುವಂದನೆ ಸಲ್ಲಿಸಿದರು.
ಶ್ರೀಗಳು ಕ್ಷ್ಶೇತ್ರದ ಗೌರವವನ್ನು ಸ್ವೀಕರಿಸಿ ಆಶೀರ್ವಚನದ ಮಾತುಗಳನ್ನು ಆಡುತ್ತಾ ಆದ್ಯಾತ್ಮಿಕ ಚಿಂತನೆಯಲ್ಲಿ ಬದುಕು ಕಟ್ಟಿದ ಶ್ರೀಧರ ಶೆಟ್ಟಿಯವರ ಕುಟುಂಬ ಈ ಪ್ರದೇಶದ ಜನರಲ್ಲಿ ಧಾರ್ಮಿಕತೆಯನ್ನು ಮೂಡಿಸುವಲ್ಲಿ ಮಹಿಷ ಮರ್ಧಿನಿ ದೇವಸ್ಥಾನ ಆಗ್ರ ಪಂಕ್ತಿಗೆ ಸೇರಿಕೊಂಡಿದೆ. ತುಳು ನಾಡಿನ ಜನ ಸಾಹಸಿಗರು. ಸಮುದ್ರದ ಅಲೆಗೂ ಎದೆ ಹೊಡ್ಡುವವರು. ತುಳುವರು ಪ್ರೀತಿ ವಿಶ್ವಾಸದಿಂದ ಎಲ್ಲಾ ಕಾರ್ಯವನ್ನು ಕಾರ್ಯರೂಪಗೊಳಿಸುತ್ತಾರೆ. ಸಮಾಜದಲ್ಲಿ ಮೂರು ವರ್ಗದ ಜನರಿರುತ್ತಾರೆ. ಅಧಮರು, ಮಾಧ್ಯಮರು, ಉತ್ತಮರು. ಈ ಕ್ಷ್ಶೇತ್ರದ ಸನ್ನಿಧಿಯಲ್ಲಿರುವವರು ಉತ್ತಮರು. ಒಳ್ಳೆಯ ಕಾರ್ಯ ನಡೆಸುವುದು, ಇನ್ನೊಬ್ಬರ ಬದುಕಿನ ಬಗ್ಗೆ ಚಿಂತಿಸುವುದು ಅಂತವರ ಬದುಕು ಸಾರ್ಥಕ. ತಾಯಿ ಅಪೂರ್ವ ಶಕ್ತಿಯ ಮಾತೆ. ಅವಳಲ್ಲಿ ಎಲ್ಲಾ ಸದ್ಗುಣಗಳು ತುಂಬಿಕೊಂಡಿರುತ್ತದೆ. ಸನಾತನ ಧರ್ಮದ ತಿಳುವಳಿಕೆ ನಮ್ಮಲ್ಲಿದ್ದಾಗ ನಮ್ಮ ಬದುಕಲ್ಲಿ ತಪ್ಪು ಕಾರ್ಯುಗಳು ನಡೆಯಲು ಅಸಾಧ್ಯ. ಮಾತಾ ಪಿತರ ಸೇವೆಯೇ ಶ್ರೇಷ್ಥ. ಬಾಷೆ ಸಂಸ್ಕೃತಿಯ ಮೂಲವಾಗಿದೆ. ಇಂದಿನ ಯುವ ಜನಾಂಗ ಆಂಗ್ಲ ಬಾಷೆಯನ್ನು ನೆಚ್ಚಿಕೊಂಡರೂ ಅದರ ಸಂಸ್ಕೃತಿಯ ಭಿನ್ನವಾಗಿದ್ದು ವ್ಯತ್ಯಾಸವನ್ನು ಅರಿತಿರಬೇಕು. ಸತ್ಕರ್ಮದಲ್ಲಿ ದೇವರಿದ್ದಾರೆ. ಸತ್ಕರ್ಮದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಸತ್ಕಾರ್ಯದಲ್ಲಿ ತೊಡಗಿಕೊಂಡಾಗ ಬದುಕು ಪಾವನ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಾದ್ವಿ ಮಾತಾತಾನಂದಮಯಿಯವರು ಭಕ್ತರನ್ನು ಹರಸಿದರು.
ಬೊರಿವಲಿ ತುಳು ಸಂಘದ ಅಧ್ಯಕ್ಷ, ಒಡಿಯೂರು ಕ್ಷೇತ್ರದ ಮಹಾರಾಷ್ಟ್ರ ಘಟಕದ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟಿ ಜಯರಾಜ್ ಶ್ರೀಧರ ಶೆಟ್ಟಿ ಪತ್ನಿ ಡಾ. ಸಪ್ನ ಜೆ. ಶೆಟ್ಟಿ, ಕಲ್ಲಮುಂಡ್ಕೂರು ಹರಿಯಾಳಗುತ್ತು ಜಯಂತ್ ಶ್ರೀಧರ ಶೆಟ್ಟಿ, ಜಯ ಸಿ. ಶೆಟ್ಟಿ, ವಿರಾರ್ ಶಂಕರ್ ಶೆಟ್ಟಿ, ಬಿ. ಎಸ್. ಕುರ್ಕಾಲ್, ಅಶೋಕ್ ಶೆಟ್ಟಿ ಎಲ್ ಐ ಸಿ, ವಿಶ್ವನಾಥ ಶೆಟ್ಟಿ ಕವಿಶ, ಬಾಲಕೃಷ್ಣ ರೈ, ಮೋಹನ್ ಹೆಗ್ಡೆ, ವಾಸು ಪುತ್ರನ್, ರಜಿತ್ ಸುವರ್ಣ, ಸುಜಾತ ಅಣ್ಣಪ್ಪ ಶೆಟ್ಟಿ, ಕೇಶವ ಪುತ್ರನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಮಹಿಷ ಮರ್ಧಿನಿ ಭಜನಾ ಮಂಡಳಿಯ ಸದಸ್ಯರಿಂದ ಭಜನೆ ನಡೆಯಿತು
ದೇವಸ್ಥಾನದ ಪ್ರಧಾನ ಅರ್ಚಕ ಗಿರೀಶ್ ಆಚಾರ್ಯ ಶ್ರೀದೇವರಿಗೆ ವಿಶೇಷ ಆರತಿ ನಡೆಸಿದರು. ಅಪಾರ ಸಂಖ್ಯೆಯಲ್ಲಿ ಗುರುಭಕ್ತರು ಪಾಲ್ಗೊಂಡಿದ್ದರು.