ಮಂಗಳೂರು: ಭೂಮಾಲಕರ ದಬ್ಬಾಳಿಕೆಗೆ ಒಳಗಾಗಿ ತನ್ನ ಕೈಯನ್ನೇ ಕಳೆದುಕೊಂಡು ನಗರದ ಸರಕಾರಿ ವೆನ್‌ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಂದರ ಮಲೆಕುಡಿಯರನ್ನು ಗುರುವಾರ ಆರೋಗ್ಯ ಸಚಿವ ಯು.ಟಿ.ಖಾದರ್ ಬೇಟಿಯಾಗಿ ಆರೋಗ್ಯ ವಿಚಾರಿಸಿದರು.
ಕೆಲವು ದಿನಗಳ ಹಿಂದೆ ಬೆಳ್ತಂಗಡಿಯಲ್ಲಿ ಉಂಟಾದ ಜಾಗದ ವಿವಾದ ಸಂದರ್ಭ ನಡೆದ ನಡೆದ ಜಗಳದಲ್ಲಿ ನೆರೆಮನೆಯ ಗೋಪಾಲ ಗೌಡ ಎಂಬಾತ ಸುಂದರ ಮಲೆಕುಡಿಯರ ಮೇಲೆ ದಾಳಿ ನಡೆಸಿ, ಕಳೆ ಕೊಚ್ಚುವ ಯಂತ್ರದಿಂದ ಸುಂದರ ಮಲೆಕುಡಿಯರ ಕೈಯನ್ನೇ ಕತ್ತರಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಈ ಸಂದರ್ಭ ತೀವ್ರವಾಗಿ ಗಾಯಗೊಂಡ ಸುಂದರ ಮಲೆಕುಡಿಯರನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆರೋಗ್ಯ ಸಚಿವ ಯು.ಟಿ ಖಾದರ್ ಅವರು ಇಂದು ಸುಂದರ ಮಲೆಕುಡಿಯರನ್ನು ಭೇಟಿ ಮಾಡಿದ ಸಂದರ್ಭ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಗಳನ್ನು ಕಲೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು ಸುಂದರ ಮಲೆಕುಡಿಯರ ಆರೋಗ್ಯದ ಮಾಹಿತಿ ಹಾಗೂ ಪ್ರಕರಣದ ತನಿಖೆಯ ವಿಸ್ತಾರ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸುವುದಾಗಿ ಹೇಳಿದ್ದಾರೆ.
ಸಚಿವರ ಜೊತೆ ದ.ಕ.ಜಿಲ್ಲಾ ಎಸ್.ಪಿ ಡಾ.ಶರಣಪ್ಪ ಅವರು ಅಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ವೈದ್ಯರಲ್ಲಿ ಸುಂದರ ಮಲೆಕುಡಿಯರ ಆರೋಗ್ಯದ ಬಗ್ಗೆ ವಿಚಾರಣೆ ನಡೆಸಿದ್ದಾರೆ.