ಮಂಗಳೂರು,ಆಗಸ್ಟ್,07: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಆಯುಷ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ವತಿಯಿಂದ “ಜಾಗತಿಕ ಸ್ತನ್ಯಪಾನ ಸಪ್ತಾಹ” ಕಾರ್ಯಕ್ರಮ ಗುರುವಾರ ನಗರದ ಬೋಳೂರು ಅಂಗನವಾಡಿ ಕೇಂದ್ರ, ಅಕ್ಷರ ಸದನದಲ್ಲಿ ಜರಗಿತು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ದೇವಾದಾಸ್ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು,ಭಾರತೀಯ ವೈದ್ಯ ಪದ್ದತಿಯಿಂದ ಆಯುರ್ವೆದದಲ್ಲಿ ಸ್ತನ್ಯಪಾನಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಮಗು ಆರೋಗ್ಯವಾಗಿ ಬೆಳೆದು ರೋಗ ನಿರೋಧಕ ಶಕ್ತಿ ಹೊಂದುವಂತಾಗಲು ಸಮರ್ಪಕ ರೀತಿಯಲ್ಲಿ ಸ್ತನ್ಯಪಾನ ಮಾಡಿಸುವುದು ಅತ್ಯಗತ್ಯ ಎಂದರು.
ಎದೆಹಾಲಿನ ಪ್ರಮಾಣ ಕಡಿಮೆಯದಲ್ಲಿ ಪ್ರಕೃತಿದತ್ತವಾಗಿ ವಿವಿಧ ರೀತಿಯ ಗಿಡಮೂಲಿಕೆಗಳ ಪ್ರಯೋಜನವನ್ನು ಪಡೆಯುವಂತೆ ಅವರು ಕರೆಯಿತ್ತರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾತೆಯರಿಗೆ ಹಾಗೂ ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಮೂಡಿಸುವ ಮಾಹಿತಿ ಕೈಪಿಡಿಯನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಜ್ಯೋತಿ ಅವರು ಮಾತನಾಡಿ, ” ಸ್ತನ್ಯಪಾನ ಮಗುವಿನ ಹಕ್ಕು , ಹುಟ್ಟಿದ ಅರ್ಥಗಂಟೆಯೊಳಗೆ ಮಗುವಿಗೆ ಹಾಲುಣಿಸಬೇಕು. ಸರಿಯಾದ ರೀತಿಯಲ್ಲಿ ಹಾಲುಣಿಸದ ಕಾರಣ ಶಿಶುಮರಣ ಹಾಗೂ ಅಪೌಷ್ಠಿಕತೆಗಳ ಪ್ರಮಾಣ ಹೆಚ್ಚಾಗಿ ಕಂಡು ಬರುತ್ತದೆ, ಅದರಲ್ಲೂ ವಿಶೇಷವಾಗಿ ಕೆಲಸಕ್ಕೆ ಹೋಗುವ ತಾಯಂದಿರ ಮಕ್ಕಳು ಸ್ತನ್ಯಪಾನದ ಹಕ್ಕಿನಿಂದ ವಂಚಿತರಾಗುವುದು ಕಂಡುಬರುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಗುಲಾಬಿ ಅವರು ಮಾತನಾಡಿ, ” ಮಗು ಮನೆಯ ದೀಪ , ಅಪೌಷ್ಠಿಕತೆ ಶಾಪ” ಹಾಗಾಗಿ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಸ್ತಾನ್ಯಪಾನ ಮಾಡಿಸುವಂತೆ ಕರೆಯಿತ್ತರು.
ಶಿಶು ಅಭಿವೃದ್ಧಿ ಮೇಲ್ವಿಚಾರಕಿ ಶ್ರೀಮತಿ ಸುಧಾ ಕೆ ಸ್ವಾಗತಿಸಿದರು. ಶ್ರೀಮತಿ ಸವಿತಾ ವಂದಿಸಿದರು. ಅಂಗನವಾಡಿ ಕಾರ್ಯದರ್ಶಿ ಶ್ರೀಮತಿ ಕುಮುದಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು, ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳ ತಾಯಂದಿರು ಹೆಚ್ಚಿನ ಸಂಖೆಯಲ್ಲಿ ಭಾಗವಹಿಸಿದ್ದರು.