ಮಂಗಳೂರು, ಆ.8: ಕಾರ್ಪೊರೇಶನ್ ಬ್ಯಾಂಕ್ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ 204.26 ಕೋ.ರೂ.ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಹಾಗೂ ಆಡಳಿತ ನಿರ್ದೇ ಶಕ ಎಸ್.ಆರ್.ಬನ್ಸಾಲ್ ತಿಳಿಸಿದ್ದಾರೆ.
ಶುಕ್ರವಾರ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕಾರ್ಪೊರೇಶನ್ ಬ್ಯಾಂಕ್ 2015ರ ಜೂನ್ ಅಂತ್ಯದೊಳಗೆ 808.50 ಕೋ.ರೂ. ಲಾಭಗಳಿಸಿದ್ದರೂ ನಿವ್ವಳ ಲಾಭದಲ್ಲಿ ಕಳೆದ ವರ್ಷಕ್ಕಿಂತ 11.75ಕೋ. ರೂ. ಇಳಿಕೆಯಾಗಿದೆ. ಬ್ಯಾಂಕ್ ತ್ರೈಮಾಸಿಕ ಅಂತ್ಯದ ವೇಳೆಗೆ 332,427 ಕೋ.ರೂ. ಆರ್ಥಿಕ ವ್ಯವಹಾರ ನಡೆಸಿದೆ. ಇದರೊಂದಿಗೆ ಈ ವರ್ಷ ಹಿಂದಿನ ವರ್ಷಕ್ಕಿಂತ 1.97ಶೇ. ಆರ್ಥಿಕ ವ್ಯವಹಾರದಲ್ಲಿ ಏರಿಕೆಯಾಗಿದೆ. ಉಳಿತಾಯ ಖಾತೆಯ ಠೇವಣಿ 23,847 ಕೋ.ರೂ. ತ್ರೈಮಾಸಿಕ ಅಂತ್ಯದಲ್ಲಿ 26,321ಕೋ.ರೂ.ಗೆ ಏರಿಕೆಯಾಗಿದೆ ಎಂದು ಬನ್ಸಾಲ್ ತಿಳಿಸಿದರು. 140,325 ಕೋ.ರೂ. ಸಾಲ ನೀಡಲಾಗಿದೆ. ಬ್ಯಾಂಕ್ ಠೇವಣಿ 192,102 ಕೋ. ರೂ.ಗೆ ಏರಿಕೆಯಾಗಿದೆ ಎಂದು ಬನ್ಸಾಲ್ ತಿಳಿಸಿದರು.
ಬ್ಯಾಂಕ್‌ನ ಶೇರು ವೌಲ್ಯ 127.60 ರೂ.ಗೆ ಏರಿಕೆಯಾಗಿದೆ.ಕಳೆದ ಮೂರು ತಿಂಗಳಲ್ಲಿ ಬ್ಯಾಂಕ್‌ನ ವತಿಯಿಂದ ಹೊಸದಾಗಿ 50 ಎಟಿಎಂಗಳನ್ನು ದೇಶದಲ್ಲಿ ಸ್ಥಾಪಿಸಲಾಗಿದೆ. ಇದರೊಂದಿಗೆ ಕಾರ್ಪೊರೇಶನ್ ಬ್ಯಾಂಕ್ ಎಟಿಎಂಗಳ ಸಂಖ್ಯೆ 2,983ಕ್ಕೆ ಏರಿಕೆಯಾಗಿದೆ. 21ಲಕ್ಷ ಗ್ರಾಹಕರಿಗೆ ಎಸ್ಸೆಮ್ಮೆಸ್ ಮೂಲಕ ಖಾತೆಯ ಮಾಹಿತಿ ನೀಡು ಸೌಲಭ್ಯ ಚಾಲನೆಯಲ್ಲಿದೆ. ದೇಶದ 4,685 ಪ್ರದೇಶಗಳಲ್ಲಿ ಕಾರ್ಪ್ ಬ್ಯಾಂಕ್ ಶಾಖೆಗಳಿಲ್ಲದೆ ಬ್ಯಾಂಕಿಂಗ್ ಸೇವೆಯನ್ನು ನೀಡುತ್ತಿವೆ. ಪ್ರಧಾನಮಂತ್ರಿ ಜನಧನ್ ಯೋಜನೆಯ ಮೂಲಕ ದೇಶದ 2,291 ಹಳ್ಳಿಗಳಲ್ಲಿ ಕಾರ್ಪ್‌ಬ್ಯಾಂಕ್ ವತಿಯಿಂದ 22,99,720 ಖಾತೆಗಳನ್ನು ತೆರೆಯಲಾಗಿದೆ. ಈ ಖಾತೆಗಳ ಮೂಲಕ 535.78 ಕೋ.ರೂ. ಸಂಗ್ರಹವಾಗಿದೆ ಎಂದು ಬನ್ಸಾಲ್ ತಿಳಿಸಿದರು.
ರೈತರಿಗೆ ಆರ್ಥಿಕ ನೆರವು ನೀಡಲು ಬ್ಯಾಂಕ್ ಸದಾಸಿದ್ಧ :
ಬ್ಯಾಂಕ್ ರೈತರ ಕೃಷಿ ಚಟುವಟಿಕೆಗೆ ಹಾಗೂ ಅಥವಾ ಖಾಸಗಿ ಲೇವಾದೇವಿದಾರರಿಂದ ಸಾಲ ಪಡೆದು ಸಂಕಷ್ಟದಲ್ಲಿದ್ದರೂ ಅಂತಹ ರೈತರಿಗೆ ಆರ್ಥಿಕ ನೆರವು ನೀಡಲು ಬ್ಯಾಂಕ್ ಸದಾ ಸಿದ್ಧವಾಗಿದೆ ಎಂದು ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಕೆ.ಶ್ರೀವಾತ್ಸವ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬ್ಯಾಂಕ್‌ನ ಮಹಾಪ್ರಬಂಧಕ ಆರ್. ನಟರಾಜನ್ ಉಪಸ್ಥಿತರಿದ್ದರು.