ಸುರತ್ಕಲ್: ಎರಡು ಬೈಕ್ ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟು, ಮತ್ತೋರ್ವ ಯುವಕ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ತಡರಾತ್ರಿ ಸುರತ್ಕಲ್ -ಕಾಟಿಪಳ್ಳದ ಎಂಆರ್ ಪಿಎಲ್ ಸಮೀಪ ನಡೆದಿದೆ.
ಅಪಘಾತದಲ್ಲಿ ಮೃತ ಪಟ್ಟ ಯುವಕನನ್ನು ಕೃಷ್ಣಾಪುರ ನಿವಾಸಿ ಪ್ರತೀಕ್ (27) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನು ಕೃಷ್ಣಾಪುರ ನಿವಾಸಿ ನವೀನ್ ಎಂದು ಹೆಸರಿಸಲಾಗಿದೆ.
ನವೀನ್ ಎಂಬಾತ ಎಂಆರ್ ಪಿಎಲ್ ಸಮೀಪ ತನ್ನ ಬೈಕ್ ನಲ್ಲಿ ಬರುತ್ತಿದ್ದಾಗ ಮತ್ತೊಂದು ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರತೀಕ್ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದು ಮುಂದಿನಿಂದ ಹೋಗುತ್ತಿದ್ದ ವಾಹನವನ್ನು ಓವರ್ ಟೇಕ್ ಭರದಲ್ಲಿ ನವೀನ್ ಬೈಕ್ ಗೆ ಡಿಕ್ಕಿಹೊಡೆದಿದ್ದಾನೆ ಎನ್ನಲಾಗಿದೆ.
ಈ ಸಂದರ್ಭ ಗಂಭೀರವಾಗಿ ಗಾಯಗೊಂಡ ಪ್ರತೀಕ್ನ ದೇಹದಿಂದ ಅತಿಯಾಗಿ ರಕ್ತಸ್ತ್ರಾವ ಉಂಟಾಗಿ ಮೃತ ಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಗಾಯಗೊಂಡ ನವೀನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಬೈಕ್ ಸಂಪೂರ್ಣ ಜಖಂಗೊಂಡಿದೆ,
ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ.